
ಉಳ್ಳಾಲ: ಕಿನ್ಯಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಕೇಶ ತಿರುವು ಬಳಿ ಕಸ ಎಸೆದು ಹೋಗಿದ್ದ ವ್ಯಕ್ತಿಯ ವಿರುದ್ಧ ಸಾರ್ವಜನಿಕರು ಕಿನ್ಯಾ ಗ್ರಾಮ ಪಂಚಾಯಿತಿನಲ್ಲಿ ದೂರು ನೀಡಿದ್ದ ಹಿನ್ನೆಲೆಯಲ್ಲಿ, ವಾಹನ ಸಂಖ್ಯೆ ಆಧಾರದಡಿ ಉಳ್ಳಾಲ ಪೊಲೀಸ್ ಠಾಣೆಗೆ ಆರೋಪಿ ವಿರುದ್ಧ ಕಿನ್ಯಾ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪ್ರಕರಣ ದಾಖಲಿಸಿರುವುದಲ್ಲದೆ, ಕಸ ಎಸೆದವನಿಂದಲೇ ಮತ್ತೆ ಕಸವನ್ನು ಹೆಕ್ಕಿಸಿದ ಪ್ರಸಂಗ ಬುಧವಾರ ನಡೆದಿದೆ.
ಜು.11 ರಂದು ವ್ಯಕ್ತಿಯೊಬ್ಬ ಕೆಎ-19 ಎಚ್ಎ, 1879 ನಂಬರಿನ ಟಿವಿಎಸ್ ದ್ವಿಚಕ್ರ ವಾಹನದಲ್ಲಿ ಬಂದು ಗೋಣಿಚೀಲದಲ್ಲಿ ತ್ಯಾಜ್ಯ ತಂದು ಎಸೆಯುವಾಗಲೇ ಸಾರ್ವಜನಿಕರು ಫೆÇಟೋ ತೆಗೆದಿದ್ದರು. ಈ ಫೆÇಟೋವನ್ನು ಸ್ಥಳೀಯರು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಲ್ಲದೆ, ಕಿನ್ಯ ಪಂಚಾಯತ್ಗೂ ದೂರು ನೀಡಿದ್ದರು. ಅದರಂತೆ ಪ್ರಕರಣ ದಾಖಲಿಸಿಕೊಂಡ ಉಳ್ಳಾಲ ಪೊಲೀಸರು ಫೋಟೋದಲ್ಲಿದ್ದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡು, ವಾಹನ ಮಾಲೀಕ ಬದ್ರುದ್ದೀನ್ ಇರ್ಫಾನ್ ಉಳ್ಳಾಲ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿ ದಂಡ ಹಾಕಲಾಗಿದೆ. ಅಲ್ಲದೆ ಸ್ಥಳೀಯರ ಒತ್ತಾಯದಂತೆ ಕಿನ್ಯಾ ಗ್ರಾ.ಪಂ ಇರ್ಫಾನ್ ಅವರಿಂದಲೇ ಬಿಸಾಡಿದ ಕಸವನ್ನು ಹೆಕ್ಕಿಸುವ ಮೂಲಕ ಶಿಕ್ಷೆಯನ್ನೂ ನೀಡಿದ್ದಾರೆ.
ಸಂಕೇಶ ಬಳಿ ರಸ್ತೆಬದಿ ಮನೆ, ಕೋಳಿಯಂಗಡಿ ಮತ್ತು ಹೊಟೇಲುಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಪ್ಲಾಸ್ಟಿಕ್ ತೊಟ್ಟೆ ಮತ್ತು ಗೋಣಿ ಚೀಲದಲ್ಲಿ ಕಟ್ಟಿ ತಂದು ಎಸೆದು ಹೋಗಲಾಗುತ್ತಿತ್ತು. ಇದರಿಂದಾಗಿ ಈ ಪ್ರದೇಶ ಅತ್ಯಂತ ಕಲುಷಿತವಾಗಿ ದುರ್ನಾತ ಬೀರುತ್ತಿತ್ತು. ಅಲ್ಲದೆ ಸೊಳ್ಳೆ ಉತ್ಪತ್ತಿಯಾಗಿ ಆಸುಪಾಸಿನಲ್ಲಿರುವ ಮನೆಯವರಿಗೆ ವಾಸಿಸುವುದೇ ಕಷ್ಟವಾಗಿತ್ತು. ಇಷ್ಟು ಸಾಲದೆಂಬಂತೆ ಬೀದಿನಾಯಿಗಳು ತೊಟ್ಟೆ, ಗೋಣಿಚೀಲಗಳನ್ನು ಎತ್ತಿಕೊಂಡು ಯಾರದ್ದೋ ಮನೆಯ ಆವರಣಗೊಳಗೆ ಹಾಕಿ ಹೋಗುತ್ತಿದ್ದರೆ, ಕಾಗೆಗಳು ತೆರೆದ ಬಾವಿಗೆ ತ್ಯಾಜ್ಯ ಹಾಕುತ್ತಿದ್ದವು.

