UN networks
ಮುನ್ನೂರು : ಅಭಿವೃದ್ಧಿ ಕಾರ್ಯ ಶೂನ್ಯಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ ಉಳ್ಳಾಲ: ಮುನ್ನೂರು ಗ್ರಾಮದ ಏಳನೇ ವಾರ್ಡಿನಲ್ಲಿ ಹಲವು ಬಾರಿ ಒಂದೇ ಪಕ್ಷದ ಬೆಂಬಲಿತರು ಪಂಚಾಯಿತಿ ಸದಸ್ಯರಾಗಿ ಆಯ್ಕೆಗೊಂಡರೂ ಅಭಿವೃದ್ಧಿ ಕಾರ್ಯಗಳೇ ನಡೆದಿಲ್ಲ. ಗ್ರಾಮಸ್ಥರ ಬೇಡಿಕೆಗಳು ಹಲವು ಇದ್ದರೂ ಇದಕ್ಕೆ ಶಾಸಕರು, ಸಂಸದರು ಸ್ಪಂಧಿಸುತ್ತಿಲ್ಲ. ಈ ನಿಟ್ಟಿನಲ್ಲಿ ಮುನ್ನೂರು ಗ್ರಾಮದ ಏಳನೇ ವಾರ್ಡಿನ ಸದಸ್ಯರು ಚುನಾವಣೆ ಬಹಿಷ್ಕರಿಸುವ ಕುರಿತು ಬ್ಯಾನರ್ ಹಾಕಿ ಎಚ್ಚರಿಕೆಯನ್ನು ನೀಡಿದ್ದಾರೆ.

ಈ ಹಿಂದೆ ಮುನ್ನೂರು ಗ್ರಾ.ಪಂ 7ನೇ ವಾರ್ಡಿನಲ್ಲಿ ಕಾಂಗ್ರೆಸ್ ಬೆಂಬಲಿತ ಹಸೈನಾರ್, ವಿಲ್ಫ್ರೆಡ್ , ಭಾಸ್ಕರ್ , ಪುಷ್ಪಾ ಅವರು ಪಂಚಾಯಿತಿ ಸದಸ್ಯರುಗಳಾಗಿ ಆಯ್ಕೆಯಾಗಿದ್ದರು. ಅದಕ್ಕೂ ಮುನ್ನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೇ ಸದಸ್ಯರಾಗಿದ್ದರು. ಆದರೂ ಈವರೆಗೆ ವಾರ್ಡಿನ ಅಭಿವೃದ್ಧಿಗೆ ಯಾವುದೇ ರೀತಿಯ ಸ್ಪಂಧನೆ ಮಾಡಿಲ್ಲ. ಪಂಜಿಗುರಿ ನಿವಾಸಿಗಳಿಗೆ ಅಭಿವೃದ್ಧಿ ಕಾರ್ಯಗಳ ವ್ಯವಸ್ಥೆಯೇ ಸಿಗುತ್ತಿಲ್ಲ. ಚರಂಡಿ ಹಾಗೂ ರಸ್ತೆ ನಿರ್ಮಾಣದ ಬಗ್ಗೆ ಹಲವು ವರ್ಷಗಳಿಂದ ಮನವಿ ನೀಡಿದರೂ ಸ್ಪಂಧನೆ ಸಿಕ್ಕಿಲ್ಲ. ಅದಕ್ಕಾಗಿ ಚುನಾವಣೆಯನ್ನು ಬಹಿಷ್ಕರಿಸುತ್ತಿದ್ದೇವೆ ಎಂದು ಮುನ್ನೂರು ಗ್ರಾಮದ ಪಂಜಿಗುರಿ ನಾಗರಿಕರು ದೆಕ್ಕಾಡು ಪ್ರದೇಶದಲ್ಲಿ ಫ್ಲೆಕ್ಸ್ ಅಳವಡಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಸ್ಥಳಕ್ಕಾಗಮಿಸಿ ಗ್ರಾಮಸ್ಥರ ಮನವೊಲಿಸಿ ಫ್ಲೆಕ್ಸ್ ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಗ್ರಾಮಸ್ಥರು ಮಾತ್ರ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.


