UN NETWORKS
ಹರೇಕಳ : ನಾಲ್ಕು ಗೋಡೆಗಳ ನಡುವೆ ಕಲಿಯುವ ಪಾಠಕ್ಕಿಂತ ಅದಕ್ಕಿಂತ ಹೊರತಾದ ಚಟುವಟಿಕೆಗಳು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಅತ್ಯುತ್ತಮವಾಗಿ ಸಿಕ್ಕರೆ ನಮ್ಮ ಮುಂದಿನ ಜೀವನ ರೂಪಿಸುವಲ್ಲಿ ಸಹಕಾರಿಯಾಗುತ್ತದೆ ಎಂದು ಉಡುಪಿ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅಭಿಪ್ರಾಯಪಟ್ಟರು.

ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ 35 ವರ್ಷ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ರವೀಂದ್ರ ರೈ ಕಲ್ಲಿಮಾರ್ ಅವರಿಗೆ ಭಾನುವಾರ ಗ್ರಾಮಸ್ಥರು ಮತ್ತು ಹಳೆವಿದ್ಯಾರ್ಥಿ ಸಂಘದ ವತಿಯಿಂದ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಇಂದು ಹಲವಾರು ಕನ್ನಡ ಮಾಧ್ಯಮ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಸೊರಗುತ್ತಿದೆ. ಇಂತಹ ಶಾಲೆಗಳನ್ನು ಮತ್ತೆ ಜೀವ ತುಂಬಿಸುವ ಕೆಲಸ ನಡೆಯಬೇಕಿದೆ. ಶಾಲಾ ಜೀವನದಲ್ಲಿ ಹಲವು ಶಿಕ್ಷಕರು ಬಂದರೂ ರವೀಂದ್ರ ರೈಯಂತಹ ಮಾದರಿ ಶಿಕ್ಷಕರು ಮನದಲ್ಲಿ ಸದಾ ಇರುತ್ತಾರೆ ಎಂದು ಹೇಳಿದರು.
ರವೀಂದ್ರ ರೈ ಶಾಲೆಯಲ್ಲಿ ಮಾತ್ರ ಪಾಠ ಮಾಡದೆ, ಸಮಾಜದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲೂ ಸಕ್ರಿಯವಾಗಿ ಪಾಲ್ಗೊಂಡು ಜನರಿಗೆ ಜೀವನದ ಪಾಠ ಮಾಡುವ ಮೂಲಕ ಎಲ್ಲರ ಪ್ರೀತಿಗೆ ಪಾತ್ರರಾಗಿರುವ ಮಾದರಿ ಶಿಕ್ಷಕ ಎನಿಸಿದ್ದಾರೆ ಎಂದು ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ನಿರ್ದೇಶಕ ರವೀಂದ್ರ ಶೆಟ್ಟಿ ಉಳಿದೊಟ್ಟು ಎಂದು ಅಭಿಪ್ರಾಯಪಟ್ಟರು. ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಮನೋಜ್ ಕುಮಾರ್ ಹೆಗ್ಡೆ ದೆಬ್ಬೇಲಿ ಅಧ್ಯಕ್ಷತೆ ವಹಿಸಿದ್ದರು. ಎಸ್‍ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಹೈದರಾಲಿ, ಕೊಣಾಜೆ ಯುಬಿಎಂಸಿ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ದೋರತಿ ಜೆ.ಅಮ್ಮಣ್ಣ ಮುಖ್ಯ ಅತಿಥಿಗಳಾಗಿದ್ದರು. ಗೌರವಾಧ್ಯಕ್ಷರಾದ ಕಡೆಂಜ ಅಶೋಕ್ ಕುಮಾರ್, ಕಡೆಂಜ ಸೋಮಶೇಖರ್ ಚೌಟ, ಕೋಶಾಧಿಕಾರಿ ಮೋಹನ್ ದಾಸ್ ಶೆಟ್ಟಿ ಉಳಿದೊಟ್ಟು, ದೈಹಿಕ ಶಿಕ್ಷಣ ಶಿಕ್ಷಕ ತ್ಯಗಂ ಹರೇಕಳ ಉಪಸ್ಥಿತರಿದ್ದರು.
ರವಿರಾಜ್ ರೈ ಎಲ್ಯಾರ್ ಸ್ವಾಗತಿಸಿದರು. ಹಳೆವಿದ್ಯಾರ್ಥಿ ಮುಸ್ತಫಾ ಮಲಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾಲಕ ಜಯರಾಮ ಆಳ್ವ ಪೋಡಾರ್ ಅಭಿನಂದನಾ ಪತ್ರ ವಾಚಿಸಿದರು. ಹಳೆವಿದ್ಯಾರ್ಥಿ ರಾಜೇಶ್ ಶೆಟ್ಟಿ ಪಜೀರ್‍ಗುತ್ತು ಅಭಿನಂದನಾ ಭಾಷಣ ಮಾಡಿದರು. ಪ್ರಧಾನ ಕಾರ್ಯದರ್ಶಿ ಎಡ್ವರ್ಡ್ ಐಮನ್ ವಂದಿಸಿದರು. ಭಾಗ್ಯರಾಜ್ ಕಾರ್ಯಕ್ರಮ ನಿರೂಪಿಸಿದರು.
`ಹಿಂದೆ ಶಿಕ್ಷೆ ಇಲ್ಲದ ಶಿಕ್ಷಣ ಅದು ಶಿಕ್ಷಣವೇ ಅಲ್ಲ ಎಂದು ಭಾವಿಸಲಾಗುತ್ತಿತ್ತು. ಈಗಿನಂತಹ ತ್ರೀಜಿ, ಫೋರ್ಜಿಗಳು ಇಲ್ಲದ ಕಾಲದಲ್ಲಿ ಅಧ್ಯಾಪಕರು ಕಪಾಳಕ್ಕೆ ಒಂದು ಪೆಟ್ಟು ಕೊಟ್ಟರೆ ಎಲ್ಲಾ ರೀತಿಯಲ್ಲೂ ನೆಟ್‍ವರ್ಕ್ ಚಾಲನೆ ಆಗುತ್ತಿತ್ತು’
ರಾಜೇಶ್ ಶೆಟ್ಟಿ ಪಜೀರ್ ಗುತ್ತು, ಹಳೆ ವಿದ್ಯಾರ್ಥಿ


