





ಬೋಳಿಯಾರು :ಮೈಸೂರು ಇಂಡಸ್ಟ್ರೀಸ್ ಸಂಸ್ಥೆಯ ಲಾಭದ ಹಣ ತಮ್ಮ ಕ್ಷೇತ್ರಕ್ಕೂ ತಂದು ಅಭಿವೃದ್ಧಿಗೆ ಬಳಸಲು ಸಾಧ್ಯ ಎಂದು ತೋರಿಸುವ ಜೊತೆಗೆ ತಾನು ಕಲಿತ ಎಲ್ಲ ಶಾಲೆಗಳು, ಸೇವಾಶ್ರಮಕ್ಕೆ ನೀಡುವ ಮೂಲಕ ಅಧ್ಯಕ್ಷ ಸಂತೋಷ್ ಕುಮಾರ್ ಸಾಮಾಜಿಕ ಬದ್ಧತೆ ತೋರ್ಪಡಿಸಿದ್ದಾರೆ ಎಂದು ಅಮ್ಮೆಂಬಳ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಟಿ.ಜಿ.ರಾಜಾರಾಂ ಭಟ್ ಅಭಿಪ್ರಾಯಪಟ್ಟರು.
ಬೋಳಿಯಾರ್ ಅಮರ್ ದೀಪ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಮೈಸೂರು ಎಲೆಕ್ಟ್ರಿಕಲ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಿಆರ್ ಎಸ್ ನಿಧಿಯಿಂದ ಬಿಡುಗಡೆಗೊಳಿಸಲಾದ 25 ಲಕ್ಷ ಅನುದಾನ ಮಂಗಳೂರು ಕ್ಷೇತ್ರದ 12 ಶಾಲೆಗಳು ಮತ್ತು ಎರಡು ಸೇವಾಶ್ರಮಗಳಿಗೆ ಹಸ್ತಾಂತರಿಸಿ ಮಾತನಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಮಾತನಾಡಿ, ಇದುವರೆಗೆ ಎಂಇಇಎಲ್ ಮತ್ತು ಕಿಯೋನಿಕ್ಸ್ ಸಂಸ್ಥೆಗೆ ಶಾಸಕರೇ ಅಧ್ಯಕ್ಷರಾಗುತ್ತಿದ್ದರೆ ಬಿಜೆಪಿ ಆಡಳಿತ ಪ್ರಥಮ ಬಾರಿಗೆ ಪಕ್ಷದ ಕಾರ್ಯಕರ್ತರಿಗೆ ನೀಡಿದೆ. ಎಂಇಇಎಲ್ ನಿಂದ ಪ್ರಥಮ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಅನುದಾನ ಬರುವ ಜೊತೆ 36 ಮಂದಿಗೆ ಉದ್ಯೋಗವಕಾಶವೂ ದೊರಕುವಂತಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೋಳಿಯಾರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 2 ಲಕ್ಷ, ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢಶಾಲೆಗೆ 3 ಲಕ್ಷ, ಪಾಣೇಲ ಬರಿಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 2ಲಕ್ಷ , ಚೇಳೂರು ಥೋಮಸ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ 1ಲಕ್ಷ, ಸಜಿಪನಡು ಹಿರಿಯ ಪ್ರಾಥಮಿಕ ಶಾಲೆಗೆ 1 ಲಕ್ಷ, ಜನಶಿಕ್ಷಣ ಟ್ರಸ್ಟ್ ಗೆ 2 ಲಕ್ಷ, ದೇರಳಕಟ್ಟೆ ಸೇವಾಶ್ರಮಕ್ಕೆ 1 ಲಕ್ಷ, ಕುರ್ನಾಡು ಶ್ರೀ ದತ್ತಾತ್ರೇಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ 2 ಲಕ್ಷ, ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 2 ಲಕ್ಷ, ಹೂಹಾಕುವ ಕಲ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 2 ಲಕ್ಷ, ಮುಡಿಪು ಜವಾಹರ್ ನವೋದಯ ವಿದ್ಯಾಲಯಕ್ಕೆ 2 ಲಕ್ಷ, ಇರಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 1 ಲಕ್ಷ, ಕುರ್ನಾಡು ಸರಕಾರಿ ಪೌಢಶಾಲೆಗೆ 2 ಲಕ್ಷ, ಪಜೀರ್ ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಗೆ 2 ಲಕ್ಷ ಅನುದಾನ ಚೆಕ್ ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಎಂಇಇಎಲ್ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಶಾಂತ ಗಟ್ಟಿ, ಪಜೀರ್ ಚರ್ಚ್ ಧರ್ಮಗುರು ಸುನಿಲ್ ವೇಗಸ್, ಕ್ಯಾಂಪ್ಕೋ ನಿರ್ದಶಕ ಮಹೇಶ್ ಚೌಟ, ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ರೈ ಕಲ್ಲಿಮಾರ್, ಬಿಜೆಪಿ ಮಂಡಲಾಧ್ಯಕ್ಷ ಚಂದ್ರಹಾಸ ಪಂಡಿತ್ ಹೌಸ್ ಮೊದಲಾದವರು ಉಪಸ್ಥಿತರಿದ್ದರು.
ರವಿ ರೈ ಪಜೀರ್ ವಂದಿಸಿದರು. ನವೀನ್ ಪಾದಲ್ಪಾಡಿ ಕಾರ್ಯಕ್ರಮ ನಿರೂಪಿಸಿದರು.



