UN networks
ಉಳ್ಳಾಲ: ಟೈ¯ರ್ ವೃತ್ತಿ ಮುಗಿಸಿಕೊಂಡು ಮನೆಗೆ ಹಿಂತಿರುಗಿದ್ದ ಮಹಿಳೆ ತಲೆಗೆ ಗಂಭೀರ ಗಾಯಗೊಂಡಿದ್ದು, ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಘಟನೆಗೆ ಕಾರಣ ನಿಗೂಢವಾಗಿದ್ದು, ಮಹಿಳೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಮಾತನಾಡದ ಸ್ಥಿತಿಯಲ್ಲಿದ್ದಾರೆ.

ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿಯ ಮಿರಾಕಲ್ ಟೈಲರ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಂಬ್ಲಮೊಗರುವಿನ ಮದಕ ಸಮೀಪದ ತಾರಿಗುಡ್ಡೆ ನಿವಾಸಿ ದಿನೇಶ್ ಎಂಬವರ ಪತ್ನಿ ಶೋಭಾ (30) ಸ್ಥಿತಿ ಗಂಭೀರವಾಗಿದೆ. ಜ.5 ರಂದು ತೊಕ್ಕೊಟ್ಟುವಿನಿಂದ ಬಸ್ಸಿನಲ್ಲಿ ಹೊರಟವರು ಮನೆಗೆ ಸೇರಿರಲಿಲ್ಲ. ಮನೆಮಂದಿಗೆ ಶೋಭಾ ಅವರು ಆಸ್ಪತ್ರೆಗೆ ದಾಖಲಾಗಿರುವ ಕುರಿತು ಆಸ್ಪತ್ರೆಯಿಂದಲೇ ಮಾಹಿತಿ ಬಂದಿತ್ತು. ಶೋಭಾ ಅವರ ಬಳಿಯಿದ್ದ ಐಡಿ ಕಾರ್ಡಿನಲ್ಲಿದ್ದ ವಿಳಾಸದ ಮೂಲಕ ಮನೆಮಂದಿಗೆ ಮಾಹಿತಿ ನೀಡಲಾಗಿತ್ತು. ಮನೆಮಂದಿ ಆಸ್ಪತ್ರೆಗೆ ಬರುವಷ್ಟರಲ್ಲಿ ಶೋಭಾ ಅವರು ಮಾತನಾಡದ ಸ್ಥಿತಿಯಲ್ಲಿದ್ದಾರೆ. ಈ ಕುರಿತು ಆಸ್ಪತ್ರೆ ಮಂದಿಯಲ್ಲಿ ವಿಚಾರಿಸಿದಾಗ ರಿಕ್ಷಾ ಚಾಲಕನೊಬ್ಬ ಗಾಯಾಳು ಮಹಿಳೆಯನ್ನು ತಂದು ಆಸ್ಪತ್ರೆ ತುರ್ತು ನಿಗಾ ಘಟಕದ ಎದುರು ಕುಳ್ಳಿರಿಸಿ ಅಲ್ಲಿಂದ ಕಣ್ಮರೆಯಾಗಿದ್ದಾನೆ. ಶೋಭಾ ಅವರು ಗಾಯದ ಮೂಲವನ್ನು ತಿಳಿಸದೆ ಕಣ್ಮರೆಯಾಗಿದ್ದಾನೆ. ಆಸ್ಪತ್ರೆ ಆಡಳಿತ ಗಾಯಾಳು ಮಹಿಳೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಆರಂಭಿಸಿ ಮಾನವೀಯತೆ ಮರೆದಿದ್ದಾರೆ. ತಲೆಗೆ ಗಾಯಗಳಾಗಿರುವುದರಿಂದ ಅಪಘಾತ ಪ್ರಕರಣವೆಂಬ ಸಂಶಯದಡಿ ನಾಗುರಿ ಸಂಚಾರಿ ಠಾಣೆಗೆ ಮಾಹಿತಿಯನ್ನು ನೀಡಿದ್ದಾರೆ. ಆದರೆ ಶೋಭಾ ಅವರ ಬಲ್ಲವರ ಪ್ರಕಾರ ಅವರ ಬಳಿ ಅಂದಿನ ಸಂಬಳದ ಹಣವಿತ್ತು. ಅದು ಅವರ ಬಳಿಯಿರಲಿಲ್ಲ. ಅಪಘಾತ ಪ್ರಕರಣವಾಗಿದ್ದಲ್ಲಿ ರಿಕ್ಷಾ ಚಾಲಕ ಆಸ್ಪತ್ರೆ ಮಂದಿಯಲ್ಲಿ ತಿಳಿಸಿ ತೆರಳಬಹುದಿತ್ತು ಅನ್ನುವ ಸಂಶಯವನ್ನು ವ್ಯಕ್ತಪಡಿಸಿದ್ದಾರೆ. ನಾಗುರಿ ಸಂಚಾರಿ ಠಾಣಾ ಪೊಲೀಸರು ಹಿಟ್ ಆಂಡ್ ರನ್ ಪ್ರಕರಣ ದಾಖಲಿಸಿ , ಅಪಘಾತ ನಡೆಸಿದೆ ಎನ್ನಲಾದ ವಾಹನಕ್ಕಾಗಿ ಶೋಧ ಮುಂದುವರಿಸಿದ್ದಾರೆ. ಆಸ್ಪತ್ರೆಯಿಂದ ರಿಕ್ಷಾ ಚಾಲಕನ ಕುರಿತ ಸಿಸಿಟಿವಿಯ ದಾಖಲೆಯನ್ನು ಪಡೆದುಕೊಂಡಿದ್ದಾರೆ. ಆದರೆ ಮೂರು ದಿನಗಳಾದರೂ ಆತನ ಪತ್ತೆಯಾಗಿಲ್ಲ. ಮಹಿಳೆ ಇನ್ನೂ ಮಾತನಾಡಲಾಗದ ಸ್ಥಿತಿಯಲ್ಲಿದ್ದು ಆಸ್ಪತ್ರೆ ಆಡಳಿತ ಚೇತರಿಸಿಕೊಳ್ಳುತ್ತಿರುವ ಮಾಹಿತಿ ನೀಡಿದ್ದಾರೆ.
ಟೈಲರ್ಸ್ ಅಸೋಸಿಯೇಷನ್ ಆಗ್ರಹ : ಪ್ರಕರಣದ ಸತ್ಯಾಸತ್ಯತೆಯನ್ನು ಕೂಡಲೇ ಪೊಲೀಸ್ ಇಲಾಖೆ ಕಂಡುಹಿಡಿದು ಮನೆಮಂದಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಟೈಲರ್ಸ್ ಅಸೋಸಿಯೇಶನ್ ಉಳ್ಳಾಲ ಕ್ಷೇತ್ರ ಸಮಿತಿ ಆಗ್ರಹಿಸಿದೆ


