
ಉಳ್ಳಾಲ: ರಾಜ್ಯ ಸರಕಾರ ಟೈಲರ್ ನವರಿಗೆ ಘೋಷಣೆ ಮಾಡಿದ ಪರಿಹಾರದ ಸಹಾಯಧನವನ್ನು ಕೇವಲ ಬಿಪಿಎಲ್ ಕಾರ್ಡುದಾರರಿಗೆ ಮಾತ್ರ ನೀಡುವುದರಿಂದ ಶೇ.70 ಕ್ಕಿಂತ ಹೆಚ್ಚಿನ ಕಾರ್ಮಿಕರು ಸೌಲಭ್ಯ ವಂಚಿತರಾಗಿದ್ದಾರೆ. ಸಹಾಯಧನ ಪಡೆಯುವ ಕೊನೆಯ ದಿನಾಂಕವನ್ನು ವಿಸ್ತರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಉಳ್ಳಾಲ ಕ್ಷೇತ್ರ ಸಮಿತಿ ವತಿಯಿಂದ ಶಾಸಕ ಯು.ಟಿ ಖಾದರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಪರಿಹಾರ ಮೊತ್ತ ರೂ.2,000 ಘೋಷಣೆ ಮಾಡುವ ಮೂಲಕ ಟೈಲರ್ ನವರಿಗೆ ನಿರಾಸೆ ಮಾಡಲಾಗಿದೆ. ಕಳೆದ ಬಾರಿ ಘೋಷಿಸಿದ ರೂ. 5,000 ಮೊತ್ತವನ್ನು ಕೊನೆಯ ಹಂತದಲ್ಲಿ ತಡೆಹಿಡಿದಿರುವುದರಿಂದ ಈ ಬಾರಿಯಾದರೂ ಅಷ್ಟೇ ಮೊತ್ತ ಘೋಷಿಸುವ ವಿಶ್ವಾಸವಿತ್ತು. ಒಂದೂವರೆ ತಿಂಗಳು ಅಂಗಡಿ ಬಂದ್ ಮಾಡಿ ಬಾಡಿಗೆ ಕೊಡಲು, ಲೋನ್ ಕಟ್ಟಲು , ದಿನ ಸಾಮಗ್ರಿ ಖರೀದಿಸಲು ಕಷ್ಟಕರವಾಗಿರುವ ಸಮಯದಲ್ಲಿ ರೂ.5,000 ಸಹಾಯಧನವನ್ನು ನೀಡಬೇಕು. ಮೇ.19ರ ಒಳಗೆ ಸ್ಮಾರ್ಟ್ ಕಾರ್ಡು ಮಾಡಿದ ಸದಸ್ಯರಿಗೆ ಮಾತ್ರ ಸೌಲಭ್ಯ ಎಂದು ನಮೂದಿಸಲಾಗಿದೆ. ಆ ಬಳಿಕ ಆನ್ಲೈನ್ ನಲ್ಲಿ ಸಲ್ಲಿಸಿದ ಅರ್ಜಿಗಳನ್ನು ಸ್ವೀಕರಿಸಿ ಕನಿಷ್ಟ ಜೂ.15 ರವರೆಗೆ ಸ್ಮಾಟ್ ್ ಕಾರ್ಡು ಅರ್ಜಿ ಸಲ್ಲಿಸಿದವರನ್ನು ಸೌಲಭ್ಯಕ್ಕೆ ಪರಿಗಣಿಸಬೇಕು, ಅಲ್ಲದೆ ಕೊನೆಯ ದಿನಾಂಕವನ್ನು ವಿಸ್ತರಿಸಬೇಕು. ಕಾರ್ಮಿಕ ಇಲಾಖೆಗೆ ಮೂರು ವರ್ಷಗಳ ಹಿಂದೆ ಸ್ಮಾರ್ಟ್ ಕಾರ್ಡಿಗೆ ಅರ್ಜಿ ಸಲ್ಲಿಸಿದ್ದರೂ ಹಲವರಿಗೆ ಕಾರ್ಡು ಸಿಕ್ಕಿರುವುದಿಲ್ಲ. ಟೈಲರ್ ಗಳಿಗೆ ಸಿಕ್ಕಿರುವ ಅನೇಕ ಕಾರ್ಡುಗಳಲ್ಲಿ ಉದ್ಯೋಗವನ್ನು ಮೆಕ್ಯಾನಿಕ್, ಚಿಂದಿ ಆಯುವವರು, ಹಮಾಲಿ, ಮನೆಕೆಲಸ ಹೀಗೆ ಬೇರೆಯಾಗಿ ಮುದ್ರಿತವಾಗಿದೆ. ಹಲವು ಕಾರ್ಡುಗಳಲ್ಲಿ ಜನ್ಮ ದಿನಾಂಕ, ಆಧಾರ್ ಸಂಖ್ಯೆ, ಹೆಸರು ಬದಲಾವಣೆಗೊಂಡು ಮುದ್ರಿತವಾಗಿದೆ. ಈ ಬಗ್ಗೆ ಜಿಲ್ಲೆಯ ಕಾರ್ಮಿಕ ಇಲಾಖೆಗೆ ಹಾಗೂ ಬೆಂಗಳೂರಿನ ಕಾರ್ಮಿಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂಬುವುದನ್ನು ಮನವಿಯಲ್ಲಿ ತಿಳಿಸಲಾಗಿದೆ.
ಈ ವೇಳೆ ಟೈಲರ್ಸ್ ಅಸೋಸಿಯೇಷನ್ ರಾಜ್ಯ ಸಂಘಟನಾ ಕಾರ್ಯದರ್ಶಿ ರಮೇಶ್ ಮಾಡೂರು, ಜಿಲ್ಲಾಧ್ಯಕ್ಷ ಪ್ರಜ್ವಲ್ ಕುಮಾರ್ , ಉಳ್ಳಾಲ ಕ್ಷೇತ್ರ ಅಧ್ಯಕ್ಷೆ ಜಯಲಾಕ್ಷ ಕೋಟ್ಯಾನ್, ದೇವದಾಸ್ ಕೆರೆಬೈಲು, ಕೇಶವ ಕದ್ರಿ ಉಪಸ್ಥಿತರಿದ್ದರು.

