UN NETWORKS
ಉಳ್ಳಾಲ: ಹಿಂದೆ ಹೆಣ್ಣು ಎಂದರೆ ಶಾಪ ಅನ್ನುವ ಕಾಲವಿದ್ದರೆ, ಈಗ ಅದು ಬದಲಾಗಿ ಹೆಣ್ಣು ಅನ್ನುವವಳು ಮನೆಗೆ ವರ ಅನ್ನುವಂತಹ ವಾತಾವರಣ ನಿರ್ಮಾಣವಾಗಿದೆ ಎಂದು ಸೋಮೇಶ್ವರ ಜಿಲ್ಲಾ ಪಂಚಾಯಿತಿ ಸದಸ್ಯೆ ಧನಲಕ್ಷ್ಮೀ ಗಟ್ಟಿ ಅಭಿಪ್ರಾಯಪಟ್ಟರು.

ಅವರು ದ.ಕ ಜಿಲ್ಲಾ ಪಂಚಾಯಿತಿ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು , ಪ್ರಾಥಮಿಕ ಆರೋಗ್ಯ ಕೇಂದ್ರ ಅಂಬ್ಲಮೊಗರು ಹಾಗೂ ಮುನ್ನೂರು ಗ್ರಾಮ ಪಂಚಾಯಿತಿ ಇವರ ಸಂಯುಕ್ತ ಆಶ್ರಯದಲ್ಲಿ ಕುತ್ತಾರು ದುರ್ಗಾವಾಹಿನಿ ಮಹಿಳಾ ಮಂಡಲದಲ್ಲಿ ನಡೆದ ` ಹೆಣ್ಣು ಮಗುವನ್ನು ರಕ್ಷಿಸಿ , ಹೆಣ್ಣು ಮಗುವನ್ನು ಉಳಿಸಿ ಯೋಜನೆಯಡಿ ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಹಿಂದೆ ಹೆಣ್ಮಕ್ಕಳಿಗಾಗಿ ಸರಕಾರದ ಯೋಜನೆಗಳು ಬಹಳಷ್ಟು ಕಡಿಮೆಯಿತ್ತು. ಇದೀಗ ಸರಕಾರದಿಂದ ಸುಕನ್ಯಾ ಸಮೃದ್ಧಿ, ಭಾಗ್ಯಲಕ್ಷ್ಮೀ ಯೋಜನೆ, ಹೆಣ್ಮಕ್ಕಳ ಪೋಷಕರಿಗೆ ಮಾತೃ ವಂದನೆ ಹಾಗೂ ಮಾತೃ ಯೋಜನೆಗಳು ಜಾರಿಯಲ್ಲಿದೆ. ಇದರ ಸದುಪಯೋಗವನ್ನು ಗ್ರಾಮಸ್ಥರು ಮಾಡಬೇಕಿದೆ. ಮಕ್ಕಳನ್ನು ಅವರ ಧರ್ಮದ ಸಂಸ್ಕಾರದಂತೆ ಬೆಳೆಸುತ್ತಾ ಹೋದಲ್ಲಿ ಯಾವುದೇ ದಾರಿ ತಪ್ಪುವಂತಹ ಸ್ಥಿತಿ ನಿರ್ಮಾಣವಾಗುವುದಿಲ್ಲ. ಗ್ರಾಮಾಂತರ ಭಾಗಗಳಲ್ಲಿ ಹೆಣ್ಮಕ್ಕಳ ರಕ್ಷಣೆ ಕುರಿತ ಕಾನೂನಿನ ಅರಿವು ಮೂಡಿಸುವ ಕಾರ್ಯ ಆಗಬೇಕಿದೆ ಎಂದರು.
ಈ ಸಂದರ್ಭ ಮುನ್ನೂರು ಗ್ರಾಮದಲ್ಲಿರುವ ಆರೋಗ್ಯವಂತ ಶಿಶುಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮುನ್ನೂರು ಪಂ. ಸದಸ್ಯೆ ಚಂದ್ರಕಲಾ, ಆಶಲತಾ, ಪ್ರಾಥಮಿಕ ಆರೋಗ್ಯ ಕೇಂದ್ರದ ಬಿಹೆಚ್‍ಇಒ ಜಯಂತಿ, ಆರೋಗ್ಯ ಕಾರ್ಯಕರ್ತೆ ವತ್ಸಲಾ, ಅಂಗನವಾಡಿ ಮೇಲ್ವಿಚಾರಕಿ ಶಹರಿ ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಸುನೀತಾ ಗಟ್ಟಿ ನಿರೂಪಿಸಿದರು. ಪ್ರೇಮ ವಂದಿಸಿದರು.


