
ಉಳ್ಳಾಲ: ನಿದ್ರೆ ತೊಂದರೆ ಅನುಭವಿಸುವ ಮಕ್ಕಳಿಗೆ ನಿಟ್ಟೆ ಸ್ಲೀಪ್ ಕ್ಲಿನಿಕ್ ಪರಿಣಾಮಕಾರಿಯಾಗಿ ಕಾರ್ಯಾಚರಿಸಲಿದೆ. 25 ವರ್ಷಗಳಿಂದ ಎ.ಬಿ ಶೆಟ್ಟಿ ದಂತ ವೈದ್ಯಕೀಯ ಕಾಲೇಜು ಉಚಿತವಾಗಿ ಜನರ ಹಲ್ಲಿನ ಚಿಕಿತ್ಸೆಯನ್ನು ನಡೆಸುತ್ತಿದೆ. ಇದೀಗ ಸ್ಲೀಪ್ ಕ್ಲಿನಿಕ್ ಆರಂಭಿಸುವ ಮೂಲಕ ಸಂಸ್ಥೆ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ ಎಂದು ಎ.ಬಿ ಶೆಟ್ಟಿ ದಂತವಿಜ್ಞಾನ ಸಂಸ್ಥೆಯ ಡೀನ್ ಡಾ.ಯು ಕೃಷ್ಣ ನಾಯಕ್ ಅಭಿಪ್ರಾಯಪಟ್ಟರು.
ಅವರು ವಿಶ್ವ ಮಲಗುವ ದಿನಾಚರಣೆ ಅಂಗವಾಗಿ ದೇರಳಕಟ್ಟೆಯ ಎ.ಬಿ ಶೆಟ್ಟಿ ಸ್ಮಾರಕ ದಂತ ವಿಜ್ಞಾನ ಸಂಸ್ಥೆಯ ಮಕ್ಕಳ ವಿಭಾಗ ಮತ್ತು ದಂತ ವೈದ್ಯಕೀಯ ಶಾಸ್ತ್ರ ವಿಭಾಗಗಳ ಆಶ್ರಯದಲ್ಲಿ ಎ.ಬಿ ಶೆಟ್ಟಿ ದಂತ ಮಹಾವಿದ್ಯಾಲಯದ ನಾಲ್ಕನೇ ಮಹಡಿಯಲ್ಲಿ ಆರಂಭಗೊಂಡ ನಿಟ್ಟೆ ಸ್ಪೆಷಲ್ ಸ್ಲೀಪ್ ಕ್ಲಿನಿಕ್ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ್ ಹೆಗ್ಡೆ ನಿಟ್ಟೆ ಸ್ಲೀಪ್ ಕ್ಲಿನಿಕ್ ಉದ್ಘಾಟಿಸಿದರು.
ವಿಭಾಗ ಮುಖ್ಯಸ್ಥೆ ಡಾ.ಅಮಿತಾ ಎಂ ಹೆಗ್ಡೆ ಮಾತನಾಡಿ , ಮಕ್ಕಳಿಗೆ ಸುಖವಾಗಿ ನಿದ್ರೆ ಮಾಡಲು ಸಲಹೆಗಳು, ಅಭ್ಯಾಸಗಳನ್ನು ಮಾಡುವಲ್ಲಿ ಸ್ಲೀಪ್ ಕ್ಲಿನಿಕ್ ಕಾರ್ಯಾಚರಿಸಲಿದೆ. ಮಕ್ಕಳಿಗೆ ಶಾಲಾ ಒತ್ತಡ, ಟಿ.ವಿ , ಮೊಬೈಲ್ ಗಳ ಒತ್ತಡದಿಂದ ನಿದ್ರೆ ಕಡಿಮೆಯಾಗುವುದು ಸಾಮಾನ್ಯವಾಗುತ್ತಿದೆ. ಜೊತೆಗೆ ಮುಖದ ಛೈರ್ಯೆ ಹಲ್ಲು, ಮುಖದ ದವಡೆ ಎದುರಿದ್ದಲ್ಲಿ ಉತ್ತಮ ನಿದ್ರೆ ಅಸಾಧ್ಯ. ಇವೆಲ್ಲವನ್ನೂ ಗಮನಿಸಿ ಅವರಿಗೆ ಉತ್ತಮ ನಿದ್ರೆ ಮಾಡಲು ಬೇಕಾದ ಅಭ್ಯಾಸಗಳನ್ನು ಬೇಕಾದಲ್ಲಿ ಸಲಕರಣೆಗಳನ್ನು ಕ್ಲಿನಿಕ್ ಪೂರೈಸಲಿದೆ. 3 ರಿಂದ 15 ವರ್ಷದವರೆಗಿನ ಮಕ್ಕಳನ್ನು ಪರೀಕ್ಷಿಸಿ ಅವರಲ್ಲಿ ನಿದ್ರೆ ತೊಂದರೆಯಿದ್ದಲ್ಲಿ ಅದಕ್ಕೆ ಬೇಕಾದ ಸಲಕರಣೆ ಅಥವಾ ಕೌನ್ಸಿಲಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗುವುದು.
ವಿಶೇಷ ಚೇತನ ಮಕ್ಕಳಿಗಾಗಿ ವಿಶೇಷವಾಗಿ ಸೂಜ್ಲಿನ್ ಕೊಠಡಿಯೂ ಇದೆ. ದಿನದಲ್ಲಿ ಚಿಕಿತ್ಸೆಗೆ ಬರುವ 50 ಮಕ್ಕಳ ಪೈಕಿ 3-4 ಮಕ್ಕಳಿಗೆ ನಿದ್ರೆ ತೊಂದರೆ ಇರುತ್ತದೆ. ಅಂತಹವರಿಗೆ ಸ್ಲೀಪ್ ಕ್ಲಿನಿಕ್ ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭ ಕ್ಲಿನಿಕ್ ಉಸ್ತುವಾರಿ ಡಾ. ವಭಿತಾ ಶೆಟ್ಟಿ ಹಾಗೂ ಡಾ. ಮಿತ್ರಾ ಹೆಗ್ಡೆ, ಡಾ.ರವಿ, ಡಾ. ಸುಭಾಷ್, ಡಾ.ಬಿಜು, ಡಾ.ಚೇತನ್ ಉಪಸ್ಥಿತರಿದ್ದರು.

