UN networks
ಉಳ್ಳಾಲ: ಉಳ್ಳಾಲದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಜಿಲ್ಲಾಧಿಕಾರಿ ಡಾ.ಕೆ.ಎಸ್ ರಾಜೇಂದ್ರ ನೇತೃತ್ವದಲ್ಲಿ ಕೋವಿಡ್-19 ವ್ಯಾಪಕವಾಗಿ ಹರಡುವಿಕೆ ಕುರಿತು ನಡೆಸಿದ ತುರ್ತು ಸಭೆಗೆ ಒಂದು ಗಂಟೆ ತಡವಾಗಿ ಬಂದ ಕೋಟೆಕಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯನ್ನು ಉಸ್ತುವಾರಿ ಸಚಿವರು ತರಾಟೆಗೆ ತೆಗೆದುಕೊಂಡು ಅಮಾನತುಗೊಳಿಸುವ ಎಚ್ಚರಿಕೆಯನ್ನು ನೀಡಿದ ಘಟನೆ ಉಳ್ಳಾಲ ನಗರಸಭೆಯಲ್ಲಿ ನಡೆಯಿತು.


ಕೋಟೆಕಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪ್ರಭಾಕರ್ ಎಂ.ಪಿ ಇವರನ್ನು ತರಾಟೆಗೆ ತೆಗೆದುಕೊಂಡರು. ಸಭೆ ಆರಂಭವಾದ ಬಳಿಕ ಉಳ್ಳಾಲ ನಗರಸಭೆ, ಸೋಮೇಶ್ವರ ಪುರಸಭೆ ಹಾಗೂ ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸೋಂಕಿತರ ವಿವರಗಳನ್ನು ಜಿಲ್ಲಾಧಿಕಾರಿಗಳು ಕೇಳಿದ್ದರು. ಪೌರಾಯುಕ್ತರು ಹಾಗೂ ಮುಖ್ಯಾಧಿಕಾರಿ ಇಬ್ಬರು ತಮ್ಮ ವ್ಯಾಪ್ತಿಯ ಸೋಂಕಿತರ ವರದಿಯನ್ನು ನೀಡಿದ್ದು, ಕೋಟೆಕಾರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗೈರಾಗಿದ್ದರು. ಈ ವೇಳೆ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಕೋಟ, ಮುಖ್ಯಾಧಿಕಾರಿಗೆ ಶೀಘ್ರವೇ ನೋಟೀಸು ಜಾರಿಗೊಳಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು. ಬಳಿಕ ತಕ್ಷಣಕ್ಕೆ ಅಮಾನತುಗೊಳಿಸುವಂತೆ ಆಗ್ರಹಿಸಿದರು. ಸಭೆ ಆರಂಭವಾಗಿ ಒಂದು ಗಂಟೆ ಬಳಿಕ ಮುಖ್ಯಾಧಿಕಾರಿ ಪ್ರಭಾಕರ್ ಎಂ.ಪಿ ಸಭೆಗೆ ಹಾಜರಾಗಿದ್ದು, ಉಸ್ತುವಾರಿ ಸಚಿವರು ತೀವ್ರ ತರಾಟೆಗೆ ತೆಗೆದುಕೊಂಡರು. ಈ ವೇಳೆ ತಾನು ಕೊರೊನಾ ಸಾವನ್ನಪ್ಪಿದ ವ್ಯಕ್ತಿಯ ಅಂತಿಮ ಕ್ರಿಯೆಗೆ ತೆರಳಿರುವುದಾಗಿ ತಿಳಿಸಿದ್ದರು. ಆದರೆ ಸೋಂಕಿತರ ಅಂತಿಮ ಕ್ರಿಯೆಯಲ್ಲಿ ಅಗತ್ಯ ಬಿದ್ದಲ್ಲಿ ಮಾತ್ರವೇ ಮುಖ್ಯಾಧಿಕಾರಿಗಳು ಭಾಗವಹಿಸಬೇಕಾಗಿದೆ. ಎಲ್ಲಿಯೂ ಮುಖ್ಯಾಧಿಕಾರಿಗಳು ಭಾಗವಹಿಸುತ್ತಿಲ್ಲ, ಅಂತಿಮ ಕ್ರಿಯೆಗೆ ಅನುಮತಿ ನೀಡುವುದಷ್ಟೇ ಕೆಲಸವೆಂದು ಸೂಚಿಸಿದರು. ಅಲ್ಲದೆ ತಡವಾಗಿರುವ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ನೀಡುವಂತೆ ಸೂಚಿಸಿದರು.


