





ಉಳ್ಳಾಲ : ಗ್ರಾಮ ಪಂಚಾಯಿತಿ ಸದಸ್ಯರು ತಮಗೆ ಬರುವ ಗೌರವ ಧನವನ್ನು ಆಶಾ ಕಾರ್ಯಕರ್ತರಿಗೆ ನೀಡಿರುವ ಕಾರ್ಯ ರಾಜ್ಯಕ್ಕೆ ಮಾದರಿ. ರಾಜ್ಯದಾದ್ಯಂತಹ ಇಂತಹ ಕಾರ್ಯಗಳು ನಡೆದು ಕೊರೊನಾ ಸಂಧಿಗ್ಧ ಸ್ಥಿತಿಯಲ್ಲಿ ಮನೆ ಮನೆಗೆ ಸುತ್ತಿ ಇತರರಿಗಾಗಿ ಶ್ರಮಿಸುವ ಆಶಾ ಕಾರ್ಯಕರ್ತರಿಗೆ ಸಹಾಯಕವಾಗಲಿ ಎಂದು
ಎಂದು ಶಾಸಕ ಯು.ಟಿ ಖಾದರ್ ಅಭಿಪ್ರಾಯಪಟ್ಟರು.
ಅವರು ನರಿಂಗಾನ ಗ್ರಾ.ಪಂ ನ ನವೀಕೃತಗೊಂಡ ಕಟ್ಟಡದ ಉದ್ಘಾಟನೆ ಹಾಗೂ ನರಿಂಗಾನ ಗ್ರಾಮದ ಕೊರೊನಾ ವಾರಿಯರ್ಸ ಹಾಗೂ ಸಾಧಕರಿಗೆ ಸನ್ಮಾನಿಸಿ ಮಾತನಾಡಿದರು.
ಗ್ರಾ.ಪಂ ನ ಸದಸ್ಯರು ಒಗ್ಗಟ್ಟಾಗಿ ಕಾರ್ಯಚರಿಸಿದಾಗ ಗ್ರಾಮದ ಅಭಿವೃದ್ಧಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನರಿಂಗಾನದ 30 ಮಂದಿ ಸದಸ್ಯರು ತಮಗೆ ಬರುವ ಗೌರವಧನವನ್ನು ಆಶಾ ಕಾರ್ಯಕರ್ತೆಯರಿಗೆ ನೀಡಿರುವುದು ಮಹತ್ತರ ಕಾರ್ಯ.ಗ್ರಾಮದ ಜನತೆ ಸಂಪೂರ್ಣ ಅಭಿವೃದ್ಧಿಗೆ ಒಂದೇ ಪಕ್ಷದ ಸದಸ್ಯರನ್ನು ಬೆಂಬಲಿಸಿದ್ದಾರೆ. ಅವರ ವಿಶ್ವಾಸಕ್ಕೆ ದ್ರೋಹ ಆಗದಂತೆ ಆಡಳಿತ ಸಮಿತಿ ಒಗ್ಗಟ್ಟಾಗಿ ಕಾರ್ಯಾಚರಿಸಬೇಕು. ಜುಲೈನಲ್ಲಿ ನೂತನ ರೇಷನ್ ಅಂಗಡಿ ಗ್ರಾಮದ ಎಲ್ಲರಿಗೂ ಅನುಕೂಲವಾಗುವ ಜಾಗದಲ್ಲಿ ಕಡ್ಡಾಯವಾಗಿ ಆರಂಭವಾಗಬೇಕು.
ಗ್ರಾಮದ 300 ಮನೆಮಂದಿಯನ್ನು ನೋಡಿಕೊಳ್ಳುವುದರಲ್ಲಿ ಕಷ್ಟವೇನಿಲ್ಲ.
ಸರಕಾರದ ಕಾನೂನು ವ್ಯಾಪ್ತಿಯಲ್ಲಿ ಪರಸ್ಪರ ಚರ್ಚಿಸಿ ಗ್ರಾಮಸ್ಥರಿಗೆ ಪರಿಹಾರ ಹುಡುಕಿ ಕೊಡಬೇಕಿದೆ. ಕೊರೊನಾ ವಾರಿಯಸ್೯ ಅವರನ್ನು ಗುರುತಿಸಿ ಗೌರವಿಸುವ ಗ್ರಾ.ಪಂ ನ ಕಾರ್ಯ ರಾಜ್ಯಕ್ಕೆ ಮಾದರಿ . ಆಶಾ ಕಾರ್ಯಕರ್ತೆಯರು ತಾವು ಸಂಗ್ರಹಿಸುವ ಮನೆ ಮನೆಯ ಡೇಟಾವನ್ನು ಗ್ರಾ.ಪಂ.ಗೂ ನೀಡಿ. ಗ್ರಾ.ಪಂ ಅಧಿಕಾರಿಗಳು ಅದನ್ನು ದಾಖಲೆಯಾಗಿ ಇಡಬೇಕಿದೆ ಎಂದರು.
ಈ ಸಂದರ್ಭ ಗ್ರಾ.ಪಂ ಅಧ್ಯಕ್ಷೆ ಶೈಲಜಾ ಶೆಟ್ಟಿ, ಉಪಾಧ್ಯಕ್ಷ ನವಾಝ್ ಕಲ್ಲರಕೋಡಿ, ಜಿ.ಪಂ ನಿಕಟಪೂರ್ವ ಸದಸ್ಯೆ ಮಮತಾ ಡಿ.ಎಸ್ ಗಟ್ಟಿ, ಪದ್ಮನಾಭ ನರಿಂಗಾನ, ಅಭಿವೃದ್ಧಿ ಅಧಿಕಾರಿ ರಜನಿ, ಕಾರ್ಯದರ್ಶಿ ನಳಿನಿ, ಸಿಡಿಪಿಓ ಸುಪರ್ ವೈಸರ್.ಸವಿತಾ ನವೀನ್., ವೈದ್ಯಾಧಿಕಾರಿ ಮಹಮ್ಮದ್ ಫಯಾಝ್ ಉಪಸ್ಥಿತರಿದ್ದರು.
‘ ರಾತ್ರಿ ಹಗಲೆನ್ನದೆ ಕೋವಿಡ್ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಕಾರ್ಯ ಅಭಿನಂದನೀಯ. ಎಲ್ಲರೂ ಗ್ರಾ.ಪಂ ಆಡಳಿತ ಜೊತೆಗೆ ಉತ್ತಮವಾಗಿ ಸಹಕರಿಸಿದ್ದಾರೆ. ಎಲ್ಲರೂ ತಮ್ಮ ಆರೋಗ್ಯದ ಕಡೆಗೂ ಹೆಚ್ಚಿನ ಗಮನವಹಿಸಿ ಮುಂದುವರಿಯಿರಿ’ .
ಶೈಲಜಾ ಶೆಟ್ಟಿ
ಗ್ರಾ.ಪಂ ಅಧ್ಯಕ್ಷೆ
ಈ ಸಂದರ್ಭ ಏಳು ಆಶಾ ಕಾರ್ಯಕರ್ತೆಯರು, ಇಬ್ಬರು ಆರೋಗ್ಯ ಸಹಾಯಕಿಯರು, ಈಜುಪಟು ನಾಗರಾಜ್ ಖಾರ್ವಿ ಅವರನ್ನು ಸನ್ಮಾನಿಸಲಾಯಿತು.

