ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ದೇರಳಕಟ್ಟೆ: ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯ, ಕ್ಷೇಮ ಆಸ್ಪತ್ರೆ ಹಾಗೂ ನಿಟ್ಟೆ ವಿವಿಯ ಎನ್ಎಸ್ಎಸ್ ಘಟಕದ ಆಶ್ರಯದಲ್ಲಿ ಭಾನುವಾರ ನಿಟ್ಟೆ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ವಿಶ್ವಯೋಗ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಿಟ್ಟೆ ವಿವಿ ಉಪ ಕುಲಪತಿ ಪ್ರೊ.ಡಾ.ಎಸ್.ರಮಾನಂದ ಶೆಟ್ಟಿ ವಿಶ್ವ ಯೋಗ ದಿನಾಚರಣೆ ಭಾರತ ವಿಶ್ವಕ್ಕೆ ನೀಡಿದ ಅಮೂಲ್ಯ ಕೊಡುಗೆ. ವಿಶ್ವವೇ ಯೋಗ ದಿನ ಆಚರಿಸುತ್ತಿದ್ದು ಅದರ ಸಂಪೂರ್ಣ ಶ್ರೇಯಸ್ಸು ಪ್ರಧಾನಿ ನರೇಂದ್ರ ಮೋದಿಗೆ ಸಲ್ಲುತ್ತದೆ ಎಂದು ನುಡಿದರು.
ಸಹಸ್ರಾರು ವರುಷಗಳಿಂದ ಭಾರತೀಯ ಯಾವುದೇ ಪದ್ದತಿ ವಿಶ್ವದ ಇತರ ದೇಶಗಳು ಮಾನ್ಯತೆ ನೀಡಿಲ್ಲ. ಹಾಗೆಯೇ ಅಂತರಾಷ್ಟ್ರೀಯ ಮಟ್ಟದಲ್ಲೂ ಆಚರಣೆಯಾದ ಇತಿಹಾಸವಿಲ್ಲ. ಯೋಗ ಎಂಬುದು ಭಾರತೀಯ ಪದ್ದತಿಯಾಗಿದ್ದರೂ ಈಗ ವಿಶ್ವವೇ ಅದನ್ನು ಒಪ್ಪಿಕೊಂಡು ವಿಶ್ವಮಾನ್ಯತೆ ನೀಡುವ ಮೂಲಕ ಆಚರಿಸುತ್ತಿರುವುದು ಹೆಮ್ಮೆಯ ವಿಚಾರ. ಭಾರತೀಯರ ಉತ್ತಮ ಆರೋಗ್ಯ, ಮಾನಸಿಕ ನೆಮ್ಮದಿ, ಬುದ್ಧಿ, ಕವಶಲ್ಯತನ, ಸಕಾರಾತ್ಮಕ ಚಿಂತನೆ ಆವೆಲ್ಲವನ್ನೂ ನೋಡಿದಾಗ ಯೋಗ ಭಾರತೀಯ ಜೀವನ ಪದ್ಧತಿಯೂ ಆಗಿದೆ ಎಂದು ನುಡಿದರು.
ಶಿಬಿರ ಉದ್ಘಾಟಿಸಿದ ಕದ್ರಿಯ ಪ್ರಕೃತಿ ಯೋಗ ಕುಠೀರದ ನಿದರ್ೇಶಕ ರಾಧಾಕೃಷ್ಣ ಶೆಟ್ಟಿ ಮಾತನಾಡಿ, ಯಾವುದೇ ವೃತ್ತಿಯಾದರೂ ಶಿಕ್ಷೆಯಾಗಿರದೆ ಸಂತೋಷದಿಂದ ಅನುಭವಿಸುವಂತಿರಬೇಕು. ಬೆಳಗ್ಗೆ ಮನೆಯಿಂದ ಹೊರಡುವ ಸಂದರ್ಭ ನಮ್ಮ ಮುಖದಲ್ಲಿ ನಗುವಿದ್ದರೆ ಇತರರೂ ನಮ್ಮನ್ನು ನೋಡಿ ನಗುತ್ತಾರೆ. ಹಾಗಾಗಿ ಯೋಗವನ್ನು ಪ್ರತಿದಿನ ಜೀವನದಲ್ಲಿ ಅಳವಡಿಸಿಕೊಂಡರೆ ಉತ್ತಮ. ಅದರಿಂದ ಜೀವನದಲ್ಲಿ ಸದಾ ಲವಲವಿಕೆ ಇರುತ್ತದೆ ಎಂದು ಹೇಳಿದರು.
ಕೆ.ಎಸ್.ಹೆಗ್ಡೆ ಫಿಸಿಯೋಥೆರಪಿ ವಿಭಾಗದ ಡಾ. ಗಾಯತ್ರಿ ಮಾತನಾಡಿ, ಯೋಗ ಎಂಬುದು ಋಷಿ ಮುನಿಗಳ ಕಾಲದಿಂದಲೇ ಬಂದಿದ್ದು, ಅದರಲ್ಲಿ ಎಂಟು ವಿಭಾಗಗಳಿವೆ. ಪ್ರತಿಯೊಂದು ವಿಭಾಗವೂ ಶರೀರಕ್ಕೆ ಉತ್ತಮ. ನೋವು ನಿವಾರಣೆ, ಹೃದಯ ಸಂಬಂ ಕಾಯಿಲೆ, ಮನಸ್ಸು ಸಮತೋಲನ, ದೈಹಿಕ ಕ್ಷಮತೆ ಕಾಪಾಡಲು ಯೋಗ ಅತ್ಯುತ್ತಮ ಎನ್ನುವುದು ವೈದ್ಯಕೀಯವಾಗಿ ಸಾಬೀತಾಗಿದೆ ಎಂದು ಹೇಳಿದರು.
ಕ್ಷೇಮ ಡೀನ್ ಡಾ. ಸತೀಶ್ ಕುಮಾರ್ ಭಂಡಾರಿ, ಡಾ.ಜಯಪ್ರಕಾಶ್ ಶೆಟ್ಟಿ, ಡಾ. ಮಿರಾಜ್ಕರ್ ಉಪಸ್ಥಿತರಿದ್ದರು.
ನಿಟ್ಟೆ ವಿವಿ ಕುಲಸಚಿವ ಡಾ.ಎಂ.ಎಸ್.ಮೂಡಿತ್ತಾಯ ಸ್ವಾಗತಿಸಿದರು. ಡಾ. ಸತೀಶ್ ರಾವ್ ಅತಿಥಿಗಳನ್ನು ಪರಿಚಯಿಸಿದರು. ನಿಟ್ಟೆ ವಿವಿ ಎನ್ಎಸ್ಎಸ್ ಸಂಯೋಜನಾಧಿಕಾರಿ ಡಾ. ಮುರಳೀ ಮೋಹನ್ ಚೂಂತಾರು ವಂದಿಸಿದರು. ಕ್ಷೇಮಾ ಎನ್ಎಸ್ಎಸ್ ಸಂಯೋಜಕಿ ಡಾ. ಸುಮಲತಾ ಕಾರ್ಯಕ್ರಮ ನಿರೂಪಿಸಿದರು.





