
ಕೊಣಾಜೆ: ಯಕ್ಷಗಾನ ಕಲಾವಿದ ಪುರುಷೋತ್ತಮ ಪೂಂಜರು ಯಕ್ಷಗಾನ ರಂಗದ ಸವ್ಯಸಾಚಿಯಾಗಿದ್ದಾರೆ. ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಅವರು ಬಳಿಕ ಹಿಮ್ಮೇಳ, ಮುಮ್ಮೇಳ ಹಾಗೂ ಪ್ರಸಂಗ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆಯೊಂದಿಗೆ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ. ಯಕ್ಷಗಾನ ರಂಗಕ್ಕೆ ಇಂತಹ ಮಹಾನ್ ಕಲಾವಿದರ ಸೇವೆ ಇನ್ನಷ್ಟು ಅಗತ್ಯವಾಗಿದ್ದು, ಆದಷ್ಟು ಶೀಘ್ರದಲ್ಲಿ ಅವರು ಗುಣಮುಖರಾಗಿ ಯಕ್ಷಸೇವೆಯಲ್ಲಿ ತೊಡಗಿಸಿಕೊಳ್ಳುವಂತಾಗಲಿ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರು ಹೇಳಿದರು.
ಅವರು ಶನಿವಾರ ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಹಿರಿಯ ಯಕ್ಷಗಾನ ಕಲಾವಿದ ಹಾಗೂ ಯಕ್ಷಗಾನ ಅಧ್ಯಯನ ಕೇಂದ್ರ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾದ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರ ಚಿಕಿತ್ಸೆಗಾಗಿ 25 ಸಾವಿರ ರೂ ಚೆಕ್ನ್ನು ವಿತರಿಸಿ ಮಾತನಾಡಿದರು.
ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಪುರುಷೋತ್ತಮ ಪೂಂಜ ಅವರ ನಡುವೆ ಅವಿನಾಭಾವ ಸಂಬಂಧ ಇದೆ. ಯಕ್ಷಮಂಗಳ ಪ್ರಶಸ್ತಿಯ ಆಯ್ಕೆ ಸಮಿತಿ ಸದಸ್ಯರಾಗಿದ್ದು ಯಕ್ಷಗಾನ ಕೇಂದ್ರದ ಎಲ್ಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಲಹೆ, ಮಾರ್ಗದರ್ಶನಗಳನ್ನು ನೀಡುತ್ತಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಯಕ್ಷಗಾನ ಅರ್ಥಧಾರಿ ಭಾಸ್ಕರ ರೈ ಕುಕ್ಕುವಲ್ಲಿ ಅವರು ಮಾತನಾಡಿ, ಪುರುಷೋತ್ತಮ ಪೂಂಜರು ಯಕ್ಷಗಾನದ ಹಿರಿಯ ಭಾಗವತರು ಜೊತೆಗೆ ಯಕ್ಷಗಾನ ರಂಗದ ಸರ್ವಾಂಗಗಳನ್ನು ಬಲ್ಲ ಶ್ರೇಷ್ಠ ಕಲಾವಿದರಾಗಿದ್ದಾರೆ. ಇವರು ಶೀಘ್ರ ಗುಣಮುಖರಾಗಿ ಯಕ್ಷಗಾನ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೊ. ಶ್ರೀಪತಿ ಕಲ್ಲೂರಾಯ, ಶೋಭಾ ಪುರುಷೋತ್ತಮ ಪೂಂಜ, ದೀವಿತ್ ಎಸ್.ಕೋಟ್ಯಾನ್, ಸತೀಶ್ ಕೊಣಾಜೆ, ಸ್ವಾತಿ ಎಸ್.ರಾವ್ ಮಯೂರ್ ನಾಯ್ಗ ಉಪಸ್ಥಿತರಿದ್ದರು.

