ಕುದ್ರೋಳಿ : ಕಾರ್ಯಗಾರದಲ್ಲಿ ಉತ್ತಮ ವಿಷಯಗಳು ಚರ್ಚೆಗೆ ಬರಲಿ. ಉತ್ತಮ ನಿರ್ಣಯಗಳು ಕೂಡಾ ಹೊರಬರುವ ಮೂಲಕ ಉಪನ್ಯಾಸಕರಿಗೆ ಯಶಸ್ವಿ ಕಾರ್ಯಗಾರವಾಗಿ ಮೂಡಿಬರಲಿ ಎಂದು ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್‍ಚಂದ್ರ ಡಿ ಸುವರ್ಣ ಹೇಳಿದರು.

ಅವರು ಕುದ್ರೋಳಿ ನಾರಾಯಣ ಗುರು ಕಾಲೇಜು , ದ.ಕ ಜಿಲ್ಲಾ ಪದವಿಪೂರ್ವ ಕಾಲೇಜು, ಸಮಾಜಶಾಸ್ತ್ರ ಉಪನ್ಯಾಸಕರ ಸಂಘ ,ಮಂಗಳೂರು ಆಶ್ರಯದಲ್ಲಿ ನಗರದ ಕುದ್ರೋಳಿ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಗುರುವಾರ ಜರಗಿದ ಪುನಶ್ಚೇತನ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮನೆಯಲ್ಲಿ ಪೆÇೀಷಕರು, ಶಾಲೆಯಲ್ಲಿ ಶಿಕ್ಷಕರು ಮುಂದಿನ ಪೀಳಿಗೆಯನ್ನು ಉತ್ತಮವಾಗಿ ಬೆಳೆಸುವಲ್ಲಿ ಜವಾಬ್ದಾರರಾಗಿರುತ್ತಾರೆ. ವಿದ್ಯಾರ್ಥಿಗಳು ಶಿಕ್ಷಕರ ಮಾತಿಗೆ ಹೆಚ್ಚಿನ ಗಮನ ಕೊಡುವವರು, ಈ ನಿಟ್ಟಿನಲ್ಲಿ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುವಲ್ಲಿ ಉಪನ್ಯಾಸಕರು ಶ್ರಮಿಸಬೇಕು. ಈ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ. ಈಗಿನ ವಿದ್ಯಾರ್ಥಿಗಳಲ್ಲಿ ದೇಶದ ಸಂಸ್ಕೃತಿ, ಸಂಸ್ಕಾರ, ಪರಂಪರೆ ತಿಳಿದಿರುವುದಿಲ್ಲ. ಜ್ಞಾನದ ಕೊರತೆಗೆ ಶಿಕ್ಷಕರೇ ಕಾರಣರಾಗಿರುತ್ತಾರೆ. ಸಿಲೆಬಸ್ ಮುಗಿಸುವ ಕೆಲಸವನ್ನಷ್ಟೇ ಶಿಕ್ಷಕರು ಮಾಡುತ್ತಿದ್ದಾರೆ. ಆದರೆ ಈ ಹಿಂದೆ ಶಿಕ್ಷಕರು ವಿಶೇಷ ಕಾಳಜಿ ವಹಿಸುತ್ತಿದ್ದ ಕಾಲವಿತ್ತು. ಈಗಿನ ಸಂದರ್ಭ ಶಿಕ್ಷಣ ವ್ಯಾಪಾರೀಕರಣ ಆಗಿದೆ. ಆದರೆ ಅದನ್ನು ಸರಿದೂಗಿಸಲು ಜವಾಬ್ದಾರಿ ಹುದ್ದೆ ಹೊಂದಿರುವ ಶಿಕ್ಷಕರು ಮಕ್ಕಳನ್ನು ಉತ್ತಮ ಪ್ರಜೆಯನ್ನಾಗಿ ರೂಪಿಸುವ ಮೂಲಕ ಸಮಾಜಮುಖಿಯಾಗಿ ಹೊರತರಬೇಕು ಎಂದರು.











ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಹಮ್ಮದ್ ಇಮ್ತಿಯಾಝ್ ಮಾತನಾಡಿ ` ಕಳೆದ ಸಾಲಿನಂತೆ ರಾಜ್ಯದಲ್ಲಿ ದ.ಕ ಜಿಲ್ಲೆ ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆಯಬೇಕಿದೆ. ಎಲ್ಲರೂ ಅದಕ್ಕಾಗಿ ಶ್ರಮಿಸಬೇಕಿದೆ . ಕೊರೊನಾ ಲಾಕ್‍ಡೌನ್ ಸಂದರ್ಭ ಯೂಟ್ಯೂಬ್ ಮುಖೇನ ಆನ್‍ಲೈನ್ ಕ್ಲಾಸ್‍ಗಳು ಇಡೀ ರಾಜ್ಯಕ್ಕೆ ಜಿಲ್ಲೆಯಿಂದ ಹಂಚಲಾಯಿತು. ಇದು ಜಿಲ್ಲೆಯ ಪ್ರಾಚಾರ್ಯರ, ಉಪನ್ಯಾಸಕರ ಶ್ರಮದಿಂದ ಸಾಧ್ಯವಾಗಿದೆ. ಕಲೆ ವಿಭಾಗಕ್ಕೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ರಾಜ್ಯಾದ್ಯಂತ ಕೇವಲ 33,000 ದಷ್ಟು ಮಂದಿ ವಿದ್ಯಾರ್ಥಿಗಳು ಕಲಾ ವಿಭಾಗವನ್ನು ಆಯ್ಕೆ ಮಾಡುತ್ತಿದ್ದರೆ, ಜಿಲ್ಲೆಯಲ್ಲಿ ಕೇವಲ 4,000 ವಿದ್ಯಾರ್ಥಿಗಳು ಮಾತ್ರ ಕಲಾ ವಿಭಾಗವನ್ನು ಆಯ್ಕೆ ಮಾಡುತ್ತಿದ್ದಾರೆ. ಉಪನ್ಯಾಸಕರು ವಿದ್ಯಾರ್ಥಿಗಳ ಜತೆಗೆ ಖಾಸಗಿಯಾಗಿ ಸಮಾಲೋಚಿಸಿದಾಗ ಆತನ ಜ್ಞಾನವನ್ನು ಅರಿಯಲು ಸುಲಭವಾಗುವುದು. ಕೊರೊನಾ ಸಂದರ್ಭ ಆಗುವಂತಹ ಆಗುಹೋಗುಗಳಿಂದ ವಿದ್ಯಾರ್ಥಿಗಳಲ್ಲಿ ಮಾನಸಿಕವಾಗಿ ಜಂಜಾಟಗಳನ್ನು ಹುಟ್ಟುಹಾಕಿವೆ. ಈ ನಿಟ್ಟಿನಲ್ಲಿ ಉಪನ್ಯಾಸಕರು ಅವರೊಂದಿಗೆ ಬೆರೆತು ಪಠ್ಯಕ್ರಮದ ಜತೆಗೆ ವಿದ್ಯಾರ್ಥಿಗಳ ಖಾಸಗಿ ವಿಚಾರಗಳನ್ನು ಸಮಾಲೋಚಿಸಬೇಕಾಗಿದೆ ಎಂದರು.
ಈ ಸಂದರ್ಭ 2019-20 ನೇ ಸಾಲಿನಲ್ಲಿ ಕಲಾ ವಿಭಾಗದ ನಾಲ್ಕು ವಿಷಯಗಳಲ್ಲಿ ಶೇ.100 ಅಂಕ ಗಳಿಸಿದ ವಿದ್ಯಾರ್ಥಿನಿ ರಿಷಲ್ ಫೆರ್ನಾಂಡಿಸ್ ಅವರನ್ನು ಅಭಿನಂದಿಸಲಾಯಿತು.
ಪ್ರಾಂಶುಪಾಲರ ಸಂಘದ ಅಧ್ಯಕ್ಷ ಉಮೇಶ್ ಕರ್ಕೇರ, ಸಮಾಜಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷ ಶಿವರಾಂ ನಾಯ್ಕ್ , ನಿಕಟಪೂರ್ವ ಅಧ್ಯಕ್ಷೆ ಅನುಸೂಯ ಕೆ.ಪಿ
ಸಂಸ್ಥೆಯ ಪ್ರಾಂಶುಪಾಲ ರೇಣುಕಾ ಅರುಣ್ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿ ಯಾಗಿ ಉಪನ್ಯಾಸಕ ಶಂಕರನಾರಾಯಣ ನಾಯ್ಕ್ ಭಾಗವಹಿಸಿದ್ದರು.
ಶಿವರಾಮ್ ನಾಯ್ಕ್ ಸ್ವಾಗತಿಸಿದರು. ವಿ.ಸುಬ್ರಹ್ಮಣ್ಯ ಭಟ್ ನಿರೂಪಿಸಿದರು. ವಸಂತ ಕುಮಾರ್ ವಂದಿಸಿದರು.

