


ಉಳ್ಳಾಲ: ಗ್ರಾಮೀಣ ಮಟ್ಟದ ಜಂಕ್ಷನ್ಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ. ಭವಿಷ್ಯದಲ್ಲಿ ಹೆಚ್ಚಿನ ಜನಜಂಗುಳಿ ಉಂಟಾದಾಗ, ವಾಹನಗಳ ಓಡಾಟಕ್ಕೆ ಅಡಚಣೆಯಾಗದೆ, ಇನ್ನಷ್ಟು ಅಭಿವೃದ್ಧಿಗೆ ಕುಂಠಿತವಾಗಬಾರದು ಅನ್ನುವ ಉದ್ದೇಶವನ್ನಿಟ್ಟುಕೊಂಡು ಮಂಗಳೂರು ಕ್ಷೇತ್ರದ ಗ್ರಾಮೀಣ ಭಾಗದಲ್ಲಿರುವ ಹಲವು ಜಂಕ್ಷನ್ನುಗಳ ಅಭಿವೃದ್ಧಿ ಕಾರ್ಯ ನಡೆಸಲಾಗುತ್ತಿದೆ ಎಂದು ಶಾಸಕ ಯು.ಟಿ ಖಾದರ್ ಹೇಳಿದರು.
ಅವರು ನಾಟೆಕಲ್ ಜಂಕ್ಷನ್ನಿನಲ್ಲಿ ರಸ್ತೆ ಅಗಲೀಕರಣ ಹಾಗೂ ಸರ್ಕಲ್ ನಿರ್ಮಾಣದ ಕಾಮಗಾರಿಯನ್ನು ಮಂಗಳವಾರ ವೀಕ್ಷಿಸಿ ಮಾತನಾಡಿದರು.
ನಾಟೆಕಲ್, ಕಲ್ಕಟ್ಟ , ಡಿ.ಜಿ ಕಟ್ಟೆ, ಮೊಂಟೆಪದವು ಜಂಕ್ಷನ್ನುಗಳ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗಿದೆ. ದೇರಳಕಟ್ಟೆ ಮತ್ತು ಅಸೈಗೋಳಿ ಜಂಕ್ಷನ್ನಿನ ಅಭಿವೃದ್ಧಿ ಶೀಘ್ರದಲ್ಲಿ ನಡೆಯಲಿದೆ. ರೂ.10 ಕೋಟಿ ಅನುದಾನದಡಿ ಕುತ್ತಾರಿನಿಂದ ದೇರಳಕಟ್ಟೆವರೆಗಿನ ಚತುಷ್ಪಥ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ತೊಕ್ಕೊಟ್ಟುವಿನಿಂದ ಕುತ್ತಾರು ರಸ್ತೆಗೆ ರೂ.24 ಕೋಟಿ ಮಂಜೂರಾಗಿದೆ. ಆದರೆ ಅನುದಾನ ಬಿಡುಗಡೆಯಾಗದ ಕೊರತೆಯಿಂದ ಕಾಮಗಾರಿ ಕುಂಠಿತವಾಗಿದೆ. ಹಾಗೂ ದೇರಳಕಟ್ಟೆಯಿಂದ ಕಂಬ್ಲಪದವು ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಮಾಡುವ ಮುಂದಿನ ಯೋಜನೆ ಶೀಘ್ರದಲ್ಲೇ ಆರಂಭವಾಗಲಿದೆ. ಕಾಂಗ್ರೆಸ್ ಸರಕಾರ ಇಲ್ಲದಿರುವುದರಿಂದ ಕಾಮಗಾರಿ ಕುಂಠಿತವಾಗಿದೆ. ಪ್ರಸ್ತುತ ಸರಕಾರವಿರುವ ಸಂದರ್ಭ ಆದಷ್ಟು ಪ್ರಯತ್ನ ಮಾಡುತ್ತೇವೆ. ಆದರೆ ಆಗದೇ ಇದ್ದಲ್ಲಿ ಮುಂದಿನ ಬಾರಿ ಬರುವ ಕಾಂಗ್ರೆಸ್ ಸರಕಾರದ ಸಂದರ್ಭ ಬಾಕಿಯಿರುವ ಕಾಮಗಾರಿಗಳನ್ನು ನಡೆಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸರ್ಕಲ್ ನಾಮಕರಣ ಗ್ರಾಮಸ್ಥರಿಗೆ ಬಿಟ್ಟಿದ್ದು : ನಾಟೆಕಲ್ ಸರ್ಕಲ್ ಗೆ ನಾಮಕರಣ ಮಾಡುವುದನ್ನು ಗ್ರಾಮಸ್ಥರಿಗೆ ಬಿಡಲಾಗಿದೆ. ಅವರು ನಿರ್ಣಯಿಸಿ ಕೊಡುವ ಹೆಸರನ್ನು ಸರ್ಕಲ್ ಗೆ ನೀಡುತ್ತೇವೆ ಎಂದು ಶಾಸಕರು ತಿಳಿಸಿದರು.
ಈ ವೇಳೆ ತಾ.ಪಂ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್, ಝಕರಿಯಾ ಮಲಾರ್, ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ದಾಸ್ ಪ್ರಕಾಶ್ , ಗುತ್ತಿಗೆದಾರ ಕೆ.ಎಂ ಮೊಹಮ್ಮದ್ ರಫೀ , ಸ್ಥಳೀಯ ಅಂಗಡಿ ಮಾಲೀಕರಾದ ಇಬ್ರಾಹಿಂ ಎನ್. ನಾಟೆಕಲ್, ಸಜೀದ್ ನಾಟೆಕಲ್ ಉಪಸ್ಥಿತರಿದ್ದರು.

