ಉಳ್ಳಾಲ: ಉಳ್ಳಾಲದ ಯುವಕರಿಬ್ಬರು ಒಮಾನ್ ದೇಶದಲ್ಲಿ ಸಮುದ್ರ ವಿಹಾರಕ್ಕೆಂದು ತೆರಳಿದ್ದ ಸಂದರ್ಭ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ.
ಉಳ್ಳಾಲದ ಅಲೇಕಳ ನಿವಾಸಿ ರಿಜ್ವಾನ್ (25), ಉಳ್ಳಾಲ ಕೋಡಿ ನಿವಾಸಿ ಜಹೀರ್ (25) ಮೃತಪಟ್ಟವರು.
ಎರಡು ವರ್ಷದ ಹಿಂದೆ ಉಳ್ಳಾಲದಿಂದ ಒಮಾನ್ ದೇಶಕ್ಕೆ ಉದ್ಯೋಗಕ್ಕಾಗಿ ತೆರಳಿದ್ದ ಇಬ್ಬರು ಯುವಕರು ಅಲ್ಲಿನ ಫಿಶ್ ಮಿಲ್ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದರು. ಅಲ್ಲಿನ ದುಕ್ಕುಂ ಎಂಬ ಕಡಲ ತೀರಕ್ಕೆ ಶುಕ್ರವಾರ ಸಂಜೆ ವಿಹಾರಕ್ಕೆ ತೆರಳಿದ್ದ ಸಂದರ್ಭ ರಿಜ್ವಾನ್ ಕಡಲಿನ ಅಲೆಯಲ್ಲಿ ಸಿಲುಕಿದ್ದು ಮುಳುಗುತ್ತಿದ್ದಾಗ ಜಹೀರ್ ಆತನ ರಕ್ಷಣೆಗೆ ತೆರಳಿದ್ದಾನೆ. ಈ ವೇಳೆ, ಇಬ್ಬರೂ ಸಮುದ್ರ ನೀರಿನಲ್ಲಿ ಸಿಲುಕಿ ನೀರಾಪಾಲಾಗಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ಉಳ್ಳಾಲ ಕೋಡಿ ಜಹೀರ್ ಮೃತದೇಹ ಪತ್ತೆಯಾಗಿದ್ದು, ರಿಜ್ವಾನ್ಗಾಗಿ ಶೋಧ ಮುಂದುವರಿದಿದೆ. ಜಹೀರ್ಗೆ ಈಗಾಗಲೇ ಮದುವೆ ನಿಶ್ವಯವಾಗಿತ್ತು. ಕೆಲವೇ ದಿನಗಳಲ್ಲಿ ಆತ ತಾಯ್ನಾಡಿಗೆ ಆಗಮಿಸುವ ತಯಾರಿಯಲ್ಲಿದ್ದ ಎಂದು ತಿಳಿದುಬಂದಿದೆ.



