UN NETWORKS
ಉಳ್ಳಾಲ : ಮನೆಯಲ್ಲಿ ಪರ್ಸ್ ಬಿಟ್ಟು ಬಂದಿರುವುದಾಗಿ ಬುಲೆಟ್ ಬೈಕ್ ನಲ್ಲಿ ತೆರಳಿದ್ದ ಯುವಕ ಟೋಯಿಂಗ್ ವಾಹನಕ್ಕೆ ಢಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ನೇತ್ರಾವತಿ ಸೇತುವೆಯಲ್ಲಿ ನಿನ್ನೆ ಮಧ್ಯಾಹ್ನ ವೇಳೆ ಸಂಭವಿಸಿದೆ.


ಪಂಡಿತ್ ಹೌಸ್ ನಿವಾಸಿ ಭಾಸ್ಕರ್ ಮತ್ತು ಶಾರದಾ ದಂಪತಿ ದ್ವಿತೀಯ ಪುತ್ರ ಅಭೀಷ್ ಕೆ.ನಾಯರ್ (32) ಸಾವನ್ನಪ್ಪಿದವರು. ದುಬೈ ಖಾಸಗಿ ಕಂಪೆನಿಯಲ್ಲಿ ಪಿಆರ್ ಓ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಭೀಷ್ ಎಂಟು ದಿನಗಳ ಹಿಂದಷ್ಟೇ ಸಂಬಂಧಿಕರ ಮದುವೆಗೆಂದು ಊರಿಗೆ ಬಂದಿದ್ದರು. ತಿರುವನಂತಪುರಂನಲ್ಲಿ ನಡೆದಿದ್ದ ವಿವಾಹ ಸಮಾರಂಭದಲ್ಲಿ ಕುಟುಂಬ ಸಮೇತರಾಗಿ ಭಾಗಿಯಾಗಿ ಸೋಮವಾರ ವಾಪಸ್ಸಾಗಿದ್ದರು. ನಿನ್ನೆ ಬೆಳಿಗ್ಗೆ ಸಹೋದರ ಬ್ರಿಜೇಶ್ ಅವರಿಗೆ ಬೆಂದೂರ್ ವೆಲ್ ನಲ್ಲಿರುವ ಲಿಫ್ಟ್ ಕಂಪೆನಿಗೆ ತೆರಳಿದ್ದ ಅಭೀಷ್ , ಮನೆಯಲ್ಲಿ ಪರ್ಸ್ ಬಿಟ್ಟು ಬಂದಿರುವುದಾಗಿ ವಾಪಸ್ಸಾಗಿದ್ದರು. ಈ ವೇಳೆ ಸಹೋದರ ಬ್ರಿಜೇಶ್ ಕಾರಿನಲ್ಲಿ ತೆರಳುವಂತೆ ಸೂಚಿಸಿದರೂ, ತಾನು ಬುಲೆಟ್ ಬೈಕಿನಲ್ಲೇ ಹೋಗುವುದಾಗಿ ಹೇಳಿ ವಾಪಸ್ಸಾಗಿದ್ದರು. ದಾರಿಮಧ್ಯೆ ನೇತ್ರಾವತಿ ಸೇತುವೆಯಲ್ಲಿ ಟೋಯಿಂಗ್ ವಾಹನಕ್ಕೆ ತಲೆ ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಭೀಷ್ ವಿವಾಹದ ಸಿದ್ಧತೆಯನ್ನು ಮನೆಮಂದಿ ನಡೆಸಿದ್ದು, ಇಂದು ಹುಡುಗಿ ನೋಡುವವರಿದ್ದರು.
ಟೋಯಿಂಗ್ ವಾಹನ ತಾಂತ್ರಿಕ ದೋಷದಿಂದ ಕೆಟ್ಟಿದ್ದರಿಂದ ಸೇತುವೆ ಬದಿಯಲ್ಲಿ ನಿಲ್ಲಿಸಲಾಗಿತ್ತು ಎನ್ನಲಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


