UN networks
ದೇರಳಕಟ್ಟೆ: ಪ್ರಸ್ತುತ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಸಂಪರ್ಕ ಸಾಧಿಸುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಸಮ್ಮೇಳನಗಳು ಹೊಸ ಯೋಚನೆಗಳು ಹಾಗೂ ಹಲವರೊಂದಿಗೆ ಸಂಪರ್ಕ ಸಾಧಿಸಲು ಕಾರಣವಾಗುತ್ತದೆ.
ಇಂದಿನ ವಿದ್ಯಾರ್ಥಿಗಳು ಉದ್ಯೋಗ ಅರಸುವವರಾಗಿರದೆ, ಉದ್ಯೋಗ ಸೃಷ್ಟಿಸುವವರಾಗಿರಬೇಕು ಎಂದು ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸತೀಶ್ ಕುಮಾರ್ ಭಂಡಾರಿ ಅಭಿಪ್ರಾಯಪಟ್ಟರು.
ಫಾದರ್ ಮುಲ್ಲರ್ ಸೇವಾ ಸಂಸ್ಥೆಯ ಅಧೀನದಲ್ಲಿರುವ ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವತಿಯಿಂದ ಎರಡು ದಿನಗಳ 25ನೇ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನ ‘ಇಂಪೆಟಸ್-2022’ ಶುಕ್ರವಾರ ದೇರಳಕಟ್ಟೆ ಫಾದರ್ ಮುಲ್ಲರ್ ಅಡಿಟೋರಿಯಂನಲ್ಲಿ ಉದ್ಘಾಟಿಸಿ ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ವೈದ್ಯಕೀಯ ಶಿಕ್ಷಣ ಸಂಸ್ಥೆಯಿದ್ದರೂ ಹೋಮಿಯೋಪಥಿಕ್ ವಿಚಾರದಲ್ಲಿ ಫಾದರ್ ಮುಲ್ಲರ್ ಸಂಸ್ಥೆ ಏಕೈಕ ಸಂಸ್ಥೆ ಎನ್ನುವ ಹೆಗ್ಗಳಿಕೆ ಹೊಂದಿದೆ. ವೈದ್ಯಕೀಯ ಪದ್ದತಿಯಲ್ಲಿ ಯೋಗವೂ ಒಂದಾಗಿದೆ. ಹೋಮಿಯೋಪಥಿ ವಿದ್ಯಾರ್ಥಿಗಳು ಇತರ ವೈದ್ಯಕೀಯ ಚಿಕಿತ್ಸಾ ವಿಚಾರದಲ್ಲೂ ಜ್ಞಾನ ಹೊಂದಿದಾಗ ವೃತ್ತಿ ಜೀವನದಲ್ಲಿ ಸಹಕಾರ ಆಗಲಿದೆ ಎಂದು ತಿಳಿಸಿದರು.
ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕ ರೆವರೆಂಡ್ ಫಾದರ್ ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಅಧ್ಯಕ್ಷತೆ ವಹಿಸಿ, ವೈದ್ಯಕೀಯ ಚಿಕಿತ್ಸಾ ಪದ್ದತಿಯಲ್ಲಿ ಅಲೋಪಥಿ ನಂತರದ ಸ್ಥಾನ ಹೋಮಿಯೋಪಥಿಯದ್ದಾಗಿದೆ. ಹಲವು ಸಂಶೋಧನೆಗಳ ಬಳಿಕ ಅಸ್ತಿತ್ವಕ್ಕೆ ಬಂದಿರುವ ಹೋಮಿಯೋಪಥಿ ಔಷಧ ಯಾವುದೇ ಅಡ್ಡ ಪರಿಣಾಮ ಇಲ್ಲದ ಕಾರಣ ಭಾರತದಲ್ಲಿ ಶೀಘ್ರ ಗತಿಯಲ್ಲಿ ಪ್ರಭಾವ ಬೀರಿದೆ. ಈ ವಿಭಾಗದ ವಿದ್ಯಾರ್ಥಿಗಳಿಗೆ ಸಮ್ಮೇಳನದ ಮೂಲಕ ಜ್ಞಾನವೃದ್ಧಿಗೆ ಅವಕಾಶ ಇದೆ ಎಂದರು.
ಇದೇ ಸಂದರ್ಭ ಸಮ್ಮೇಳನದ ಸ್ಮರಣ ಸಂಚಿಕೆ, ಸಂಶೋಧನಾ ಬುಲೆಟಿನ್ ಹಾಗೂ ಫಾದರ್ ಮುಲ್ಲರ್ ಹೋಮಿಯೋಪಥಿ ಫಾರ್ಮಾಕ್ಯುಟಿಕಲ್ ಡಿವಿಜನ್ ನಲ್ಲಿ ವಿವಿಧ ಸುಗಂಧಗಳಲ್ಲಿ ಹೊಸದಾಗಿ ತಯಾರಿಸಲಾದ ಶಾಲೋಮ್ ಪೌಡರ್ ಬಿಡುಗಡೆಗೊಳಿಸಲಾಯಿತು.
ಸಂಸ್ಥೆಯ ಆಡಳಿತಾಧಿಕಾರಿ ರೆ.ಫಾ.ರೋಶನ್ ಕ್ರಾಸ್ತಾ ಹಾಗೂ ಉಪಪ್ರಾಂಶುಪಾಲೆ ಡಾ.ವಿಲ್ಮಾ ಮೀರಾ ಡಿಸೋಜ ಉಪಸ್ಥಿತರಿದ್ದರು.
ಪ್ರಾಂಶುಪಾಲ ಡಾ.ಇ.ಎಸ್.ಜೆ ಪ್ರಭು ಕಿರಣ್ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಡಾ.ವಿವೇಕ್ ಶಕ್ತಿಧರನ್ ವಂದಿಸಿದರು. ಡಾ.ಜಿ.ರಾಜಚಂದ್ರ ಮತ್ತು ಡಾ.ಮೇಬಲ್ ಪಿ. ಕಾರ್ಯಕ್ರಮ ನಿರೂಪಿಸಿದರು.


