



ಮಂಗಳೂರು: ನಗರದ ಪಾಂಡೇಶ್ವರ ಟಿ.ಎಂ.ಎ ಪೈ ಸಭಾಂಗಣದ ಎದುರುಗಡೆ ಕಟ್ಟಡ ನಿರ್ಮಾಣಕ್ಕಾಗಿ ಅಗೆಯಲಾದ ಹೊಂಡದ ನೀರಿನಲ್ಲಿ ಸಿಲುಕಿದ ಪಾರಿವಾಳವನ್ನು ಪರಿಸರವಾದಿಯೋರ್ವರ ಕರೆಗೆ ಓಗೊಟ್ಟು ಬಂದ ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಿಸುವ ಮೂಲಕ ಮಾನವೀಯತೆಯನ್ನು ಎತ್ತಿ ಹಿಡಿದಿದ್ದಾರೆ.
ನಗರದ ಟಿಎಂಎ ಪೈ ಹಾಲ್ ಎದುರುಗಡೆ ಕಟ್ಟಡ ನಿರ್ಮಾಣಕ್ಕಾಗಿ ಬೃಹತ್ ಗಾತ್ರದ ಹೊಂಡವನ್ನು ಅಗೆದು ಸಮಯಗಳೇ ಆಗಿವೆ. ಆದರೆ ಹೊಂಡ ಪೂರ್ತಿ ನೀರಿನಿಂದ ತುಂಬಿದೆ. ಇಲ್ಲಿ ಸುತ್ತಾಡುತ್ತಿದ್ದ ಪಾರಿವಾಳ ನೀರಿಗೆ ಬಿದ್ದು ಮೇಲೆ ಬರಲು ಸಾಧ್ಯವಾಗದೆ ಒದ್ದಾಡಲು ಆರಂಭಿಸಿದೆ. ಇದನ್ನು ಗಮನಿಸಿದ ಪರಿಸರವಾದಿ ಶಶಿಧರ್ ಶೆಟ್ಟಿ ಅವರು ಕೂಡಲೇ ಪಾಂಡೇಶ್ವರ ಅಗ್ನಿ ಶಾಮಕ ದಳದ ಠಾಣೆಗೆ ಕರೆ ಮಾಡಿದ್ದಾರೆ. ಮೊದಲಿಗೆ ಕರೆ ಸ್ವೀಕರಿಸಿದ ಸಿಬ್ಬಂದಿ ಪಾರಿವಾಳ ರಕ್ಷಣೆ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದರೂ ಬಳಿಕ ದೂರವಾಣಿ ಮೂಲಕ ಸ್ಪಂಧಿಸಿದ ಸಿಬ್ಬಂದಿ ಕಿಶೋರ್ ಎಂಬವರು ತಕ್ಷಣಕ್ಕೆ ಸ್ಪಂಧಿಸುವ ಭರವಸೆ ನೀಡಿದ್ದರು. ಅಲ್ಲದೆ ಸ್ಥಳಕ್ಕೆ ದೌಡಾಯಿಸಿ ಹರಸಾಹಸ ಪಟ್ಟು ಪಾರಿವಾಳವನ್ನು ರಕ್ಷಿಸುವ ಮೂಲಕ ಕರ್ತವ್ಯದ ಜೊತೆಗೆ ಮಾನವೀಯತೆಯನ್ನು ಮೆರೆದಿದ್ದಾರೆ.


