ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಪಂಡಿತ್‍ಹೌಸ್ : ಇಲ್ಲಿನ ನಗರಸಭಾ ವ್ಯಾಪ್ತಿಯ ಪಂಡಿತ್‍ಹೌಸ್ ಬಳಿಯ ರಾಜರಾಜೇಶ್ವರೀ ಒಂದನೇ ಅಡ್ಡ ರಸ್ತೆಗೆ ಮಂಜೂರುಗೊಂಡ ಅನುದಾನದಲ್ಲಿ ಪಕ್ಕದ ಸಣ್ಣ ರಸ್ತೆಗೆ ಕಾಂಕ್ರೀಟಿಕರಣಗೊಳಿಸಿರುವ ಪ್ರಸಂಗ ಬೆಳಕಿಗೆ ಬಂದಿದ್ದು, ಮತಬ್ಯಾಂಕಿನ ಮತ್ತು ಅನುದಾನದ ಹಣವನ್ನು ತಿನ್ನುವ ಉದ್ದೇಶದಿಂದ ಈ ರೀತಿಯ ತಾರತಮ್ಯ ಎಸಗಲಾಗಿದೆ ಅನ್ನುವ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ರಸ್ತೆಗೊಂದು ಕಾಂಕ್ರಿಟೀಕರಣ ನಡೆಸಲು ಎಲ್ಲಾ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದ ಇಲ್ಲಿನ ಜನರು, ಹಲವು ವರ್ಷದ ಪರಿಶ್ರಮದ ಫಲವಾಗಿ ಅಂದಿನ ಉಳ್ಳಾಲ ಪುರಸಭೆಯ ಯೋಜನೆಯನ್ವಯ 5 ಲಕ್ಷ ರೂ. ಕಾಂಕ್ರಟೀಕರಣಕ್ಕೆ ಮಂಜೂರಾಗಿತ್ತು. ಈ ವಿಚಾರ ಉಳ್ಳಾಲ ನಗರಸಭೆಯಿಂದ ನೀಡಲಾದ ಟೆಂಡರ್ ಪ್ರಕಟಣೆಯಲ್ಲಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿತ್ತು. ಆದರೆ ಈ ರಸ್ತೆಗೆ ಟೆಂಡರ್ ಪ್ರಕ್ರಿಯೆ ಮಾತ್ರ ನಡೆದಿದ್ದು, ಕಾಂಕ್ರಟೀಕರಣ ನಡೆದದ್ದು, ಪಕ್ಕದ ಸಣ್ಣ ರಸ್ತೆಗೆ ಎನ್ನುವ ವಿಚಾರ ಇಲ್ಲಿನ ನಿವಾಸಿಗಳಿಗೆ ತಡವಾಗಿ ತಿಳಿದಿದ್ದು, ಅಷ್ಟೊತ್ತಿಗೆ ಬೇರೆ ರಸ್ತೆಯ ಕಾಂಕ್ರಿಟೀಕರಣ ನಡೆದಿತ್ತು. ಈ ರಸ್ತೆಗೆ ಕಾಂಕ್ರಟೀಕರಣ ಮಾಡಿದರೆ ಹೆಚ್ಚಿನ ಲಾಭ ಮಾಡಲು ಸಾಧ್ಯವಿಲ್ಲ ಎನ್ನುವ ನಿಟ್ಟಿನಲ್ಲಿ ಈ ಕಾಂಕ್ರಟೀಕರಣವನ್ನು ಇನ್ನೊಂದು ಸಣ್ಣ ರಸ್ತೆಗೆ ವರ್ಗಾಯಿಸಿದ್ದಾರೆ. ಅಲ್ಲದೆ ಈ ಭಾಗದ ಕಾಂಗ್ರೆಸ್ ಕೌನ್ಸಿಲರ್‍ಗೆ ರಾಜರಾಜೇಶ್ವರೀ ಒಂದನೇ ಅಡ್ಡ ರಸ್ತೆಯ ಬದಿಯಲ್ಲಿರುವ ನಿವಾಸಿಗಳು ಮತ ಹಾಕುವುದಿಲ್ಲವೆಂದು, ಇನ್ನೊಂದು ಕಿರಿದಾದ ರಸ್ತೆ ಬದಿಯಲ್ಲಿರುವವರು ಮತ ಹಾಕುವವರೆಂದು ಕಾಂಕ್ರೀಟಿಕರಣ ನಡೆಸಿದ್ದಾರೆಂದು ಎಂದು ಸ್ಥಳೀಯರು ದೂರಿದ್ದಾರೆ.
ರಾಜರಾಜೇಶ್ವರೀ ಎರಡನೇ ಅಡ್ಡ ರಸ್ತೆ ಸಂಪೂರ್ಣ ಕೆಟ್ಟಿದ್ದು, ದ್ವಿಚಕ್ರ ಮತ್ತು ರಿಕ್ಷಾ, ಕಾರು ಸಂಚರಿಸುವುದೇ ಕಷ್ಟಕರವಾಗಿದೆ. ಶಾಲಾ ಮಕ್ಕಳನ್ನು ಹೊತ್ತು ಬರುವ ರಿಕ್ಷಾಗಳು ಇಲ್ಲಿ ಹಲವಾರು ಬಾರಿ ಅಪಘಾತಕೀಡಾಗಿದೆ. ಯಾರಾದರೂ ಅನಾರೋಗ್ಯವಾದರೆ ವಾಹನದವರು ಈ ಪ್ರದೇಶಕ್ಕೆ ಬರುತ್ತಿಲ್ಲ ಎನ್ನುವುದು ಸ್ಥಳೀಯರ ವಾದ. ಕ್ಷೇತ್ರದಾದ್ಯಂತ ಸಣ್ಣ ಸಣ್ಣ ಅಡ್ಡ ರಸ್ತೆಗಳೂ ಕಾಂಕ್ರಟೀಕರಣವಾಗುತ್ತಿದ್ದರೂ ಈ ರಸ್ತೆಗೆ ಮಾತ್ರ ಕಾಂಕ್ರೀಟಿಕರಣ ಭಾಗ್ಯ ಬಂದಿಲ್ಲ.
ನಾಮಫಲಕವೂ ಮಾಯ:
ರಸ್ತೆಗೆ ಹಾಕಲಾದ ಸಿದ್ಧವಿನಾಯಕ ಹೆಸರಿನ ನಾಮಫಲಕವೂ ಗಿಡಗಂಟಿಗಳಿಂದ ಮುಚ್ಚಿಹೋಗಿ ನೆಲಕ್ಕೆ ಉರುಳಿದೆ. ಸ್ಥಳಕ್ಕೆ ತೆರಳಿದ ಮಾಧ್ಯಮ ಮಂದಿಗೆ ಅದನ್ನು ತೋರಿಸಲು ಸ್ಥಳೀಯರು ಗಿಡಗಂಟಿಗಳನ್ನು ಕಡಿದು ಕೆಳಗೆ ಉರುಳಿದ್ದ ನಾಮಫಲಕವನ್ನು ಮೇಲಕ್ಕೆ ಇಟ್ಟರು.
ರಸ್ತೆಯಿಡೀ ಗಿಡಗಳು ಬೆಳೆದಿದೆ : ಇದೇ ರಸ್ತೆಯ ಇನ್ನೊಂದು ಬದಿಯಲ್ಲಿ ರಸ್ತೆ ತುಂಬಾ ಗಿಡಗಂಟಿಗಳು ಬೆಳೆದಿದ್ದು ನಡೆದಾಡಲೂ ಕಷ್ಟಕರವಾಗಿದೆ. ಗಿಡಗಂಟಿಗಳನ್ನು ಎರಡು ದಿನಗಳ ಹಿಂದೆ ಉಳ್ಳಾಲ ನಗರಸಭೆ ತೆಗೆದಿದ್ದರೂ, ಸರಿಯಾದ ರೀತಿಯಲ್ಲಿ ತೆಗೆಯದ ಹಿನ್ನೆಲೆಯಲ್ಲಿ ಇನ್ನೊಮ್ಮೆ ಗಿಡಗಂಟಿಗಳು ಬೆಳೆಯುವ ಸಾಧ್ಯತೆ ಇದೆ.
`ಹತ್ತು ವರ್ಷಗಳಾದರೂ ರಸ್ತೆ ಮಾಡುವುದಿಲ್ಲ’:
ರಸ್ತೆ ಅವ್ಯವಸ್ಥೆಯ ಬಗ್ಗೆ ಸ್ಥಳೀಯರು ಉಳ್ಳಾಲ ನಗರಸಭೆ ಕೌನ್ಸಿಲರ್ ಆಗಿರುವ ಭಾರತಿ ಅವರನ್ನು ಪ್ರಶ್ನಿಸಿ ಕಾಂಕ್ರೀಟಿಕರಣಕ್ಕೆ ಒತ್ತಾಯಿಸಿದಾಗ, ಮುಂದಿನ 10 ವರ್ಷವಾದರೂ ರಸ್ತೆಯನ್ನು ಮಾಡುವುದಿಲ್ಲ ಎಂದು ಉಡಾಫೆಯಿಂದ ವರ್ತಿಸಿದ್ದಾರೆ ಎಂದು ಸ್ಥಳೀಯರೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ.
ಕಾಂಕ್ರಿಟೀಕರಣಕ್ಕೆ ಮೊದಲ ಅರ್ಜಿ ಬಂದ ಪ್ರಕಾರ ರಾಜರಾಜೇಶ್ವರೀ ಎರಡನೇ ಅಡ್ಡ ರಸ್ತೆಗೆ ಮಂಜೂರು ಮಾಡಲು ಶಿಫಾರಾಸ್ಸು ಮಾಡಲಾಗಿತ್ತು. ಆದರೆ ಪುರಸಭೆಯು ಪತ್ರಿಕೆಗೆ ನೀಡಿದ ಪ್ರಕಟನೆಯಲ್ಲಿ ಒಂದನೇ ಅಡ್ಡರಸ್ತೆ ಎಂದು ತಪ್ಪಾಗಿ ಪ್ರಕಟಗೊಂಡಿರುವುದೇ ಈ ಗೊಂದಲಗಳಿಗೆ ಕಾರಣ. ಎರಡನೇ ಅಡ್ಡ ರಸ್ತೆ ತುಂಬಾ ಹಾಳಾಗಿದ್ದರಿಂದ ಆದ್ಯತೆಯ ಮೇರೆಗೆ ಅಲ್ಲಿ ಡಾಮರೀಕರಣ ನಡೆಸಲಾಗಿದೆ. ಮುಂದಿನ ದಿನದಲ್ಲಿ ಒಂದನೇ ಅಡ್ಡರಸ್ತೆಗೂ ಕಾಂಕ್ರಟೀಕರಣಕ್ಕೆ ಅನುದಾನ ನೀಡಲಾಗುವುದು.
ಭಾರತಿ, ಸ್ಥಳೀಯ ಕೌನ್ಸಿಲರ್ ಉಳ್ಳಾಲ ನಗರಸಭೆ
ಕಾಂಕ್ರಿಟೀಕರಣಕ್ಕೆ ಮಂಜೂರಾಗಿದ್ದು ರಾಜರಾಜೇಶ್ವರೀ ಒಂದನೇ ಅಡ್ಡ ರಸ್ತೆಗೆ. ಈ ರಸ್ತೆಗೆ ಮಂಜೂರಾದ ಅನುದಾನ ಬೇರೆ ರಸ್ತೆಗೆ ವಿನಿಯೋಗವಾದಾಗ ಸ್ಥಳೀಯರೆಲ್ಲರೂ ಸೇರಿ ಸಂಬಂ„ತ ಜನಪ್ರತಿನಿ„ಗಳನ್ನು ಮತ್ತು ಅಧಿಕಾರಿಗಳನ್ನು ಮಾಹಿತಿಗಾಗಿ ಸಂಪರ್ಕಿಸಿದರೂ ಉತ್ತರ ಸಿಕ್ಕಿರಲಿಲ್ಲ. ಬಳಿಕ ಮಾಹಿತಿ ಹಕ್ಕಿನಲ್ಲಿ ಕೇಳಿದಾಗ ಅನುದಾನ ಮಂಜೂರಾಗಿರುವುದು ಒಂದನೇ ಅಡ್ಡ ರಸ್ತೆಗೆ ಎನ್ನುವ ಮಾಹಿತಿ ಸಿಕ್ಕಿದ್ದು, ಇಲ್ಲಿನ ನಿವಾಸಿಗಳಿಗೆ ಅನ್ಯಾಯವಾಗಿದೆ.
ದಿವ್ಯಾ ರಾಜೇಶ್, ಸ್ಥಳೀಯ ನಿವಾಸಿ
















