UN networks
ಹರೇಕಳ: ಹರೇಕಳ ಗ್ರಾಮದ ಎಲ್ಯಾರ್ ಪದವಿನಲ್ಲಿರುವ ಖಾಸಗಿ ರೆಸಾರ್ಟ್ ನವರು ಮುಖ್ಯ ರಸ್ತೆಯ ಬದಿಯಲ್ಲಿರುವ ಚರಂಡಿಯನ್ನು ಅತಿಕ್ರಮಿಸಿ ಕಾಂಪೌಂಡ್ ಕಟ್ಟಿದ್ದು ಕೂಡಲೇ ಇದನ್ನು ತೆರವುಗೊಳಿಸಲು ಮುಂದಾಗುವಂತೆ ಡಿವೈಎಫ್ಐ ಹರೇಕಳ ಗ್ರಾಮ ಸಮಿತಿ ಒತ್ತಾಯಿಸಿದೆ.
ಹರೇಕಳ – ಕುತ್ತಾರು ನಡುವೆ ಸಂಪರ್ಕ ಕಲ್ಪಿಸುವ ರಸ್ತೆಯು ಕಿರಿದಾಗಿದ್ದು ತಿರುವುಗಳಿಂದ ಕೂಡಿರುವುದಾಗಿದೆ. ಎಲ್ಯಾರ್ ಪದವಿನಲ್ಲಿರುವ ಈ ಖಾಸಗಿ ರೆಸಾರ್ಟ್ ಮಾಲೀಕರು ರಸ್ತೆಯ ಪಕ್ಕದಲ್ಲೇ ಗುಂಡಿ ತೋಡಿ ಅಲ್ಲಿ ಸಿಮೆಂಟ್ ಕಂಬಗಳನ್ನು ನೆಟ್ಟು ಕಾಂಪೌಂಡ್ ನಿರ್ಮಿಸಿದ್ದಾರೆ. ಇದರಿಂದಾಗಿ ಇಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಪಾದಾಚಾರಿಗಳಿಗೆ ತೊಂದರೆ ಆಗಲಿದೆ. ಅದೂ ಅಲ್ಲದೇ ರಸ್ತೆ ಬದಿಯಲ್ಲಿದ್ದ ಚರಂಡಿ ಒಳಗೆ ಬರುವಂತೆ ಅತಿಕ್ರಮಣ ಮಾಡಿಕೊಂಡು ಕಾಂಪೌಂಡ್ ಕಟ್ಟಲಾಗಿದ್ದು ಪ್ರಭಾವಿಗಳ ಈ ಭೂ ಅತಿಕ್ರಮಣ ಪಂಚಾಯತ್ ಅಧಿಕಾರಿಗಳು ಕಂಡೂ ಕಾಣದಂತೆ ಕಣ್ಣುಮುಚ್ಚಿ ಕುಳಿತಿದ್ದಾರೆ.
ಡಿವೈಎಪ್ಐ ಹರೇಕಳ ಗ್ರಾಮ ಸಮಿತಿ ಇಂತಹ ಕೃತ್ಯವನ್ನು ಖಂಡಿಸುತ್ತಿದ್ದು ಪಂಚಾಯತ್ ಅಧಿಕಾರಿಗಳು ಕೂಡಲೇ ಸ್ಥಳ ಪರಿಶೀಲನೆ ನಡೆಸಿ ಈ ಕಾಂಪೌಂಡ್ ತೆರವುಗೊಳಿಸಲು ಮುಂದಾಗಬೇಕು. ಪ್ರಭಾವಿಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತರೆ ಡಿವೈಎಫ್ಐ ಗ್ರಾಮಸ್ಥರ ಜೊತೆಗೂಡಿ ಇದರ ವಿರುದ್ಧ ಹೋರಾಟಕ್ಕೆ ಧುಮುಕಲಿದೆ ಎಂದು ಡಿವೈಎಫ್ಐ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.


