





ಉಳ್ಳಾಲ: ಜನಸಂಖ್ಯೆ ಆಧಾರದಲ್ಲಿ ಗ್ರಾಮಮಟ್ಟದಲ್ಲಿ ವ್ಯಾಕ್ಸಿನೇಷನ್ ವಿತರಿಸುವ ಕುರಿತು ಸರಕಾರದ ಗಮನಕ್ಕೆ ತರುತ್ತೇನೆ. ಹಿರಿಯರಿಗೆ ಹಾಗೂ ಯುವಕರಿಗೆ ಸಮಪಾಲಾಗಿ ವ್ಯಾಕ್ಸಿನೇಷನ್ ಪೂರೈಸುವ ಪ್ರಯತ್ನವನ್ನು ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಸೋಮೇಶ್ವರ ಪುರಸಭೆಯಲ್ಲಿ ಶನಿವಾರ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆಗೆ ಹಮ್ಮಿಕೊಂಡಿದ್ದ ಕೋವಿಡ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ವ್ಯಾಕ್ಸಿನೇಷನ್ ಆರಂಭದಲ್ಲಿ ಯಾರೂ ತೆಗೆದುಕೊಳ್ಳಲು ಮುಂದಾಗಲಿಲ್ಲ. ಆದರೆ ಇದೀಗ ಒಮ್ಮಿಂದೊಮ್ಮೆಲೇ ಎಲ್ಲರೂ ವ್ಯಾಕ್ಸಿನ್ ಗಾಗಿ ಮುಗಿಬೀಳುವುದರಿಂದ ಕೊರತೆ ಉಂಟಾಗುವುದು ಸಹಜ. ಸರಕಾರ ಎಲ್ಲರಿಗೂ ವ್ಯಾಕ್ಸಿನ್ ಸಿಗುವಂತೆ ಪ್ರಯತ್ನವನ್ನು ಇಲಾಖೆಗಳ ಮುಖೇನ ಶ್ರಮವಹಿಸಿ ನಡೆಸುತ್ತಿದೆ. ಈವರೆಗೆ ಪುರಸಭೆ ಆಧಾರದಲ್ಲಿ ವ್ಯಾಕ್ಸಿನ್ ವಿತರಿಸುತ್ತಿರುವುದು ಗೊಂದಲಗಳಿಗೆ ಕಾರಣವಾಗುತ್ತಿದೆ. ಮುಂದಿನ ದಿನಗಳಲ್ಲಿ ಜನಸಂಖ್ಯೆ ಆಧಾರದಲ್ಲಿ ವ್ಯಾಕ್ಸಿನ್ ವಿತರಿಸುವ ಕುರಿತು ಸರಕಾರದ ಗಮನಕ್ಕೆ ತರುವುದಾಗಿ ತಿಳಿಸಿದ ಸಚಿವರು, ಸೋಮೇಶ್ವರ ಪುರಸಭೆ ವ್ಯಾಪ್ತಿಯಲ್ಲಿ ಬರುವ ಸೋಂಕಿತರ ವಿವರವನ್ನು ಪಡೆದರು.
ಶಾಸಕ ಯು.ಟಿ ಖಾದರ್ ಮಾತನಾಡಿ ಕೋಟೆಕಾರು, ಸೋಮೇಶ್ವರ, ತಲಪಾಡಿ, ಭಾಗಕ್ಕೆ 40 ವ್ಯಾಕ್ಸಿನ್ ವಿತರಣೆಯಾದರೆ, ಕಿನ್ಯಾ ಗ್ರಾಮಕ್ಕೆ 30 ವ್ಯಾಕ್ಸಿನ್ ಪೂರೈಸಲಾಗಿದೆ. ಸೋಮೇಶ್ವರ ಪುರಸಭೆಯಲ್ಲಿ ಹೆಚ್ಚಿನ ಜನಸಂಖ್ಯೆ ಇರುವುದರಿಂದ ವ್ಯಾಕ್ಸಿನ್ ಪೂರೈಕೆ ಸಾಕಾಗದು. ಈ ನಿಟ್ಟಿನಲ್ಲಿ ಜನಸಂಖ್ಯೆ ಆಧಾರದಲ್ಲಿ ಪೂರೈಸುವಂತೆ ಸಚಿವರಲ್ಲಿ ಕೇಳಿಕೊಂಡರು. ವ್ಯಾಕ್ಸಿನ್ ಗಾಗಿ ಆನ್ಲೈನ್ ನಲ್ಲಿ ಎಲ್ಲರಿಗೂ ನೋಂದಣಿ ಮಾಡಲು ಅಸಾಧ್ಯ. ಅದಕ್ಕಾಗಿ ಟಾಸ್ಕ್ ಫೋರ್ಸ್‍ನವರು ಅಂತಹವರಿಗೆ ಸಹಕರಿಸಬೇಕಿದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಜ್ಞಾ ಅಮ್ಮೆಂಬಳ, ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್, ದಿ ಮೈಸೂರ್ ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ. ನ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಅಲೆಮಾರಿ ಅರೆ ಅಲೆಮಾರಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಉಳ್ಳಾಲ ತಾಲೂಕು ತಹಶೀಲ್ದಾರ್ ಸಪ್ನಶ್ರೀ, ಮುಖ್ಯಾಧಿಕಾರಿ ವಾಣಿ ಆಳ್ವ,
ವೀಡಿಯೋ ಕಾಲ್ ಮೂಲಕ ಧೈರ್ಯ ತುಂಬಿದರು !
ಹೋಂ ಐಸೋಲೇಷನ್ನಿನಲ್ಲಿರುವ ಸೋಂಕಿತ ಮಹಿಳೆಯ ಜೊತೆಗೆ ಸಚಿವ ಕೋಟ ಅವರು ಮಾತನಾಡಿದರು. ಆರೋಗ್ಯದ ಕುರಿತು ವಿಚಾರಿಸಿದ ಸಚಿವರು ಪುರಸಭೆ ಸೇವೆಗಳನ್ನು ವಿವರಿಸಿದರು. ಧೈರ್ಯ ತುಂಬಿಸಿದ ಮಹಿಳೆಯಲ್ಲಿ ಆರೋಗ್ಯದಲ್ಲಿ ಏನು ಏರುಪೇರಾದರೂ ತಕ್ಷಣ ಪುರಸಭೆ ಟಾಸ್ಕ್ ಫೋರ್ಸ್ ಗಮನಕ್ಕೆ ತರುವಂತೆ ಸೂಚಿಸಿದರು. ಕೊರೊನಾ ಎರಡನೇ ಅಲೆ ಆರಂಭದಿಂದಲೇ ಸೋಮೇಶ್ವರ ಪುರಸಭೆಯಲ್ಲಿ ಸೋಂಕಿತರಿಗೆ ಧೈರ್ಯ ತುಂಬಿಸುವ ಸಲುವಾಗಿ ಹಾಗೂ ಮಾಹಿತಿ ಪಡೆಯಲು ವೀಡಿಯೋ ಕಾಲ್ ಸೇವೆಯನ್ನು ಆರಂಭಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕೋವಿಡ್ ಮುಂಜಾಗ್ರತ ಸ್ಟಿಕ್ಕರ್ ಬಿಡುಗಡೆಗೊಳಿಸಲಾಯಿತು ಹಾಗೂ ತ್ಯಾಜ್ಯದಿಂದ ತಯಾರಿಸಲಾದ ಗೊಬ್ಬರದ ಪೊಟ್ಟಣವನ್ನು ಖರೀದಿಸಿದ ವ್ಯಕ್ತಿಯೋರ್ವರಿಗೆ ವಿತರಿಸಲಾಯಿತು.
` ಎಪ್ರಿಲ್ ತಿಂಗಳಿನಿಂದ ಸೋಮೇಶ್ವರ ಗ್ರಾಮದಲ್ಲಿ 409 ಮಂದಿಯಲ್ಲಿ ಸೋಂಕು ದೃಢವಾಗಿದೆ. ಈ ಪೈಕಿ 10 ಮಂದಿ ಸಾವನ್ನಪ್ಪಿದ್ದಾರೆ. ಇವರಲ್ಲಿ ಒಬ್ಬರು ಮನೆಯಲ್ಲೇ ಇದ್ದು ಸಾವನ್ನಪ್ಪಿದ್ದಾರೆ . ಗ್ರಾಮದಲ್ಲಿ ಹೋಂ ಐಸೊಲೇಷನ್ನಿನಲ್ಲಿರುವ ಮಂದಿಗೆ ಎರಡು ಅಂಗಡಿಗಳನ್ನು ಗುರುತಿಸಲಾಗಿದ್ದು, ಅವರು ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ. ಹೋಂ ಐಸೊಲೇಷನ್ನಿನಲ್ಲಿರುವ ಮಂದಿಗೆ ವೀಡಿಯೋ ಕಾಲ್ ಮುಖೇನ ನಿತ್ಯ ಸಂಪರ್ಕಿಸಲಾಗುತ್ತಿದೆ. ಆರೋಗ್ಯ ಕ್ಷೇಮವನ್ನು ವಿಚಾರಿಸಿ ಬೇಕಾದ ಔಷಧಗಳನ್ನು ಆಶಾ ಕಾರ್ಯಕರ್ತೆಯರು ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದಾರೆ.
ವಾಣಿ ಆಳ್ವ
ಮುಖ್ಯಾಧಿಕಾರಿ
ಸೋಮೇಶ್ವರ ಪುರಸಭೆ

