UN networks
ಉಳ್ಳಾಲ: ತಾಲೂಕು ಕೋಟೆಕಾರು ಗ್ರಾಮದ ಸರ್ವೆ ನಂಬ್ರ 301/3 ರಲ್ಲಿನ 2 ಎಕ್ರೆ ಜಮೀನನ್ನು ಕ್ರೀಡಾಂಗಣ, ವಾಕಿಂಗ್ ಟ್ರಾಕ್ ಹಾಗೂ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಕೋಟೆಕಾರು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಹೆಸರಿಗೆ ಕರ್ನಾಟಕ ಭೂಕಂದಾಯ ಕಾಯಿದೆ 1964ರ ಕಲಂ 71 ರನ್ವಯ ಕಾಯ್ದಿರಿಸಿ ಎಂದು ದ.ಕ ಜಿಲ್ಲಾಧಿಕಾರಿ ರವಿ ಕುಮಾರ್ ಆದೇಶಿಸಿದ್ದಾರೆ. ಬಗಂಬಿಲದ ಈ ಪ್ರದೇಶದಲ್ಲಿ ಅಕ್ರಮವಾಗಿ ಮರಗಳನ್ನು ಕಡಿದು ಮಾರಾಟ ಮಾಡುವ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದ್ದು, ಮಾಧ್ಯಮಗಳಲ್ಲಿ ಸುದ್ಧಿ ಪ್ರಕಟವಾಗಿತ್ತು.
2022ರ ಡಿ.9 ರಂದು ಕೋಟೆಕಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕ್ರೀಡಾ ಇಲಾಖೆಗೆ ಸರಕಾರಿ ಭೂಮಿಯನ್ನು ಕಾಯ್ದಿರಿಸುವಂತೆ ಪತ್ರ ಬರೆದಿದ್ದರು. ಅದರಂತೆ ಜ.1 ಕ್ಕೆ ಆದೇಶವನ್ನು ಜಿಲ್ಲಾಧಿಕಾರಿ ಹೊರಡಿಸಿದ್ದಾರೆ. ಕೊಟ್ಟಿರುವ ಆದೇಶದಲ್ಲಿ ಕೆಲವು ಷರತ್ತುಗಳನ್ನು ವಿಧಿಸಲಾಗಿದ್ದು, ಜಮೀನು ಕಾದಿರಿಸಿದ ಆದೇಶ ಜಮೀನಿನ ಅಂತಿಮ ಸರ್ವೆ ಅಳತೆಗೆ ಒಳಪಟ್ಟಿದೆ, ಜಮೀನನ್ನು ಹೇಳಲಾದ ಉದ್ದೇಶಕ್ಕೆ ಮಾತ್ರ ಉಪಯೋಗಿಸಬೇಕಿದೆ, ಪರಭಾರೆ ಮಾಡಬಾರದು, ವಾಣಿಜ್ಯ ಉದ್ದೇಶಕ್ಕೆ ಬಳಸಲು ಅವಕಾಶವಿಲ್ಲ, ಅತಿಕ್ರಮಣಕ್ಕೆ ಎಡೆಮಾಡಿಕೊಡಬಾರದು, ಗಿಡ,ಮರ ಮಟ್ಟುಗಳಿದ್ದಲ್ಲಿ ಅವುಗಳನ್ನು ಅರಣ್ಯ ಇಲಾಖೆಯ ಮುಖಾಂತರ ವಿಲೇಗೊಳಿಸಬೇಕು, ನ್ಯಾಯಾಲಯ ಹೊರಡಿಸುವ ತೀರ್ಮಾನಕ್ಕೆ ಬದ್ದವಾಗಿರಬೇಕು ಅನ್ನುವುದನ್ನು ವಿಧಿಸಿದ್ದಾರೆ.
ಬಗಂಬಿಲದ ಇದೇ ಪ್ರದೇಶದಲ್ಲಿ ಒಟ್ಟು 5.30 ಸರಕಾರಿ ಜಮೀನಿದ್ದು, ಇನ್ನುಳಿದ 3.30 ಎಕರೆ ಜಮೀನನ್ನು ಅತಿಕ್ರಮಣ ನಡೆಸಲು ಖಾಸಗಿಯವರು ಹುನ್ನಾರ ನಡೆಸುತ್ತಿದ್ದು, ಅಲ್ಲದೆ ಜಾಗದಲ್ಲಿರುವ ಮರಗಳನ್ನು ಕಡಿದು ಸಾಗಿಸಲು ಯತ್ನಿಸಲಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂಬ ಆಗ್ರಹವೂ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.


