

ಉಳ್ಳಾಲ: ಮನೆ ಆವರಣದಲ್ಲಿ ನಿಲ್ಲಿಸಲಾಗಿದ್ದ ಎರಡು ಕಾರುಗಳು ಸಹಿತ ಮನೆ ಕಿಟಕಿ ಗಾಜಿಗೆ ಕಲ್ಲುಗಳನ್ನು ಎಸೆದು ದುಷ್ಕರ್ಮಿಗಳು ಹಾನಿಗೊಳಿಸಿರುವ ಘಟನೆ ನರಿಂಗಾನ ಪಂಚಾಯಿತಿ ವ್ಯಾಪ್ತಿಯ ಜಲ್ಲಿಕ್ರಾಸ್ ಎಂಬಲ್ಲಿ ಇಂದು ನಸುಕಿನ ಜಾವ ಸಂಭವಿಸಿದೆ.
ಜಲ್ಲಿಕ್ರಾಸ್ ನಿವಾಸಿ ಅಬ್ಬಾಸ್ ಎಂಬವರ ಮನೆಯಲ್ಲಿ ಘಟನೆ ನಡೆದಿದೆ. ನಸುಕು 3.30 ರ ಸುಮಾರಿಗೆ ಅಂಗಳದಲ್ಲಿ ಸದ್ದು ಕೇಳಿ ಮನೆಮಂದಿ ಹೊರಬಂದಾಗ ಅಂಗಳದಲ್ಲಿ ನಿಲ್ಲಿಸಲಾದ ಓಮ್ನಿ ಕಾರು ಮತ್ತು ಕ್ವಾಲಿಸ್ ವಾಹನದ ಗಾಜುಗಳನ್ನು ಸಂಪೂರ್ಣ ಹಾನಿಗೊಳಿಸಲಾಗಿದೆ. ಮನೆಯ ಕಿಟಿಕಿ ಗಾಜನ್ನೂ ಹಾನಿಗೊಳಿಸಲಾಗಿದೆ. ರೇಷನ್ ಅಂಗಡಿ ಹೊಂದಿರುವ ಅಬ್ಬಾಸ್ ಅವರಿಗೆ ಯಾರ ಜತೆಯೂ ವೈಷಮ್ಯವಿರಲಿಲ್ಲ. ಘಟನೆಗೆ ಕಾರಣವೂ ತಿಳಿದುಬಂದಿಲ್ಲ. ಸ್ಥಳಕ್ಕಾಗಮಿಸಿದ ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

