
ಉಳ್ಳಾಲ: ಅಂಗಡಿ ಬಳಿ ಮಾಸ್ಕ್ ಧರಿಸದೇ ಕುಳಿತಿದ್ದವರಿಗೆ ಎಚ್ಚರಿಕೆ ನೀಡಿದ ಕಿನ್ಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಸಿಬ್ಬಂದಿ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ವ್ಯಕ್ತಿಯೋರ್ವನ ವಿರುದ್ದ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿನ್ಯಾ ಬೆಳರಿಂಗೆ ನಿವಾಸಿ ಸಾಕಿರ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಬೆಳರಿಂಗೆ ಬಳಿಯ ಕೆಬಿಎಂ ಜನರಲ್ ಸ್ಟೋರ್ ಬಳಿ ಮಾಸ್ಕ್ ಹಾಕದೇ ಕುಳಿತಿದ್ದವರಿಗೆ ಕಿನ್ಯಾ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿ ಮಹಮ್ಮದ್ ಅಶ್ರಫ್ ಎಚ್ಚರಿಕೆ ನೀಡಿದ್ದರು. ಈ ವೇಳೆ ತಗಾದೆ ತೆಗೆದ ಸಾಕಿರ್ ,ತನ್ನ ಮನೆಯ ಅಂಗಳದಲ್ಲಿ ಕುಳಿತಿದ್ದೇನೆ. ಮಾಸ್ಕ್ ಹಾಕಬೇಕೆಂದೇನಿಲ್ಲ. ಏನು ಬೇಕಾದರೂ ಮಾಡಿ ‘ ನೀವ್ಯಾರು ಕೇಳಲು’ ಎಂದು ಉಡಾಫೆಯಾಗಿ ವರ್ತಿಸಿದ್ದಾನೆ. ಈ ಕುರಿತು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಉಳ್ಳಾಲ ಠಾಣೆಯಲ್ಲಿ ನೀಡಿರುವ ದೂರಿನಂತೆ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯಿದೆ ಉಲ್ಲಂಘನೆ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.

