

ಕುರ್ನಾಡು : ಕೊರೊನಾ ಕಾರಣದಿಂದ ಮೊದಲನೆಯ ಅಲೆ, ಎರಡನೆಯ ಅಲೆಯಿಂದಾದ ನಷ್ಟ ಸಂಕಷ್ಟ ತಪ್ಪಿಸಲು ಸಾಧ್ಯವಿಲ್ಲ. ಆದರೆ ಮುಂದೆ ಯಾವುದೇ ಅನಾಹುತ ನಡೆಯದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ನಮ್ಮದು ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.
ಕರ್ಣಾಟಕ ಸರಕಾರ, ದಕ್ಷಿಣ ಕನ್ನಡ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಯು. ಟಿ. ಖಾದರ್ ಅವರ ಸೂಚನೆಯಂತೆ ಕುರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ನಡೆದ ವೈದ್ಯರ ನಡೆ ಹಳ್ಳಿಯ ಕಡೆ ಗ್ರಾಮ ಮಟ್ಟದಲ್ಲಿ ಮನೆ ಮನೆ ಭೇಟಿ ಹಾಗೂ ಅನಾರೋಗ್ಯ ಪೀಡಿತರಿಗೆ ಧೈರ್ಯ ತುಂಬುವ ವಿನೂತನ ಕಾರ್ಯಕ್ರಮಕ್ಕೆ ಅವರು ಆನ್ಲೈನ್ ಮೂಲಕ ಚಾಲನೆ ನೀಡಿ ಮಾತನಾಡಿದರು.
ಇದೊಂದು ಮಾದರಿ ಕಾರ್ಯಕ್ರಮವಾಗಿದ್ದು ಆರೋಗ್ಯಕ್ಕೆ ಸಂಬಂಧಪಟ್ಟಂತೆ ನಮ್ಮ ಜಿಲ್ಲೆಯಲ್ಲಿರುವ ವೈದ್ಯಕೀಯ ಸೌಲಭ್ಯವನ್ನು ಜನರು ಸದುಪಯೋಗಪಡಿಸಿಕೊಳ್ಳಬೇಕು. ಈ ಕಾರ್ಯಕ್ರಮದಲ್ಲಿ ವೈದ್ಯರು ಕೇವಲ ಕೊರೊನಾ ಪರೀಕ್ಷೆ ಮಾತ್ರ ಮಾಡುವುದಲ್ಲ, ಅದರ ಜೊತೆಗೆ ಇತರ ಪರೀಕ್ಷೆ ಮಾಡುವ ಮೂಲಕ ಮನೆ ಬಾಗಿಲಲ್ಲಿ ಸೇವೆ ನೀಡಲಿದ್ದಾರೆ. ಜೊತೆಗ ಅನಾರೋಗ್ಯ ಪೀಡಿತರಿಗೆ ಧೈರ್ಯ ತುಂಬುವ ಕೆಲಸ ಮಾಡಲಿದ್ದಾರೆ. ಇದು ಇತರ ಕ್ಷೇತ್ರಕ್ಕೂ ಮಾದರಿ ಆಗಲಿ ಎಂದರು.
ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಮಾತನಾಡಿ ಸರಕಾರದ ಅತ್ಯುತ್ತಮ ಕಾರ್ಯಕ್ರಮ ಎಲ್ಲರ ಸಹಕಾರ ಸಿಕ್ಕಿದೆ. ಪರೀಕ್ಷೆ ಮಾಡಲು ಮನೆ ಬಾಗಿಲಿಗೆ ತೆರಳುವ ವೈದ್ಯರು ಸಿಬ್ಬಂದಿಗೆ ನಾವು ಸಂಪೂರ್ಣ ಸಹಕಾರ ಕೊಡಲಿದ್ದೇವೆ , ನಿಮ್ಮ ಜೊತೆಗೆ ನಾವಿದ್ದೇವೆ ಎಂದು ಧೈರ್ಯ ತುಂಬುವ ಮಾತುಗಳನ್ನಾಡಿದರು.
ಕುರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ, ಆಯಿಷತ್ ರೀಮಾ, ಲ್ಯಾಬ್ ಟೆಕ್ನಿಷಿಯನ್ ಮರೀನಾ ವೇಗಸ್, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ ಎಸ್. ಗಟ್ಟಿ, ಕುರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಣೇಶ್ ನಾಯ್ಕ್ ಕುರ್ನಾಡು, ಉಪಾಧ್ಯಕ್ಷೆ ಪ್ರೇಮ, ಮಾಜಿ ಅಧ್ಯಕ್ಷ ದೇವದಾಸ ಭಂಡಾರಿ ಕುರ್ನಾಡು, ತಾಲೂಕು ಪಂಚಾಯಿತಿ ಸದಸ್ಯ ಹೈದರ್ ಕೈರಂಗಳ, ಕಾಂಗ್ರೆಸ್ ರಾಜ್ಯ ಅಲ್ಪಸಂಖ್ಯಾತ ವಿಭಾಗ ಉಪಾಧ್ಯಕ್ಷ ಅಬ್ದುಲ್ ಜಲೀಲ್ ಮೋಂಟುಗೋಳಿ, ಬಾಳೆಪುಣಿ ಗ್ರಾಮ ಪಂಚಾಯಿತಿ ಸದಸ್ಯ ನಾಸಿರ್ ನಡುಪದವು, ಮಂಗಳೂರು ವಿವಿಯ ಮಾಜಿ ಸಿಂಡಿಕೇಟ್ ಸದಸ್ಯ ಮೊಯ್ದಿನ್ ಬಾದ್‍ಷಾ ಸಾಂಬಾರ್‍ತೋಟ, ನರಿಂಗಾನ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಮುರಲೀಧರ ಶೆಟ್ಟಿ ಮೋರ್ಲ ಹಾಗೂ ಶೇಖಬ್ಬ ನಿಡ್ಮಾಡ್, ಜಿಲ್ಲಾ ಮಾಜಿ ಒಂಬುಡ್ಸ್ಮೆನ್ ಶೀನ ಶೆಟ್ಟಿ, ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಕುರ್ನಾಡು ಗ್ರಾಮ ಪಂಚಾಯಿತಿ ಸದಸ್ಯ ಅಶ್ರಫ್ ಹಾಗೂ ಮಾಜಿ ಅಧ್ಯಕ್ಷರುಗಳು, ಸದಸ್ಯರು ಉಪಸ್ಥಿತರಿದ್ದರು.
`ರಾಜ್ಯ ಸರಕಾರದ ಈ ವಿಶೇಷ ಕಾರ್ಯಕ್ರಮಕ್ಕೆ ಶಾಸಕರು ಚಾಲನೆ ನೀಡಿದ್ದಾರೆ. ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶನದಂತೆ ವೈದ್ಯರು ಮನೆ ಮನೆಗೆ ಭೇಟಿ ನೀಡಿ ಆಸ್ಪತ್ರೆಗೆ ತೆರಳಿ ಪರೀಕ್ಷಿಸಲು ಹೆದರುವವರನ್ನು ಪರೀಕ್ಷಿಸಿ ಅನಿವಾರ್ಯವಾದರೆ ರ್ಯಾಪಿಡ್ ಟೆಸ್ಟ್ ಮಾಡಿಸಿ ಪಾಸಿಟಿವ್ ಕಂಡು ಬಂದತೆ ತಕ್ಷಣದಿಂದಲೇ ಸರಕಾರದ ಸುತ್ತೋಲೆಯಂತೆ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ’ .
ಅಬ್ದುಲ್ ಜಲೀಲ್ ಮೋಂಟುಗೋಳಿ
ಉಪಾಧ್ಯಕ್ಷರು
ಕಾಂಗ್ರೆಸ್ ರಾಜ್ಯ ಅಲ್ಪಸಂಖ್ಯಾತ ವಿಭಾಗ

