

ಉಳ್ಳಾಲ: ಕುತ್ತಾರು ಜಂಕ್ಷನ್ ಅಭಿವೃದ್ಧಿಗೆ ನೀಲಿನಕ್ಷೆ ತಯಾರಾಗಿದೆ. ಅಭಿವೃದ್ಧಿ ಸಂದರ್ಭ ರಸ್ತೆ ಬದಿಯ ಮೀನು ಮತ್ತು ತರಕಾರಿ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸಬೇಕು. ಅವರಿಗಾಗಿ ಮಿನಿ ಮಾರುಕಟ್ಟೆಯನ್ನು ಜಂಕ್ಷನ್ ನಲ್ಲಿ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಸರಕಾರದ ಆದ್ಯತೆಯಂತೆ ಅಂಗಡಿಗಳನ್ನು ಪಡೆದುಕೊಳ್ಳಬಹುದು ಎಂದು ಶಾಸಕ ಯು.ಟಿ ಖಾದರ್ ಹೇಳಿದರು.
ಅವರು ಕುತ್ತಾರು ಜಂಕ್ಷನ್ನಿನಲ್ಲಿ ಮುನ್ನೂರು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಕೈಗೊಂಡಿರುವ ಶ್ರಮಾದಾನ ಕಾರ್ಯದಲ್ಲಿ ಭಾಗವಹಿಸಿ ಮಾತನಾಡಿದರು.
ಕೋವಿಡ್ -19 ಕಾರ್ಯಾಚರಣೆ ನಡುವೆಯೂ ರಜೆಯ ದಿನವನ್ನು ಉಪಯೋಗಿಸಿಕೊಂಡು ಗ್ರಾ.ಪಂ ಅಧ್ಯಕ್ಷರು , ಉಪಾಧ್ಯಕ್ಷರು ಹಾಗೂ ಸದಸ್ಯರು ಸೇರಿಕೊಂಡು ಶ್ರಮಾದಾನ ಕೈಗೊಂಡಿರುವ ಕಾರ್ಯ ಶ್ಲಾಘನೀಯ. ಈ ಮೂಲಕ ಗಾಂಧೀಜಿಯ ಕನಸನ್ನು ನನಸುಗೊಳಿಸುವ ಕಾರ್ಯವಾಗಿದೆ ಎಂದ ಅವರು ರೂ. 20 ಕೋಟಿ ಅನುದಾನದಲ್ಲಿ ದೇರಳಕಟ್ಟೆಯಿಂದ ಕುತ್ತಾರು ಜಂಕ್ಷನ್ ಚತುಷ್ಪಥ ರಸ್ತೆಗೆ ಅನುದಾನ ಮಂಜೂರಾಗಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭಗೊಳ್ಳಲಿದೆ. ಈ ಸಂದರ್ಭ ಜನನಿಬಿಡ ಮತ್ತು ಹಲವು ಮಳಿಗೆಗಳ ಕೇಂದ್ರ ಸ್ಥಾನ ಆಗಿರುವ ಕುತ್ತಾರು ಜಂಕ್ಷನ್ ಅಭಿವೃದ್ಧಿಯ ನೀಲಿನಕ್ಷೆಯನ್ನು ತಯಾರಿಸಲಾಗಿದೆ. ಅಭಿವೃದ್ಧಿ ಕಾರ್ಯ ಲೋಕೋಪಯೋಗಿ ಇಲಾಖೆ ಜೊತೆಗೆ ಹಂತ ಹಂತವಾಗಿ ನಡೆಯಲಿದೆ. ಮಳೆಗಾಲದಲ್ಲಿ ಚರಂಡಿ ಬ್ಲಾಕ್ ಆಗಿ ಸಾರ್ವಜನಿಕರಿಗೆ ತೊಂದರೆಯಾಗುವಂತಹ ಪರಿಸ್ಥಿತಿ ಜಂಕ್ಷನ್ನಿನಲ್ಲಿದೆ. ಈ ಕುರಿತು ಅಭಿವೃದ್ಧಿ ಸಂದರ್ಭ ಪರಿಹಾರ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭ ಮುನ್ನೂರು ಗ್ರಾ.ಪಂ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ, ಉಪಾಧ್ಯಕ್ಷೆ ರಾಜೇಶ್ವರಿ ಸದಸ್ಯರುಗಳಾದ ಅಝೀಝ್, ಹಸೈನಾರ್, ಗಣೇಶ್, ನವೀನ್, ಇಸ್ಮಾಯಿಲ್ , ರವೂಫ್, ನೌಸೀರ್ ಸಾದಿಕ್ ಉಪಸ್ಥಿತರಿದ್ದರು.

