UN networks
ಉಳ್ಳಾಲ: ಮತ್ತೆ ಮರಳು ದಂಧೆಕೋರರು ಅಟ್ಟಹಾಸ ಮೆರೆದು ಜಿಲ್ಲಾಡಳಿತ ನಿರ್ದೇಶನದಂತೆ ಹಾಕಿದ್ದ ಸಿಸಿಟಿವಿಯನ್ನು ಕೆಡವಲು ಯತ್ನಿಸಿರುವ ಘಟನೆ ಸೋಮೇಶ್ವರ ಮೂಡ ಲೇಔಟ್ ನಲ್ಲಿ ನಡೆದಿದ್ದು, ಈ ಕುರಿತು ಉಳ್ಳಾಲದ ಗ್ರಾಮಲೆಕ್ಕಾಧಿಕಾರಿ ನೀಡಿದ ದೂರಿನಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲ ತಿಂಗಳ ಹಿಂದೆ ತಂಡವೊಂದು ಸೋಮೇಶ್ವರ ಬೀಚ್ ನಲ್ಲಿ ಅಳವಡಿಸಿದ್ದ ಸಿಸಿಟಿವಿಯನ್ನು ಲಾರಿ ಮೂಲಕ ಗುದ್ದಿ ಕೆಡವಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಿದ್ದರು.
ನ.6 ರಂದು ನಸುಕಿನ ಜಾವ 2.25 ರ ಸುಮಾರಿಗೆ KA19z 7354 ವ್ಯಾಗನಾರ್ ಕಾರಿನಲ್ಲಿ ಬಂದ ತಂಡದ ಪೈಕಿ ಓರ್ವ ಕೆಳಗಿಳಿದು ಅಕ್ರಮ ಮರಳುಗಾರಿಕೆ ತಡೆಗಟ್ಟಲು ಹಾಕಿದ್ದ ಸಿಸಿಟಿವಿಯನ್ನು ಕೆಡವಲು ಯತ್ನಿಸಿದ್ದಾನೆ. ಸಿ ಆರ್ ಝೆಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಡೆಸದಂತೆ ಜಿಲ್ಲಾಧಿಕಾರಿ,
ಮರಳು ಸಮಿತಿ ಅಧ್ಯಕ್ಷರು, ಆದೇಶದಂತೆ ಕುಂದಾಪುರದ ಸೈನ್ ಇನ್ ಸೆಕ್ಯುರಿಟಿ ಒಂದು ವರ್ಷದವರೆಗೆ 24 ಗಂಟೆಗಳ ಕಾಲ ಸಿಸಿಟಿವಿ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡಿದ್ದು, ಇದೀಗ ಎರಡನೇ ಬಾರಿ ಮರಳು ದಂಧೆಕೋರರು ಸಿಸಿಟಿವಿ ಕೆಡವಲು ಯತ್ನಿಸಿದ್ದಾರೆ . ಈ ಕುರಿತು ಉಳ್ಳಾಲದ ಗ್ರಾಮಲೆಕ್ಕಾಧಿಕಾರಿ ಸಂತೋಷ್ ಎಂಬವರು ನೀಡಿದ ದೂರಿನಡಿ ಪ್ರಕರಣ ದಾಖಲಾಗಿದೆ. ಕೆಲ ತಿಂಗಳುಗಳ ಹಿಂದೆ ಸೋಮೇಶ್ವರ ಸಮುದ್ರ ತೀರದಲ್ಲಿ ಅಳವಡಿಸಿದ್ದ ಸಿಸಿಟಿವಿಯನ್ನು ಲಾರಿ ಮೂಲಕ ಢಿಕ್ಕಿ ಹೊಡೆಸಿ ಕೆಡವಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರ ಬಂಧನವಾಗಿತ್ತು. ಮರುದಿನವೇ ಎಲ್ಲರೂ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.


