UN networks
ಉಳ್ಳಾಲ: ಉಳ್ಳಾಲ ನಗರಸಭೆಯಲ್ಲಿ ಕಳೆದ ಎರಡೂವರೆ ವರ್ಷದಿಂದ ಬಹುಮತವಿಲ್ಲದ ಕಾಂಗ್ರೆಸ್ ಪಕ್ಷ ದುರಾಡಳಿತ ಮತ್ತು ಅವ್ಯವಹಾರಗಳಿಗೆ ಪ್ರಸಿದ್ಧಿಯನ್ನು ಪಡೆದಿದ್ದು, ದೇಶದಲ್ಲಿ ಮತ್ತು ರಾಜ್ಯದಲ್ಲಿ ಬದ್ಧ ವೈರಿಯಾಗಿರುವ ಬಿಜೆಪಿ ಉಳ್ಳಾಲ ನಗರಸಭೆಯಲ್ಲಿ ಮಾತ್ರ ಕಾಂಗ್ರೆಸ್ನೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಕಾಂಗ್ರೆಸ್ ಆಡಳಿತದ ಅವ್ಯವಹಾರಕ್ಕೆ ಬೆಂಬಲ ನೀಡುತ್ತಿದೆ ಎಂದು ಜಾತ್ಯಾತೀತ ಜನತಾದಳದ ರಾಜ್ಯ ವಕ್ತಾರ ಹಾಗೂ ಉಳ್ಳಾಲ ನಗರಸಭೆಯ ಸದಸ್ಯ ದಿನಕರ ಉಳ್ಳಾಲ್ ಆರೋಪಿಸಿದ್ದಾರೆ.
ತೊಕ್ಕೊಟ್ಟು ಸೇವಾ ಸೌಧದಲ್ಲಿರುವ ಉಳ್ಳಾಲ ಪ್ರೆಸ್ಕ್ಲಬ್ನಲ್ಲಿ ನಡದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಕಳೆದ ಎರಡೂವರೆ ವರ್ಷದಲ್ಲಿ ಮೂರು ಬಾರಿ ಬಜೆಟ್ ಮಂಡನೆ ಮಾಡಿದರೂ ಕುಡಿಯುವ ನೀರು, ಚರಂಡಿ, ರಸ್ತೆ, ದಾರಿದೀಪ, ಘನತ್ಯಾಜ್ಯದ ಬಗ್ಗ ಯಾವುದೇ ಪರಿಣಾಮಕಾರಿ ಕೆಲಸ ಆಗಿಲ್ಲ. ಬಹುಮತವಿಲ್ಲದಿದ್ದರೂ ಬಿಜೆಪಿಯವರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಸ್ಥಾಯಿ ಸಮಿತಿ ಆಯ್ಕೆ ಸಂದರ್ಭದಲ್ಲಿ ಬಿಜೆಪಿ ಸದಸ್ಯರನ್ನು ತಟಸ್ಥರಾಗುವಂತೆ ಮಾಡಿ ಕಾನೂನಿಗೆ ವಿರುದ್ಧವಾಗಿ ಕಾಂಗ್ರೆಸ್ ಆಯ್ಕೆ ಪ್ರಕ್ರಿಯೆ ನಡೆಸಿದ್ದು, ಇದೀಗ ಜನವಿರೋ„ ಬಡ ಜನರಿಗೆ ಪ್ರಯೋಜನವಲ್ಲದ ಬಜೆಟ್ ಮಂಡನೆ ಮಾಡಿದ್ದು, ಇಲ್ಲಿಯೂ ಬಿಜೆಪಿ ಸದಸ್ಯರು ತಟಸ್ಥರಾಗಿ ಕಾಂಗ್ರೆಸ್ಗೆ ಬೆಂಬಲ ನೀಡಿದ್ದಾರೆ. ಜಾತ್ಯಾತೀತ ಜನತಾದಳದ ಸದಸ್ಯರು ಪ್ರತೀಸಲ ಆಡಳಿತದ ಲೋಪದೋಷಗಳನ್ನು ಸಾರ್ವಜನಿಕವಾಗಿ ಎತ್ತಿಹಿಡಿದು ಬಡಜನರ ಮೂಲಭೂತ ಸೌಕರ್ಯದ ಬಗ್ಗೆ ಮಾತನಾಡುವಾಗ ಬಿಜೆಪಿ ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿ ಕಾಂಗ್ರೆಸ್ಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿಯ ಒಳ ಒಪ್ಪಂದದಿಂದ ಇಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಲವಾಗಿದ್ದು, ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಂತೆ ಆಡಳಿತ ನಡೆಸುತ್ತಿದೆ ಎಂದು ಆರೋಪಿಸಿದರು.
ನಗರಸಭಾ ಸದಸ್ಯ ಖಲೀಲ್ ಮಾತನಾಡಿ ಕಳೆದ ಮೂರು ಅವ„ಯಲ್ಲಿ ಬಜೆಟ್ನಲ್ಲಿ ಪ್ರತೀ ಸದಸ್ಯರಿಗೆ ಆನುದಾನ ಬಿಡುಗಡೆ ಮಾಡಿದರೂ 6 ವಾರ್ಡ್ಗಳಲ್ಲಿ ಕಾಮಗಾರಿ ನಡೆದಿಲ್ಲ. ಟೆಂಡರ್ ಕರೆಯದೆ ಕಾಮಗಾರಿ ನಡೆಸಿ ಸುಮಾರು 4 ಕೋಟಿಗೂ ಹೆಚ್ಚು ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡದೆ, ಇದೀಗ ಉಳಿದ ವಾರ್ಡ್ಗಳ ಕಾಮಗಾರಿ ನಡೆಸಲು ಯಾರೂ ಮುಂದೆ ಬರುತ್ತಿಲ್ಲ. ಉಳ್ಳಾಲದಲ್ಲಿ ಸರಿಯಾದ ತೆರಿಗೆ ಸಂಗ್ರಹ ಮಾಡುವಲ್ಲಿ ಅ„ಕಾರಿಗಳು ವಿಫಲರಾಗಿದ್ದು, ಅಂಗಡಿ ಮಾಲಕರು ತೆರಿಗೆ ನೀಡದಿದ್ದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದರು.
ಸದಸ್ಯ ಅಬ್ದುಲ್ ಜಬ್ಬಾರ್ ಮಾತನಾಡಿ ನಗರಸಭೆಯಲ್ಲಿ ಲಿಖಿತವಾಗಿ ಕೆಲವೊಂದು ಮಾಹಿತಿಗಳನ್ನು ಕೇಳಿದರೂ ಅ„ಕಾರಿಗಳು ನೀಡುತ್ತಿಲ್ಲ. ಅಭಿವೃದ್ಧಿಗೆ ಸಂಬಂಧಪಟ್ಟ ವಿಚಾರದಲ್ಲಿ ಚರ್ಚೆ ನಡೆಸಿದರೂ ಆಡಳಿತದಲ್ಲಿರುವವರು ನುಣುಚಿಕೊಳ್ಳುವುದರಿಂದ ಸರಿಯಾದ ಉತ್ತರ ನೀಡದೆ ಇದ್ದಾಗ ಸಾಮಾನ್ಯ ಸಭೆಯಲ್ಲಿ ಗೊಂದಲಗಳು ಹೆಚ್ಚಾಗಲು ಕಾರಣವಾಗಿದ್ದು, ಆಡಳಿತ ಪಕ್ಷದ ಸದಸ್ಯರೇ ಸಭೆಯಲ್ಲಿ ಪ್ರಶ್ನೆ ಎತ್ತಿ ತರಾಟೆಗೆ ತೆಗೆದುಕೊಳ್ಳುತ್ತಿರುವುದು ಆಡಳಿತ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸದಸ್ಯ ಅಬ್ದುಲ್ ಬಶೀರ್ ಉಪಸ್ಥಿತರಿದ್ದರು.


