UN netowrks
ಕಿನ್ಯಾ: ಸಂಸ್ಥೆಗಳು ನಡೆಸಿದ ಶ್ರಮದಾನದ ಕಾಮಗಾರಿಗೂ ಗ್ರಾ.ಪಂ ಆಡಳಿತದಿಂದ ಬಿಲ್ ಪಾವತಿಸಲಾಗಿದೆ.ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕಾಗಿದೆ ಎಂದು ಕಿನ್ಯಾ ಗ್ರಾಮಸ್ಥರ ಆರೋಪಗಳ ನಡುವೆ ಗ್ರಾಮಸ್ಥರಿಲ್ಲದೆ ಅತಿ ಹೆಚ್ಚು ಖಾಲಿ ಖುರ್ಚಿಗಳ ಸಮ್ಮುಖದಲ್ಲೇ ಕಿನ್ಯಾ ಗ್ರಾಮ ಪಂಚಾಯತ್ 2021-22 ರ ಸಾಲಿನ ಪ್ರಥಮ ಹಂತದ ಗ್ರಾಮಸಭೆ ಕಿನ್ಯಾ ವಾದಿತ್ತೈಬ ಸಭಾಂಗಣದಲ್ಲಿ ನಡೆಯಿತು.
ಗ್ರಾಮಸ್ಥ ಸಿದ್ದೀಖ್ ಮಾತನಾಡಿ,
ಶ್ರಮದಾನ ನಡೆಸಿ ವಾಟ್ಸ್ಯಾಪ್ ಮೂಲಕ ಪ್ರಚಾರವಾದ ಗ್ರಾ.ಪಂ ನಿಂದ ಕಾಮಗಾರಿಗಳಿಗೂ ಬಿಲ್ ಪಾವತಿಸಲಾಗಿದೆ. ಇದರಿಂದ ಗ್ರಾಮಸ್ಥರ ತೆರಿಗೆ ಹಣದಲ್ಲಿ ವಂಚನೆಗಳಾಗಿವೆ. ಗ್ರಾಮದಲ್ಲಿ ನಡೆದ ಬಹುತೇಕ ಶ್ರಮಾದಾನಗಳಿಗೆ , ಗ್ರಾ.ಪಂ ಬಿಲ್ ಪಾವತಿಸಿರುವುದು ಗೊಂದಲಕಾರಿ. ಈ ಬಗ್ಗೆ ಗ್ರಾ.ಪಂ ಆಡಳಿತ ಉತ್ತರಿಸಬೇಕು ಎಂದು ಒತ್ತಾಯಿಸಿದರು.
ಉತ್ತರಿಸಿದ ಗ್ರಾ.ಪಂ ಸದಸ್ಯ ತ್ವಾಹಾ, ದಾಖಲೆಗಳಿದ್ದರೆ ತೋರಿಸಿ, ಸುಖಾಸುಮ್ಮನೆ ಆರೋಪಗಳನ್ನು ಮಾಡುವುದು ಸರಿಯಲ್ಲ. ಸಂಘ ಸಂಸ್ಥೆಗಳು ಮಾಡಿರುವ ಶ್ರಮಾದಾನದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡುವುದು ತಪ್ಪಲ್ಲ ಎಂದರು. ಪಿಡಿಓ ಉತ್ತರಿಸಿ, ಶ್ರಮಾದಾನಕ್ಕೆ ಗ್ರಾ.ಪಂನಿಂದ ಬಿಲ್ ಪಾವತಿ ಮಾಡಿರುವ ವಿಚಾರ ಗಮನಕ್ಕೆ ಬಂದಿಲ್ಲ. ಸ್ಥಳ ಮಹಜರು ನಡೆಸಿಯೇ ಬಿಲ್ ನೀಡಲಾಗುತ್ತಿದೆ. ಅಂತಹ ಕಾರ್ಯಗಳು ಮುಂದೆ ನಡೆಯದಂತೆ ಎಚ್ಚರಿಕೆ ವಹಿಸುವುದಾಗಿಯೂ, ಶ್ರಮಾದಾನದ ಪ್ರಚಾರ ನಡೆಯುವಂತೆ ಗ್ರಾ.ಪಂ ಕಾರ್ಯಗಳ ಕುರಿತು ವಾಟ್ಸ್ಯಾಪ್ ಗ್ರೂಪ್ ಮೂಲಕ ಗ್ರಾಮಸ್ಥರಿಗೆ ಮಾಹಿತಿ ನೀಡುತ್ತೇವೆ ಎಂದರು.
ಗ್ರಾಮಸ್ಥ ರಮೀಝ್, ಮಸೀದಿ ಬಳಿ ಚರಂಡಿಯೇ ಇಲ್ಲ. ಆದರೂ 4,000 ರೂ ಬಿಲ್ ಮಾಡಲಾಗಿದೆ. ಚರಂಡಿಯ ಬಗ್ಗೆ ಮಾಹಿತಿ ಕೊಡಿ? ಉತ್ತರಿಸಿದ ಪಿಡಿಓ, ಸ್ಥಳ ಪರಿಶೀಲನೆ ನಡೆಸಿಯೇ ಬಿಲ್ ಪಾವತಿಸಲಾಗಿದೆ. ದಾಖಲೆಗಳಿಗಾಗಿ ಪಂಚಾಯಿತಿ ಕಚೇರಿಗೆ ಬಂದಲ್ಲಿ ತೋರಿಸುವುದಾಗಿ ಹೇಳಿದರು.
ಗ್ರಾಮಸ್ಥರಿಲ್ಲದ ಗ್ರಾಮಸಭೆ ಮುಂದೂಡಿಕೆಗೆ ಆಗ್ರಹ !
ಸಭೆಯಲ್ಲಿ ಗ್ರಾಮಸ್ಥರಿಗಿಂತ ಅಧಿಕಾರಿಗಳೇ ಹೆಚ್ಚಿದ್ದರು. ಖಾಲಿ ಖುರ್ಚಿಗಳೇ ಸಭೆಯಲ್ಲಿ ಎದ್ದು ಕಾಣುತ್ತಿರುವುದರಿಂದ ಸರಿಯಾದ ಪ್ರಚಾರ ನಡೆಸದೆ, ಗ್ರಾಮಸ್ಥರಿಗೆ ಅನುಕೂಲವಾಗದ ಜಾಗದಲ್ಲಿ ಗ್ರಾಮಸಭೆ ಹಮ್ಮಿಕೊಂಡಿದ್ದರಿಂದ ಗ್ರಾಮಸ್ಥರು ಬಂದಿಲ್ಲ. ವಾರದ ಆರಂಭದ ದಿನದಲ್ಲಿ ಸಭೆ ಆಯೋಜಿಸಿರುವುದು ಸರಿಯಲ್ಲ. 11 ವಾರ್ಡುಗಳಿಂದ ಕೇವಲ 36 ಮಂದಿ ಮಾತ್ರ ಭಾಗವಹಿಸಿದ್ದಾರೆ. ಇಂತಹ ಗ್ರಾಮಸಭೆ ನಡೆದಲ್ಲಿ ಅರ್ಥವಿಲ್ಲ. ಮುಂದೂಡಿರಿ ಅನ್ನುವ ಆಗ್ರಹ ಗ್ರಾಮಸ್ಥರಿಂದ ಆರಂಭದಲ್ಲಿ ವ್ಯಕ್ತವಾಯಿತು. ಪಂ. ಪಿಡಿಓ ಕೊರೊನಾದಿಂದ ಎರಡು ವರ್ಷಗಳಿಂದ ಮುಂದೂಡಲ್ಪಟ್ಟ ಗ್ರಾಮಸಭೆ ಮುಂದೂಡಲು ಅಸಾಧ್ಯ ಎಂದಾಗ, ನೋಡೆಲ್ ಅಧಿಕಾರಿಯೂ ದನಿಗೂಡಿಸಿ ಸಭೆ ನಡೆಸುವಂತೆ ಗ್ರಾಮಸ್ಥರ ಮನವೊಲಿಸಿದರು.
ಹಿಂದಿನ ಗ್ರಾಮಸಭೆಗಳಲ್ಲಿ ತೆಗೆದುಕೊಂಡ ನಿರ್ಣಯಗಳಿಗೆ ಬೆಲೆಯಿಲ್ಲದಂತಾಗಿದೆ.
ತೆಗೆದುಕೊಂಡ ಕೆಲ ನಿರ್ಣಯಗಳನ್ನು ಈ ಸಭೆಯಲ್ಲಿ ಓದಲಾಗುತ್ತಿಲ್ಲ.
ಸಾಂತ್ಯ ಸಂಪರ್ಕ ರಸ್ತೆ ಅನುದಾನ ಬಾರದೇ ಇರುವ ಬಗ್ಗೆ ಚರ್ಚಿಸಲಾಗಿತ್ತು. ಆ ಕುರಿತು ಪ್ರಸ್ತಾಪವೇ ಇಲ್ಲ. ಸಾಂತ್ಯ ನೆತ್ತಿಲಪದವು ಪ್ರದೇಶ ಕಿನ್ಯಾ ಗ್ರಾಮದಲ್ಲಿ ಇದೆಯೇ? ಅನ್ನುವ ಸಂದೇಹವಿದೆ. ರೈತ ಬೆನ್ನೆಲುಬು ಅನ್ನುತ್ತಾ ಈ ಭಾಗದಲ್ಲಿ ರಸ್ತೆಯಿಲ್ಲದೆ ರೈತನ ಬೆನ್ನೆಲುಬು ಮುರಿಯುವ ಕೆಲಸವಾಗುತ್ತಿದೆ ಎಂದು ಗ್ರಾಮಸ್ಥ ಶೇಖರ್ ಮಾರ್ಲ ಆರೋಪಿಸಿದರು.
ಕಿನ್ಯಾ ಗ್ರಾಮದಲ್ಲಿ ಕೋವಿಡ್ ಎರಡನೇ ಅಲೆ ಸಂದರ್ಭ 58 ಪ್ರಕರಣಗಳು ಕಂಡುಬಂದಿತ್ತು. ಇದರಲ್ಲಿ 5 ಮಂದಿ ಮೃತಪಟ್ಟಿದ್ದಾರೆ. ಮೂರನೇ ಅಲೆಯ ಬಗ್ಗೆ ಜಾಗರೂಕರಾಗಿ. ಸಭೆಯಲ್ಲಿ ಹಲವರು ಮಾಸ್ಕ್ ಹಾಕದೇ ಇರುವುದರ ಬಗ್ಗೆ ಎಚ್ಚರಿಸಿ, ಮಕ್ಕಳ ಆರೋಗ್ಯಕ್ಕಾಗಿ ಎಲ್ಲರೂ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿ ಒತ್ತಾಯಿಸಿದರು.
ಮೀನಾದಿ ಶಾಲೆಯ ಹಂಚು ಬೀಳುತ್ತಿರುವ ಬಗ್ಗೆ ಶಾಲಾ ಮುಖ್ಯಶಿಕ್ಷಕಿ ಗಮನಕ್ಕೆ ತಂದರು.
ಗ್ರಾಮದಲ್ಲಿ ಹಿಂದುರುದ್ರಭೂಮಿಯೇ ಇಲ್ಲ. ಮೃತದೇಹಗಳನ್ನು ಸ್ಥಳೀಯ ಕೋಟೆಕಾರು, ತಲಪಾಡಿ ಗ್ರಾಮಕ್ಕೆ ಕೊಂಡೊಯ್ಯಲಾಗುತ್ತಿದೆ. ಒಂದು ತಿಂಗಳ ಒಳಗೆ ಹಿಂದುರುದ್ರಭೂಮಿಯ ಪ್ರಕ್ರಿಯೆ ಮುಂದುವರಿಯದೇ ಇದ್ದಲ್ಲಿ ಮೃತದೇಹವನ್ನು ಕಿನ್ಯಾ ಗ್ರಾ.ಪಂ ಕಚೇರಿ ಎದುರು ಇಟ್ಟು ಪ್ರತಿಭಟಿಸುವುದಾಗಿ ಎಚ್ಚರಿಸಿದರು.ಪಾಲೆದಡಿ ಪ್ರದೇಶದಲ್ಲಿ ಜಾಗ ಗುರುತಿಸಲಾಗಿದ್ದರೂ, ಕುಮ್ಕಿ ಹಕ್ಕಿನವರು ನ್ಯಾಯಾಲಯದ ಮೆಟ್ಟಿಲೇರಿವುದು ಹಿನ್ನೆಡೆಯಾಗಿದೆ ಎಂದು ಪಿಡಿಓ ಪ್ರತಿಕ್ರಿಯಿಸಿದರು.
ಮಂಗಳೂರು ಕೃಷಿ ಇಲಾಖೆ ಸಹಾಯಕ ಅಧಿಕಾರಿ ಮುರಳೀಧರ್ ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದರು. ಕಿನ್ಯಾ ಗ್ರಾ.ಪಂ ಅಧ್ಯಕ್ಷೆ ಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಅಧಿಕಾರಿ ವಿಶ್ವನಾಥ್, ತಲಪಾಡಿ ಪಶು ವೈದ್ಯಾಧಿಕಾರಿ ಡಾ.ಸೆವ್ರಿನಾ, ಜಿ.ಪಂ ಇಂಜಿನಿಯರ್ ನಿತಿನ್ , ಮೆಸ್ಕಾಂ ಕೋಟೆಕಾರು ಶಾಖೆ ಜೆ.ಇ ಪ್ರವೀಣ್, ಶಿಕ್ಷಣ ಇಲಾಖೆ ಹರೀಶ್ ಮುಂತಾದ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


