


ವರದಿ : ಪ್ರವೀಣ್ ಕುರ್ನಾಡು (ಉಮಾ ಸ್ಟುಡಿಯೋ)
ಉಳ್ಳಾಲ: ಕೇಂದ್ರದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ(ಎನ್ ಆರ್ ಎಲ್ ಎಂ) ಯೋಜನೆಯಡಿಯಲ್ಲಿ ಕುರ್ನಾಡು ಗ್ರಾಮಪಂಚಾಯತ್ ವ್ಯಾಪ್ತಿಯ ಮಜಲು ನಿವಾಸಿಗಳು ಸಕ್ರಿಯವಾಗಿ ತೊಡಗಿಸಿಕೊಂಡು ಹಡಿಲು ಬಿದ್ದ ಗದ್ದೆಯಲ್ಲಿ ಕೃಷಿ ಚಟುವಟಿಕೆಗಳನ್ನು ನಡೆಸಿ ಯಶಸ್ಸು ಕಂಡಿದ್ದಾರೆ.
ಗ್ರಾಮದ ವನಸುಮ ಸಂಜೀವಿನಿ ಅನ್ನುವ ಮಹಿಳಾ ಒಕ್ಕೂಟ ಸಮುದಾಯ ಬಂಡವಾಳದ ನಿಧಿಯನ್ನು ಪಡೆದು ಸುಮಾರು ಏಳು ವರ್ಷಗಳಿಂದ ಹಡಿಲು ಬಿದ್ದ ದಿ| ನಾರಯಣ ದೇವಸ್ಯ ಹಾಗೂ ಮಕ್ಕಳಿಗೆ ಸೇರಿದ ಗದ್ದೆಯಲ್ಲಿ ಭತ್ತದ ಬೇಸಾಯವನ್ನು ನಡೆಸಿದ್ದಾರೆ. ಲಾಕ್ಡೌನ್ ಅವಧಿಯನ್ನು ಸದುಪಯೋಗಪಡಿಸಿಕೊಂಡು ಕಾರ್ಯದಲ್ಲಿ ಪಾಲ್ಗೊಂಡರು.
ಒಂದು ತಿಂಗಳ ಕಾಲ ಹಡಿಲು ಬಿದ್ದ ಗದ್ದೆಯಲ್ಲಿ ಬೆಳೆದ ಹುಲ್ಲು, ಗಿಡ ಗಂಟೆಗಳನ್ನು ಕಡಿದು ಬಳಿಕ ಟ್ರ್ಯಾಕ್ಟರ್ ಉಪಯೋಗಿಸಿ ಉಳುಮೆ ನಡೆಸಲಾಗಿದೆ. ಕೆಲಸವಿಲ್ಲದವರಿಗೆ ಕೆಲಸ ಕೊಡುವ ಮೂಲಕ ಕೃಷಿ ಕಾರ್ಯವನ್ನು ನಡೆಸಲಾಯಿತು. ಒಕ್ಕೂಟದಲ್ಲಿ 23 ಸ್ವಸಹಾಯ ಗುಂಪುಗಳು ಸೇರ್ಪಡೆಯಾಗಿ ಈ ಒಂದು ಯೋಜನೆಯನ್ನು ಕೈಗೆತ್ತಿಕೊಂಡಿತ್ತು. ಮಹಿಳಾ ಸಬಲೀಕರಣಗೊಳಿಸುವ ಉದ್ದೇಶದಿಂದ ಆರಂಭವಾದ ಕೇಂದ್ರದ ಯೋಜನೆ ಇಲ್ಲಿ ಸಾಕಾರಗೊಂಡಿದೆ.
ತಾಲೂಕು ಪಂಚಾಯಿತಿ ಹಮ್ಮಿಕೊಂಡಿದ್ದ ಮಹಿಳಾ ಕಾಯಕೋತ್ಸವ ಅನ್ನುವ ಕಾರ್ಯಕ್ರಮದಿಂದ ಪ್ರೇರಣೆಗೊಂಡ ಇದೇ ಒಕ್ಕೂಟದ ಮಹಿಳೆಯರು ಲಾಕ್ಡೌನ್ ಅವಧಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ 15 ಚರಂಡಿಗಳ ಹೂಳೆತ್ತುವ ಕಾರ್ಯವನ್ನು ನಡೆಸಿದ್ದಾರೆ. ಹೂಳೆತ್ತುವ ಕಾರ್ಯದಲ್ಲಿ ಶೇ.70 ರಷ್ಟು ಮಹಿಳೆಯರೇ ಭಾಗವಹಿಸಿದ್ದರು.
ತಾ.ಪಂ ಎನ್ ಆರ್ ಎಲ್ ಎಂ ಮೇಲ್ವಿಚಾರಕ ಕುಶಾಲಪ್ಪ, ದೀಕ್ಷಿತಾ ಹಾಗೂ ಕುರ್ನಾಡು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಕೇಶವ ಹಾಗೂ ಗ್ರಾ.ಪಂ ಆಡಳಿತ ಸಂಪೂರ್ಣ ಸಹಕಾರವನ್ನು ನೀಡಿದೆ.
ಒಕ್ಕೂಟದ ಸಮುದಾಯ ಸಂಪನ್ಮೂಲ ವ್ಯಕ್ತಿ ಸುನೀತಾ, ಮಮತಾ, ಅಧ್ಯಕ್ಷೆ ಗೀತಾಂಜಲಿ ಹಾಗೂ ಕಾರ್ಯದರ್ಶಿ ಲೀಲಾವತಿ ಅವರ ಜವಾಬ್ದಾರಿಯಿಂದ ಕೃಷಿ ಕಾರ್ಯ ಯಶಸ್ವಿಯಾಗಿ ನಡೆದಿದೆ.
ಮಹಿಳೆಯರುಇ ಆರ್ಥಿಕವಾಗಿ ಸಬಲರಾಗಲು ಸರಕಾರದ ಯೋಜನೆಗಳನ್ನು ಬಳಸಿ ದುಡಿಯಬಹುದು. ಮಜಲು ಪ್ರದೇಶದಲ್ಲಿ ನಾವು ಹಮ್ಮಿಕೊಂಡ ಕಾರ್ಯ ಇತರೆ ಗ್ರಾಮಗಳಿಗೂ ಮಾದರಿಯಾಗಲಿ, ಮಹಿಳೆಯರು ಸ್ವ ಉದ್ಯೋಗ ನೆರವೇರಿಸಲು ಪ್ರೇರೇಪಣೆಯಾಗಲಿ ಅನ್ನುವುದು ಸಂಪನ್ಮೂಲ ವ್ಯಕ್ತಿ ಸುನಿತಾ ಅವರ ಅಭಿಪ್ರಾಯವಾಗಿದೆ.

