UN NEWS NETWORKS
ಉಳ್ಳಾಲ: ಪ್ರಥಮ ಚಿಕಿತ್ಸೆ, ಪ್ರಕೃತಿ ವಿಕೋಪ ನಿರ್ವಹಣೆಯಲ್ಲಿ ರೆಡ್ ಕ್ರಾಸ್ ಸಂಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದರ ಘಟಕವನ್ನು ಕಣಚೂರು ನರ್ಸಿಂಗ್ ಸಂಸ್ಥೆ ಆರಂಭಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸುವುದರ ಜೊತೆಗೆ ಆಪತ್ತು ಸಂದರ್ಭ ಜೀವ ಉಳಿಸುವ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಉತ್ತಮ ವೇದಿಕೆಯನ್ನು ಕಲ್ಪಿಸಿದೆ ಎಂದು ಇಂಡಿಯನ್ ಅಸೋಸಿಯೇಷನ್ ಆಫ್ ಫಿಸಿಯೋಥೆರಪಿ ಇದರ ಅಧ್ಯಕ್ಷ ಡಾ.ಇಫ್ತಿಕರ್ ಆಲಿ ಹೇಳಿದರು.


ಕಣಚೂರು ನರ್ಸಿಂಗ್ ಕಾಲೇಜು ಇದರ ರೆಡ್ ಕ್ರಾಸ್ ಘಟಕದ ಉದ್ಘಾಟನೆ ನಾಟೆಕಲ್ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಇಂದು ನಡೆಯಿತು.
ಈ ವೇಳೆ ದ.ಕ ಜಿಲ್ಲಾ ಯುವ ರೆಡ್ ಕ್ರಾಸ್ ನಿರ್ದೇಶಕ ಸಚೇತ್ ಸುವರ್ಣ ಮಾತನಾಡಿ, ಜಗತ್ತಿನಾದ್ಯಂತ ಮಾನವೀಯತೆಯನ್ನು ಎತ್ತಿಹಿಡಿದ ರೆಡ್ ಕ್ರಾಸ್ ಸಂಸ್ಥೆಯಲ್ಲಿ ಯುವಪೀಳಿಗೆಯನ್ನು ತೊಡಗಿಸಿಕೊಳ್ಳಲು ಕಣಚೂರು ನೀಡಿದ ಅವಕಾಶ ಶ್ಲಾಘನೀಯ. ಉನ್ನತ ವ್ಯಾಸಾಂಗ ನೀಡುತ್ತಿರುವ ಸಂಸ್ಥೆಗಳು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಜನರಿಗೆ ಹೆಚ್ಚಿನ ಅನುಕೂಲ ಲಭಿಸಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಣಚೂರು ಇಸ್ಲಾಮಿಕ್ ಎಜ್ಯುಕೇಷನ್ ಟ್ರಸ್ಟಿನ ಅಧ್ಯಕ್ಷ ಯು.ಕೆ.ಮೋನು ಮಾತನಾಡಿ, ನರ್ಸಿಂಗ್ ಸೇವೆಯೆಂದಲ್ಲಿ ಮಾನವೀಯ ಸೇವೆಗಳಲ್ಲಿ ಒಂದಾಗಿದೆ. ಅವರ ಜೊತೆಗೆ ರೆಡ್ ಕ್ರಾಸ್ ಸಂಸ್ಥೆ ಕೈಜೋಡಿಸುವುದರಿಂದ ಸಮಾಜಕ್ಕೆ ಬಹಳಷ್ಟು ಕೊಡುಗೆಯನ್ನು ನೀಡಲು ಸಾಧ್ಯ ಎಂದರು.
ಈ ಸಂದರ್ಭ ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆ ನಿರ್ದೇಶಕ ಅಬ್ದುಲ್ ರಹಿಮಾನ್, ಕಣಚೂರು ನರ್ಸಿಂಗ್ ವಿಜ್ಞಾನ ಸಂಸ್ಥೆಯ ಪ್ರಾಂಶುಪಾಲೆ ಮಾಲಿ ಸಲ್ದಾನ್ಹ, ಕಣಚೂರು ವೈದ್ಯಕೀಯ ಕಾಲೇಜು ಡೀನ್ ಡಾ.ಕೆ.ಜಿ ಕಿರಣ್, ವೈದ್ಯಕೀಯ ಅಧೀಕ್ಷಕ ಡಾ.ಹರೀಶ್ ಶೆಟ್ಟಿ, ಆಸ್ಪತ್ರೆ ಮುಖ್ಯ ಆಡಳಿತಾಧಿಕಾರಿ ಡಾ.ರೋಹನ್ ಮೋನಿಸ್, ಕೋಟೆಕಾರು ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಹರೀಶ್ ರಾವ್, ಸಾಲಿಮಾ ಬಿ. ಉಪಸ್ಥಿತರಿದ್ದರು.
ಕಣಚೂರು ನರ್ಸಿಂಗ್ ಕಾಲೇಜಿನ ರೆಡ್ ಕ್ರಾಸ್ ವಿಭಾಗದ ನೀತಾ ಕುವೆಲ್ಹೋ ಕಾರ್ಯಕ್ರಮ ಸಂಯೋಜಿಸಿದ್ದರು.


