UN networks
ಉಳ್ಳಾಲ: ಬಿಜೆಪಿ ಸರಕಾರದ ವೈಫಲ್ಯದಿಂದ ದುಷ್ಕರ್ಮಿಗಳು ದುಷ್ಕೃತ್ಯಗಳನ್ನು ನಡೆಸುತ್ತಲೇ ಬಂದಿದ್ದಾರೆ . ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರವೇ ಇರುವಾಗ ಬಿಜೆಪಿ ಹಾಗೂ ಬೆಂಬಲಿತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವು ನಾಚಿಕೆಗೇಡಿನ ವಿಚಾರ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ತಿಳಿಸಿದರು.
ಉಳ್ಳಾಲದ ಕೊರಗಜ್ಜ -ಗುಳಿಗಜ್ಜ ಕಟ್ಟೆಯಲ್ಲಿ ಮತ್ತು ಕೊಣಾಜೆ ಮುಲಾರದ ಗೋಪಾಲಕೃಷ್ಣ ಮಂದಿರದಲ್ಲಿ ಹಿಂದೂ ದೈವ -ದೇವರ ಭಾವನೆಗಳಿಗೆ ಧಕ್ಕೆಯುಂಟು ಮಾಡಿದ ಘಟನೆಯನ್ನು ಖಂಡಿಸಿ ಮತ್ತು ಆರೋಪಿಗಳನ್ನು ಶೀಘ್ರವೇ ಪೊಲೀಸ್ ಇಲಾಖೆ ಬಂಧಿಸುವಂತೆ ಆಉಗ್ರಹಿಸಿ ತೊಕ್ಕೊಟ್ಟು ಬಸ್ಸು ನಿಲ್ದಾಣದಲ್ಲಿ ಸೋಮವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ತಮ್ಮದೇ ಕೈಯಲ್ಲಿ ಗೃಹ ಇಲಾಖೆ ಇರುವ ಸಂದರ್ಭದಲ್ಲೇ ಪ್ರತಿಭಟನೆಯನ್ನು ನಡೆಸುವಂತಹ ಬಿಜೆಪಿಯ ಸಂಘಪರಿವಾರ ಜನರನ್ನು ಧಿಕ್ಕು ತಪ್ಪಿಸುವ ಕಾರ್ಯವನ್ನು ಮಾಡುತ್ತಿವೆ. ಈ ಮೂಲಕ ಸಹೋದರತೆಯನ್ನು ಒಡೆಯುವ ಪ್ರಯತ್ನಗಳಾಗುತ್ತಿವೆ ಮಂಗಳೂರು ಕ್ಷೇತ್ರ ವ್ಯಾಪ್ತಿಯಲ್ಲಿ ದೈವ ದೇವಸ್ಥಾನಗಳಿಗೆ ಕಾಂಗ್ರೆಸ್ ಶಾಸಕರು ನೀಡಿದ ಕೊಡುಗೆ ಬಹಳಷ್ಟಿದೆ. ಜಾತ್ಯಾತೀತ ಮನೋಭಾವದ ಶಾಸಕರಿಂದ ಇದು ಸಾಧ್ಯವಾಗಿದೆ ಎಂದರು.
ಉಳ್ಳಾಲ ಪುರಸಭೆ ಮಾಜಿ ಸದಸ್ಯ ದಿನೇಶ್ ರೈ ಮಾತನಾಡಿ, ಯು.ಟಿ ಖಾದರ್ ಅವರನ್ನು ಸೋಲಿಸಲೆಂದೇ ಮಂಗಳೂರು ಕ್ಷೇತ್ರದಲ್ಲಿ ಹಿಂದೂ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಲಾಗುತ್ತಿದೆ. ಒಂದು ತಿಂಗಳಿನಿಂದ ಕೃತ್ಯಗಳು ನಡೆಯುತ್ತಿದ್ದರೂ, ವಿ.ಹಿಂ. ಪ-ಬಜರಂಗದಳ ಸತ್ತುಹೋಗಿತ್ತೇ? ಹಿಂದೂ ಹೆಸರಿನಲ್ಲಿ ಮತ ಪಡೆಯುವ ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕಿದೆ. ತಮ್ಮದೇ ಆಡಳಿತವಿದ್ದರೂ ತಾವೇ ಪ್ರತಿಭಟಿಸುವ ಬಿಜೆಪಿ, ಜಿ.ಪಂ, ತಾ.ಪಂ ಚುನಾವಣೆ ಬರುವ ಸಂದರ್ಭ ಖಾದರ್ ಹೆಸರು ಹಾಳು ಮಾಡಲೆಂದೇ ಪ್ರತಿಭಟನೆಯನ್ನು ನಡೆಸುತ್ತಿದೆ. ಕೊರಗಜ್ಜನ ಕಟ್ಟೆಯಲ್ಲಿ ದುಷ್ಕøತ್ಯ ಉಂಟಾದಾಗ ಮೊದಲಿಗೆ ತಲುಪಿದ್ದು, ಉಳ್ಳಾಲ ನಗರಸಭೆಯ ಕಾಂಗ್ರೆಸ್ ಸದಸ್ಯರೇ ಹೊರತು ಬಿಜೆಪಿಯ ಯಾರೂ ಸದಸ್ಯರೂ ಕೂಡ ತಲುಪದಿರುವುದು ಅವರೊಳಗಿನ ಢೋಂಗಿ ಹಿಂದುತ್ವವನ್ನು ತೋರಿಸುತ್ತದೆ. ಕೊರಗಜ್ಜನ ಕಟ್ಟೆಗೆ ಬಟ್ಟೆ ಕಟ್ಟಲು ಸಾಧ್ಯವಿಲ್ಲ ಬಿಜೆಪಿಗರೇ.. ನಿಜ ಬಣ್ಣ ಬಯಲಾಗಲಿದೆ ಎಂದರು.ಕಲ್ಲಡ್ಕ ಭಟ್ ಬೈದು ಹೋದರು, ಮಿಥುನ್ ರೈ ಸಹಕರಿಸಿದರು' : ಹಿಂದುತ್ವದ ಬಗ್ಗೆ ಅಪಾರ ಮಾತನಾಡುವ ಕಲ್ಲಡ್ಕ ಭಟ್ ಅವರನ್ನು ಕುಂಪಲ ದೇವಸ್ಥಾನವೊಂದರ ನಾಗಮಂಡಲ ಉತ್ಸವಕ್ಕೆ ಉತ್ಸವಕ್ಕೆ ಕರೆಯಲಾಗಿತ್ತು. ಆದರೆ ಅಲ್ಲಿ ಕಾರ್ಯಕ್ರಮ ಮುಂದುವರೆಸಲು ಆರ್ಥಿಕ ತೆಯ ಕೊರತೆ ಎದುರಾಗಿತ್ತು. ಇದನ್ನು ಭಟ್ ಗಮನಕ್ಕೆ ತಂದಾಗ ಕಾರ್ಯಾಧ್ಯಕ್ಷರಿಗೆ ಬೈದು ತೆರಳಿದರೇ ವಿನಹ ಯಾವುದೇ ಸಹಕಾರವನ್ನು ನೀಡಲಿಲ್ಲ. ಇದೇ ಸಂದರ್ಭದಲ್ಲಿ ಯುವಕಾಂಗ್ರೆಸ್ ಮುಖಂಡ ಮಿಥುನ್ ರೈ ಅವರನ್ನು ಸಂಪರ್ಕಿಸಿದ ತಕ್ಷಣ ಎಲ್ಲಾ ರೀತಿಯ ಪ್ರೋತ್ಸಾಹ ನೀಡಿದ ಫಲವಾಗಿ ಕಾರ್ಯಕ್ರಮ ಸರಾಗವಾಗಿ ನಡೆದುಹೋಯಿತು. ಇದು ಹಿಂದುತ್ವವಾದಿಗಳ ಅಸಲಿಯತ್ತು ಎಂದರು. ಬಿಜೆಪಿಯವರೇ ಎಸ್ ಡಿಪಿಐ ಅವರ ಜತೆ ಸೇರಿಕೊಂಡು ಗೆಲ್ಲುವ ಕನಸು ಕಾಣದಿರಿ. ಜಾತ್ಯಾತೀತತೆಗೆ ಹೆಚ್ಚಿನ ಬಲವಿದೆ ಅನ್ನುವುದನ್ನು ಗಮನದಲ್ಲಿರಿಸಿದ ಎಂದರು. ಇಂಟಕ್ ಮುಖಂಡ ದಿನಕರ್ ಶೆಟ್ಟಿ ಮಾತನಾಡಿ ವಿ.ಹಿಂ.ಪ- ಬಜರಂಗದಳ ತಾಕತ್ ಇದ್ದರೆ ಜಿಲ್ಲೆಯ ಘಟನೆಗಳನ್ನು ಹತ್ತಿಕ್ಕುವಲ್ಲಿ ವಿಫಲರಾಗಿರುವ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಕಚೇರಿ ಮುಂದೆ ಪ್ರತಿಭಟಿಸಲಿ. ತೊಕ್ಕೊಟ್ಟು ಸ್ಥಳವನ್ನು ಪ್ರತಿಭಟನೆಗೆ ಆಯ್ಕೆ ಮಾಡಿರುವ ಹಿಂದೂ ಸಂಘಟನೆಗಳ ನಿಲುವು ಗೊತ್ತಾಗುತ್ತಿಲ್ಲ. ಉಳ್ಳಾಲದಲ್ಲಿ ಶಾಂತಿ ನೆಲೆಸಲು ಪೊಲೀಸರು ಈ ಕೂಡಲೇ ಘಟನೆಯನ್ನು ಬೇಧಿಸಬೇಕಾಗಿದೆ ಎಂದರು.
ಪ್ರತಿಭಟನೆಯಲ್ಲಿ ತಾ.ಪಂ ಅಧ್ಯಕ್ಷ ಮೋನು ಮಲಾರ್, ಸದಸ್ಯೆ ಸುರೇಖಾ ಚಂದ್ರಹಾಸ್, ನಗರಸಭೆ ಅಧ್ಯಕ್ಷೆ ಚಿತ್ರಾ ಚಂದ್ರಕಾಂತ್, ಉಪಾಧ್ಯಕ್ಷ ಐಯೂಬ್ ಮಂಚಿಲ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರೆಹಮಾನ್ ಕೋಡಿಜಾಲ್, ರಮೇಶ್ ಬೋಳಿಯಾರ್ ಮುಂತಾದವರು ಉಪಸ್ಥಿತರಿದ್ದರು.


