
ಉಳ್ಳಾಲ: ಬೈಕೊಂದು ಸ್ಕೂಟಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಕಡಬದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬುಧವಾರದಂದು ನಡೆದಿದೆ.
ಮೃತ ಯುವಕನನ್ನು ಕಡಬ ತಾಲೂಕಿನ ಮರ್ಧಾಳ ಸಮೀಪದ ಕೆರ್ಮಾಯಿ ನಿವಾಸಿ ಸನು ಅಬ್ರಹಾಂ (21) ಎಂದು ಗುರುತಿಸಲಾಗಿದೆ. ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಯಾಗಿದ್ದ ಸನು ಅಬ್ರಹಾಂ ಚಲಾಯಿಸುತ್ತಿದ್ದ ಯಮಹಾ ಯಂಟಿ ಬೈಕ್ ಮಂಗಳೂರಿನ ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ಸೋಮವಾರ ರಾತ್ರಿ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡಿದ್ದ ಸನು ಅಬ್ರಹಾಂನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಂತಾಜನಕ ಸ್ಥಿತಿಯಲ್ಲಿದ್ದ ಸನು ಅಬ್ರಹಾಂ ಚಿಕಿತ್ಸೆ ಫಲಕಾರಿಯಾಗದೆ ಬುಧವಾರದಂದು ಮೃತಪಟ್ಟಿದ್ದಾರೆ. ಮೃತರ ತಾಯಿ ಎರಡು ವರ್ಷಗಳ ಹಿಂದಷ್ಟೇ ಸಿಡಿಲು ಬಡಿದು ಮೃತಪಟ್ಟಿದ್ದರು. ಮೃತರು ತಂದೆ, ಓರ್ವ ಸಹೋದರನನ್ನು ಅಗಲಿದ್ದಾರೆ.

