UN NETWORKS
ದೇರಳಕಟ್ಟೆ : ದೇರಳಕಟ್ಟೆ ಮೂರು ವೈದ್ಯಕೀಯ ಆಸ್ಪತ್ರೆ ಹಾಗೂ ಕಾಲೇಜು ಎದುರುಗಡೆ ಆಗಿ ಕುತ್ತಾರು ಮದನಿನಗರವರೆಗೆ ಚತುಷ್ಪಥಗೊಂಡ ಮಾಣಿ- ಉಳ್ಳಾಲ ರಸ್ತೆಯ ಅವೈಜ್ಞಾನಿಕ ಕಾಮಗಾರಿಯಿಂದ ಸ್ಥಳೀಯರು ನರಕಯಾತನೆ ಅನುಭವಿಸುವಂತಾಗಿದೆ. ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೆ, ಡಿವೈಡರ್ ವ್ಯವಸ್ಥೆಯೂ ಅಸಮರ್ಪಕವಾಗಿರುವುದರಿಂದ ನೂತನ ರಸ್ತೆ ಜನರ ಬಲಿ ಪಡೆಯುವಂತಹ ರಸ್ತೆಯಾಗಿ ಮಾರ್ಪಾಡಾಗುತ್ತಿದೆ.










2018-19 ನೇ ಸಾಲಿನಲ್ಲಿ ದೇರಳಕಟ್ಟೆ ಫಾದರ್ ಮುಲ್ಲರ್ಸ್ ಆಸ್ಪತ್ರೆಯಿಂದ ನಿತ್ಯಾಧರನಗರದ ಬ್ಯಾರೀಸ್ ಮಾಲ್ ವರೆಗೂ ಮೊದಲ ಹಂತದ ಚತುಷ್ಪಥ ಕಾಮಗಾರಿ ನಡೆಸಲಾಗಿತ್ತು. ಮತ್ತೆ ಮೂರು ತಿಂಗಳ ವ್ಯತ್ಯಾಸದಲ್ಲಿ ನಿತ್ಯಾಧರನಗರದಿಂದ ಕುತ್ತಾರು ಮದನಿನಗರವರೆಗಿನ ರಸ್ತೆಯನ್ನು ಎರಡನೇ ಹಂತವಾಗಿ ಚತುಷ್ಪಥವಾಗಿ ಅಭಿವೃದ್ಧಿಗೊಳಿಸಲಾಗಿದೆ. ಆಸ್ಪತ್ರೆ, ವೈದ್ಯಕೀಯ ಕಾಲೇಜು, ವಾಣಿಜ್ಯ, ವಸತಿ ಸಂಕೀರ್ಣಗಳು ಹೆಚ್ಚಾದಂತೆ ವಾಹನ ದಟ್ಟಣೆಯೂ ಹೆಚ್ಚಾದ ಹಿನ್ನೆಲೆಯಲ್ಲಿ ಶಾಸಕ ಯು.ಟಿ.ಖಾದರ್ , ಸಚಿವರಾಗಿದ್ದ ಸಂದರ್ಭ ರಾಜ್ಯ ಸರಕಾರದಿಂದ ಅನುದಾನ ಬಿಡುಗಡೆಗೊಳಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು. ಮತ್ತೆ ಎರಡು ಹಂತಗಳಲ್ಲಿ ತೊಕ್ಕೊಟ್ಟುವರೆಗೂ ಚತುಷ್ಪಥ ರಸ್ತೆಯಾಗಿ ರೂಪಿಸುವ ಯೋಜನೆ ರೂಪಿಸಿದ್ದಾರೆ.
ಸ್ಥಳೀಯರಿಗೆ ಸಂಕಟ : ಮಳೆ ಬರುವ ಮುನ್ನ ಕಾಮಗಾರಿ ಮುಗಿಸುವ ಆತುರದಿಂದ ಗುತ್ತಿಗೆದಾರರು ಚರಂಡಿ ವ್ಯವಸ್ಥೆಯನ್ನು ಕಲ್ಪಿಸದೆ, ನೇರಾನೇರ ಸರ್ವೇ ನಡೆಸಿದಂತೆ ಮಣ್ಣು ಹಾಕು, ಹಲವೆಡೆ ಮಣ್ಣು ಅಗೆದು ಎರಡು ಬದಿಗಳಲ್ಲಿ 300 ಮೀ. ವಿಸ್ತೀರ್ಣದಲ್ಲಿ ಚತುಷ್ಪಥ ರಸ್ತೆ ನಿರ್ಮಿಸಿದ್ದಾರೆ. ಆದರೆ ಮಣ್ಣು ಹಾಕುವ ಸಂದರ್ಭ ಕ್ಷೇಮ ಆಸ್ಪತ್ರೆ ಹಾಗೂ ಯೆನೆಪೋಯ ಆಸ್ಪತ್ರೆ ನಡುವಿನ ರಸ್ತೆಬದಿಯಲ್ಲಿರುವ ಮನೆಮಂದಿಯ ಮನವಿಗೂ ಸ್ಪಂಧಿಸದೆ ಕಾಮಗಾರಿ ಮುಗಿಸಿದ್ದಾರೆ. ಚರಂಡಿ ವ್ಯವಸ್ಥೆ ಕಲ್ಪಿಸದೆ ನಡೆಸಿದ ಕಾಮಗಾರಿಯಿಂದಾಗಿ ಮಳೆಯ ಸಂದರ್ಭ ಮನೆಗಳೊಳಗೆ ನೀರು ನುಗ್ಗಿ ಆವಾಂತರವನ್ನೇ ಸೃಷ್ಟಿಸಿದೆ. ಕ್ಷೇಮ ಆಸ್ಪತ್ರೆ ಸಮೀಪವಿರುವ ಹೆಣ್ಮಕ್ಕಳ ಹಾಸ್ಟೆಲ್ ಬಳಿಯ ಕರುಣಾಕರ ಶೆಟ್ಟಿ ಸೇರಿದಂತೆ ಇತರೆ ಇಬ್ಬರು ಮನೆಗಳೊಳಗೆ ಮಣ್ಣು, ನೀರು ನುಗ್ಗುತ್ತಿದೆ. ನೊಂದ ಮನೆಮಂದಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಪಂಧಿಸದ ಹಿನ್ನೆಲೆಯಲ್ಲಿ ಮರಳು ತುಂಬಿದ ಗೋಣಿಚೀಲಗಳನ್ನು ರಸ್ತೆ ಬದಿಯಲ್ಲಿಟ್ಟು ತಾತ್ಕಾಲಿಕವಾಗಿ ನೀರು ತಡೆಗಟ್ಟುವ ಕೆಲಸ ಮಾಡಿದ್ದಾರೆ.
ವಾಹನ ತಿರುಗಿಸುವುದೇ ಹರಸಾಹಸ : ಚತುಷ್ಪಥಗೊಂಡ ಪ್ರಮುಖ ರಸ್ತೆಯಿಂದ ಹೆಣ್ಮಕ್ಕಳ ಹಾಸ್ಟೆಲ್ ಸಮೀಪದಿಂದ ಪಾನೀರು ಸಂಪರ್ಕಿಸುವ ರಸ್ತೆ ಕಿರಿದಾಗಿ ನಿರ್ಮಿಸಿರುವುದರಿಂದ ಪಾನೀರು ಕಡೆಗೆ ಹೋಗುವ ಮತ್ತು ವಾಪಸ್ಸಾಗುವ ವಾಹನ ಸವಾರರಿಗೆ ತಿರುಗಿಸುವುದೇ ಒಂದು ಹರಸಹಾಸವಾಗುತ್ತಿದೆ. ದೊಡ್ಡ ವಾಹನಗಳು ರಸ್ತೆಯಲ್ಲಿ ಹೋಗಲು 2-3 ಬಾರಿ ಹಿಂದು ಮುಂದು ಹೋಗಿ ಚಲಿಸುವಂತ ವಾತಾವರಣವಿದೆ. ರಸ್ತೆಯೂ ಎತ್ತರವಾಗಿರುವುದರಿಂದ ನಡೆದುಕೊಂಡು ಹೋಗಲು ತೊಂದರೆಯಾಗಿದೆ. ಹಲವು ವಿದ್ಯಾರ್ಥಿನಿಯರು ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೀಡಾಗುತ್ತಲೇ ಇದ್ದಾರೆ. ವಾರದ ಹಿಂದೆ ಪಾರ್ಸೆಲ್ ಕೊಂಡೊಯ್ಯುವ ಯುವಕನ ಸ್ಕೂಟರ್ ಪಲ್ಟಿಯಾಗಿ ಗಂಭೀರವಾಗಿ ಗಾಯಗೊಂಡಿರುವ ಘಟನೆಯೂ ನಡೆದಿದೆ. ಈ ಭಾಗದ ಒಂದು ಮನೆಯಲ್ಲಿ ಅಸೌಖ್ಯದಿಂದ ಇರುವ ವೃದ್ಧೆಯೊಬ್ಬರಿದ್ದಾರೆ. ಅವರನ್ನು ಆಗಾಗ್ಗ ಆಸ್ಪತ್ರೆಗೆ ದಾಖಲಿಸಬೇಕಾದರೆ ವಾಹನ ಅಗತ್ಯ. ಆದರೆ ನೂತನ ಚತುಷ್ಪಥ ರಸ್ತೆ ನಿರ್ಮಾಣದ ಬಳಿಕ ರಸ್ತೆ ಅವ್ಯವಸ್ಥೆಯಿಂದ ವಾಹನ ಸವಾರರು ಬರುವುದನ್ನೇ ನಿಲ್ಲಿಸಿದ್ದಾರೆ. ಇದರಿಂದ ಹಲವು ಬಾರಿ ವೃದ್ಧೆಯನ್ನು ಸ್ಥಳೀಯ ಯುವಕರು ಪ್ರಮುಖ ರಸ್ತೆಯವರೆಗೆ ಎತ್ತಿಕೊಂಡೇ ಬಂದು ಆಸ್ಪತ್ರೆಗೆ ದಾಖಲಿಸುವ ಸ್ಥಿತಿ ಒದಗಿದೆ.
ವೈದ್ಯನಾಥನಗರಕ್ಕೆ ಡಿವೈಡರೇ ಇಲ್ಲ : ಕ್ಷೇಮ ವೈದ್ಯಕೀಯ ಕಾಲೇಜು ಸಮೀಪದ ವೈದ್ಯನಾಥನಗರ ಪ್ರದೇಶಕ್ಕೆ ಹೋಗುವ ರಸ್ತೆ ಸಂಪೂರ್ಣ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಅತೀ ಎತ್ತರದಿಂದ ಬಂದು ಪ್ರಮುಖ ರಸ್ತೆಯನ್ನು ವಾಹನ ಸವಾರರು ಸಂಪರ್ಕಿಸಬೇಕಿದೆ. ಆಯತಪ್ಪಿದಲ್ಲಿ ವಾಹನಗಳು ನೇರ ರಸ್ತೆಗೆ ಉರುಳಿಬೀಳುತ್ತವೆ. ಅಲ್ಲದೆ ವೈದ್ಯನಾಥನಗರದತ್ತ ಹೋಗುವ ವಾಹನಗಳು ವಿರುದ್ಧ ಧಿಕ್ಕಿನಿಂದ ಬಂದು ಊರು ಸೇರಬೇಕಾಗಿದೆ. ರಸ್ತೆ ಎದುರೇ ಡಿವೈಡರ್ ನಿರ್ಮಿಸಬೇಕಾದವರು, ಅರ್ಧ ಕಿ.ಮೀ ದೂರದಲ್ಲಿ ಡಿವೈಡರ್ ನಿರ್ಮಿಸಿ ಅಪಘಾತವನ್ನು ಆಹ್ವಾನಿಸುವ ವಾತಾವರಣ ನಿರ್ಮಿಸಿದ್ದಾರೆ ಅನ್ನುವ ಆರೋಪ ಸ್ಥಳೀಯರು ಮಾಡಿದ್ದಾರೆ.
ಮಣ್ಣಿನಲ್ಲಿ ಬಾಕಿಯಾಗುತ್ತಿರುವ ವಾಹನಗಳು : ಚತುಷ್ಪಥ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. 10 ಕಿ.ಮೀ ಉದ್ದಕ್ಕೂ ಕಾಮಗಾರಿ ಕೈಗೊಂಡ ಪ್ರದೇಶದಲ್ಲಿ ಮಣ್ಣು ಹಾಕಲಾಗಿದ್ದರೂ, ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೆ ನೀರು ರಸ್ತೆ ಬದಿಯಲ್ಲೇ ನಿಲ್ಲುತ್ತಿದೆ. ಆದರೆ ಹಾಕಿದ ಮಣ್ಣಾಗಿರುವುದರಿಂದ ಅಲ್ಲಿ ವಾಹನವನ್ನು ನಿಲ್ಲಿಸಿದರೆ, ಮಣ್ಣಿನಲ್ಲಿ ಹೂತುಹೋಗುತ್ತಿದೆ. ಇತ್ತೀಚೆಗೆ ವೈದ್ಯರ ಹಾಗೂ ವೈದ್ಯ ವಿದ್ಯಾರ್ಥಿಗಳ ಕಾರು ನಿಂತಲ್ಲಿಯೇ ಮಣ್ಣಿನಲ್ಲಿ ಹೂತು ಅದನ್ನು ಮೇಲಕ್ಕೆತ್ತಲು ಹರಸಾಹಸ ಪಡುವಂತಹ ಸ್ಥಿತಿ ಉದ್ಭವಿಸಿತು.
ವಾಟ್ಸ್ಯಾಪ್ ದೂರಿಗೆ ಸ್ಪಂಧಿಸಿದ ಜಿಲ್ಲಾಧಿಕಾರಿ : ನೂತನ ರಸ್ತೆಯ ಆವಾಂತರವನ್ನು ಚಿತ್ರ ಸಮೇತ ಸ್ಥಳೀಯರು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರಿಗೆ ನ್ಯಾಯ ದೊರಕಿಸಿ ಕೊಡುವಂತೆ ವಾಟ್ಸ್ಯಾಪ್ ಮೂಲಕ ಮನವಿ ಮಾಡಿದ್ದರು. ಸಮಸ್ಯೆಗೆ ಕೂಡಲೇ ಸ್ಪಂಧಿಸಿದ ಜಿಲ್ಲಾಧಿಕಾರಿ ಲೋಕೋಪಯೋಗಿ ಇಲಾಖೆಗೆ ಕೂಡಲೇ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು. ಮರುದಿನವೇ ಲೋಕೋಪಯೋಗಿ ಇಲಾಖೆ ಹಿರಿಯ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳ ವರದಿ ಪಡೆದುಕೊಂಡಿದ್ದಾರೆ. ಆದರೆ ಈವರೆಗೆ ಯಾವುದೇ ಪರಿಹಾರವನ್ನು ಇಲಾಖೆಯಿಂದ ನೀಡಲಾಗಿಲ್ಲ ಅನ್ನುವ ಆರೋಪ ಸ್ಥಳೀಯರದ್ದಾಗಿದೆ.
ಇದು ಲೊಕೋಪಯೋಗಿ ಇಲಾಖೆಗೆ ಸಂಬಂಧಪಟ್ಟ ರಸ್ತೆಯಾಗಿದ್ದು, ಚತುಷ್ಪಥ ಕಾಮಗಾರಿಯಿಂದ ರಸ್ತೆ ಬದಿಯಲ್ಲಿರುವ ಮನೆಗಳಿಗೆ ಸಮಸ್ಯೆಯಾಗುತ್ತಿರುವ ಬಗ್ಗೆ ಗ್ರಾಮಸ್ಥರು ಗ್ರಾಮಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ಕಡ್ಡಾಯವಾಗಿ ಚರಂಡಿ ವ್ಯವಸ್ಥೆ ಇರಲೇಬೇಕು ಎಂಬ ನಿರ್ಣಯವು ತೆಗೆದುಕೊಳ್ಳಲಾಗಿದೆ. ಕಾಮಗಾರಿ ನಡೆಯುವ ಸಂದರ್ಭದಲ್ಲಿ ನಾನು ಖುದ್ದು ಹೋಗಿ ಚರಂಡಿ ವ್ಯವಸ್ಥೆಯನ್ನು ಮಾಡಬೇಕು ಇಲ್ಲವಾದಲ್ಲಿ ಮುಂದೆ ಸಮಸ್ಯೆಯಾಗುತ್ತದೆ ಲೋಕೋಪಯೋಗಿ ಇಲಾಖೆ ಹಾಗೂ ಗುತ್ತಿಗೆದಾರರಿಗೆ ಮನವರಿಕೆ ಮಾಡಿದ್ದೆ. ಸುಮಾರು 50ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ರಸ್ತೆಯ ಪಕ್ಕದಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆ ಮಾಡದಿರುವ ಬಗ್ಗೆ ಬೆಳ್ಮ ಪಂಚಾಯತಿ ಈಗಾಗಲೆ ಮೌಖಿಕವಾಗಿ ಮನವಿ ನೀಡಿದೆ. ಪಿಡಬ್ಲೂಡಿ ಇಂಜಿನಿಯರ್ ಜೊತೆ ಫೋನಿನ ಮೂಲಕ ಮಾತನಾಡಿದ್ದೇನೆ. ಕೋಟೆಕಾರು ಪಂಚಾಯತಿ ವ್ಯಾಪ್ಯಿಯ ಚರಂಡಿ ನೀರು ಯಾವುದೇ ಕಾರಣಕ್ಕೂ ಪಂಚಾಯತಿ ವ್ಯಾಪ್ತಿಗೆ ಬರಕೂಡದು .ಚರಂಡಿ ವ್ಯವಸ್ಥೆಯನ್ನು ಸರಿಯಾಗಿ ಮಾಡಿಕೊಡಬೇಕು ಇಲ್ಲವೇ ತಡೆಗೋಡೆಯನ್ನಾದರೂ ನಿರ್ಮಿಸಬೇಕು ಎಂಬ ಬಗ್ಗೆ ಈಗಾಗಲೇ ತಿಳಿಸಿದ್ದೇನೆ.
ನವೀನ್ ಹೆಗ್ಡೆ
ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಬೆಳ್ಮ
ಇದೊಂದು ಅವೈಜ್ಞಾನಿಕವಾದ ರಸ್ತೆ. ರಸ್ತೆ ಕಾಮಗಾರಿ ಸಂದರ್ಭದಲ್ಲಿ ಕಿರಿಯ ಲೋಕೋಪಯೋಗಿ ಇಂಜಿನಿಯರ್ ಹೊರತು ಉನ್ನತ ಮಟ್ಟದ ರಸ್ತೆ ಪ್ರಾಧಿಕಾರದ ಅಧಿಕಾರಿಗಳು ಯಾರು ಬಂದಿಲ್ಲ. ರಸ್ತೆ ಮಾಡುವ ಮೊದಲು ಸೂಕ್ತವಾದ ಚರಂಡಿ ವ್ಯವಸ್ಥೆ ಮಾಡಬೇಕು ಎಂಬ ಕನಿಷ್ಠ ಜ್ಞಾನವೂ ಕೂಡ ಅವರಿಗಿಲ್ಲ. ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಮಾಡಿಕೊಂಡಿದ್ದೇನೆ ಅದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಅವರು ಪಿಡಬ್ಲೂಡಿ ಇಂಜಿನಿಯರ್ ಒಬ್ಬರನ್ನು ಕಳುಹಿಸಿದ್ದರೂ ಆದರೆ ಅವರು ಯಾವುದೇ ರೀತಿಯಾದ ಪರಿಹಾರವನ್ನು ನೀಡುವಂತೆ ಕಾಣುತ್ತಿಲ್ಲ. ಚರಂಡಿ ವ್ಯವಸ್ಥೆ ಮಾಡಬೇಕು ಆದರೆ ನಮ್ಮಲ್ಲಿ ಈಗ ಅದಕ್ಕೆ ನಿಧಿಯಿಲ್ಲ ಎನ್ನುತ್ತಿದ್ದಾರೆ. ರಸ್ತೆಯಿಂದ ನೀರು ಬಾರದಂತೆ ಈಗಾಗಲೇ ಮರಳು ಗೋಣಿಗಳನ್ನು ಇಡಲಾಗಿದೆ.
ಕರುಣಾಕರ ಶೆಟ್ಟಿ
ನೊಂದ ಮನೆಯವರು/ ಮಾಜಿ ಸದಸ್ಯರು ಬೆಳ್ಮ ಪಂಚಾಯಿತಿ


