UN NETWORKS
ತಲಪಾಡಿ : ಸರಕಾರಿ ಜಾಗ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಆರೋಪ ಪ್ರತ್ಯಾರೋಪಗಳೊಂದಿಗೆ ಗದ್ದಲದಲ್ಲಿ ಆರಂಭಗೊಂಡ ತಲಪಾಡಿ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಜನಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡರೆ, ಮೊಬೈಲ್ ಟವರ್ ವಿಚಾರದಲ್ಲಿ ಗ್ರಾಮಸ್ಥರೊಬ್ಬರು ಆಧ್ಯಕ್ಷರ ಮತ್ತು ಪಂಚಾಯತ್ ಆಭಿವೃದ್ಧಿ ಅಧಿಕಾರಿ ವಿರುದ್ಧ ಗಂಭೀರ ಅರೋಪಕ್ಕೆ ಪಂಚಾಯಿತಿ ಅಧ್ಯಕ್ಷ ಸುರೇಶ್ ಆಳ್ವ ಸಾಂತ್ಯಗುತ್ತು ಅಸಮಾಧಾನ ವ್ಯಕ್ತಪಡಿಸಿ ಆರೋಪ ಮಾಡುವ ಸಂದರ್ಭ ಸಾಕ್ಷಿಯೂ ಜೊತೆಗಿರಲಿ ಎಂದು ತರಾಟೆಗೆ ತೆಗೆದುಕೊಂಡರು.








ತಲಪಾಡಿ ಗ್ರಾಮ ಪಂಚಾಯಿತಿ ವಠಾರದಲ್ಲಿ ಗುರುವಾರ ನಡೆದ 2019-20ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯ ಅಧ್ಯಕ್ಷತೆ ವಹಿಸಿದ್ದರು.ಗ್ರಾಮದಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ ಅನುಮತಿ ನೀಡಲು ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿ, ಲಂಚ ಪಡೆದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ ಎಂದು ಅನುಮಾನ ವ್ಯಕ್ತಪಡಿಸಿದರು. ಈ ಆರೋಪ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳಲ್ಲಿ ಆಕ್ರೋಶಕ್ಕೆ ಕಾರಣವಾಯಿತು. ನೀವು ಆಧಾರರಹಿತ ಆರೋಪ ಮಾಡುತ್ತಿದ್ದು, ಸಾಕ್ಷಿ ಸಹಿತ ಆರೋಪ ಸಾಬೀತುಪಡಿಸಿ. ಇಲ್ಲದಿದ್ದರೆ ನಾವು ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಪಿಡಿಓ ಕೇಶವ ಪೂಜಾರಿ ಆವರೂ ಎಚ್ಚರಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸುರೇಶ್ ಆಳ್ವ, ಆರೋಪ ಮಾಡಿರುವ ನೀವು ಕಟ್ಟಡ ಕಟ್ಟಿಸಿ ಅನಧಿಕೃತವಾಗಿ ಶೀಟ್ ಹಾಕಿದ್ದೀರಿ. ಆ ಸಂದರ್ಭ ನೀವು ನಮಗೆ ಹಣ ಕೊಟ್ಟಿದ್ದೀರಿ ಎನ್ನುವ ಆರೋಪ ಇದೆ. ನೀವು ನಮಗೆ ಹಣ ಕೊಟ್ಟಿದ್ದು ಹೌದಾ? ಎಂದು ಪ್ರಶ್ನಿಸಿದರಲ್ಲದೆ, ಟವರ್ ನಿರ್ಮಾಣಕ್ಕೆ ಪಂಚಾಯಿತಿ ಅನುಮತಿ ಕೊಟ್ಟಿಲ್ಲ ಎಂದು ತಿಳಿಹೇಳಿದರು.
ತ್ಯಾಜ್ಯ ಘಟಕ ವಿಚಾರದಲ್ಲಿ ಸರಕಾರಿ ಮತ್ತು ಕುಮ್ಕಿ ಜಾಗದ ಗದ್ದಲ ಸಭೆಯಲ್ಲಿ ನಡೆಯಿತು. ನಾಲ್ಕು ವರ್ಷಗಳಿಂದ ಘನತ್ಯಾಜ್ಯ ಘಟಕಕ್ಕಾಗಿ ಹೋರಾಟ ಮಾಡಿದರೂ ಪ್ರಯೋಜನ ಆಗಿಲ್ಲ ಎಂದು ಅಬ್ಬಾಸ್ ಉಚ್ಚಿಲ್ ಅಸಮಾಧಾನ ವ್ಯಕ್ತಪಡಿಸಿದ್ದು ಈ ವಿಚಾರದಲ್ಲಿ ಗ್ರಾಮ ಪಂಚಾಯತ್ ಯಾಕೆ ಬರ್ಕಾಸ್ತು ಮಾಡಬಾರದು ಎಂದು ಪ್ರಶ್ನಿಸಿದರು. ಈ ವಿಚಾರದಲ್ಲಿ ಪಿಡಿಒ ಕೇಶವ ಪೂಜಾರಿ ಮಾತನಾಡಿ ಸರಕಾರಿ ಜಾಗದ ಕೊರತೆ ಮತ್ತು ಖಾಸಗಿ ಜಾಗದಲ್ಲಿ ತ್ಯಾಜ್ಯ ಘಟಕ ಸ್ಥಾಪನೆಗೆ ಸಂಬಂಧಿಸಿದಂತೆ ಜನರ ವಿರೋಧವಿದೆ ಎಂದಾಗ ಸಿದ್ದೀಕ್ ತಲಪಾಡಿ ಮಾತನಾಡಿ, ಗ್ರಾಮದಲ್ಲಿರುವ ಸರ್ಕಾರಿ ಜಮೀನು ಖಾಸಗಿ ವ್ಯಕ್ತಿಗಳು ಮಾರಾಟ ಮಾಡಿ ಲಕ್ಷಗಟ್ಟಲೆ ದುಡ್ಡು ಮಾಡಿದ್ದಾರೆ. ಗ್ರಾಮದಲ್ಲಿ ಮೂರು ಸೆಂಟ್ಸ್ ಜಾಗ ಇಲ್ಲದವರು ಇದ್ದಾರೆ. ಸರ್ಕಾರಿ ಜಾಗ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳಿ. ಹಣ ನೀಡಿದರೆ ಹಕ್ಕುಪತ್ರ ಬೇಗ ಸಿಗುತ್ತದೆ ಎನ್ನುವ ಆರೋಪ ಸದಸ್ಯರ ಮೇಲಿದೆ ಎಂದರು.
ಯಾವುದೇ ಸದಸ್ಯರೂ ಹಕ್ಕುಪತ್ರಕ್ಕಾಗಿ ಹಣ ಪಡೆದಿಲ್ಲ, ಆ ಕಾರಣಕ್ಕೆ ಯಾರ ಮೇಲೂ ಆರೋಪ ಮಾಡಬಾರದು. ಹಕ್ಕುಪತ್ರ ನೀಡುವುದು ಕಂದಾಯ ಇಲಾಖೆ. ನೀವು ಮಧ್ಯವರ್ತಿಗಳ ಮೂಲಕ ಹೋದಾಗ ಆಗುವ ಸಮಸ್ಯೆಗೆ ನಾವು ಹೊಣೆಯಲ್ಲ. ಯಾರಾದರೂ ಹಣ ಪಡೆದಿದ್ದರೆ ಅವರ ಹೆಸರು ಹೇಳಿ ಎಂದು ಸುರೇಶ್ ಆಳ್ವ ಅಸಮಾಧಾನ ವ್ಯಕ್ತಪಡಿಸಿದರು. ತಲಪಾಡಿ ಶಾಲೆಯಲ್ಲಿ ಶಿಕ್ಷಕರ ಕೊರತೆಯಿದೆ, ಆಂಗ್ಲ ಶಿಕ್ಷಕರು ಬೇಕು ಎಂದು ನಾಲ್ಕು ವರ್ಷಗಳಿಂದ ಮನವಿ ಮಾಡುತ್ತಿದ್ದೇವೆ, ಸಚಿವರೆಲ್ಲಿ ಸತ್ತಿದ್ದಾರೆಂದು ಗೊತ್ತಿಲ್ಲ. ಅವರೆಲ್ಲಾ ಕುರ್ಚಿಗಾಗಿ ಹೋರಾಡುತ್ತಿದ್ದಾರೆ ಎಂದು ಮಹಿಳೆಯೋರ್ವರು ಕಿಡಿಕಾರಿದರು. ಈ ಸಂದರ್ಭ ಅಸಮಾಧಾನಗೊಂಡ ಸುರೇಶ್ ಆಳ್ವ, ಗ್ರಾಮಸಭೆಗೆ ಸಭ್ಯತೆ ಎನ್ನುವುದು ಇದೆ, ಸಚಿವರು ಹಾಗೂ ಆಯಾ ಸ್ಥಾನಕ್ಕೆ ತನ್ನದೇ ಘನತೆ ಇದೆ. ಮಾತನಾಡುವಾಗ ಜಾಗರೂಕತೆ ವಹಿಸಿ, ಸಭೆಯಲ್ಲಿ ಮಾತನಾಡಬಾರದು ಎಂದರು. ನೋಡೆಲ್ ಅಧಿಕಾರಿ ಶ್ಯಾಮಲಾ, ಪಿಡಿಓ ಕೇಶವ ಪೂಜಾರಿ ಸಹಿತಿ ಪಂಚಾಯಿತಿ ಸದಸ್ಯರೂ ಗ್ರಾಮಸ್ಥರು ಬುದ್ಧಿವಾದ ಹೇಳಿದರು.
ಕೆ.ಸಿ.ರೋಡ್‍ನಲ್ಲಿ ರಸ್ತೆ ಅಗಲೀಕರಣ ಸಂದರ್ಭ ತೆಗೆಯಲಾಗಿರುವ ಅಟೋ ಪಾರ್ಕ್ ನಿರ್ಮಾಣಕ್ಕೆ ಬಂದ ಮನವಿಗೆ ಪ್ರತಿಕ್ರಿಯಿಸಿದ ತಾ.ಪಂ.ಸದಸ್ಯ ಅಬೂಬಕ್ಕರ್ ಸಿದ್ದೀಕ್ ಕೊಳಂಗೆರೆ, ಈಗಾಗಲೇ ಹೆದ್ದಾರಿ ಪ್ರಾಧಿಕಾರಿದ ಅಧಿಕಾರಿಗಳಲ್ಲಿ ಮಾತನಾಡಿದ್ದು ಸೂಕ್ತ ಸ್ಪಂದನೆ ದೊರಕಿದೆ. ಸಚಿವರು ನಾಲ್ಕು ಲಕ್ಷ ಅನುದಾನ ನೀಡಿದ್ದು ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು. ಈ ಸಂದರ್ಭ ಅಟೋ ಚಾಲಕರು, ಸ್ಥಳೀಯರ ಸಹಕಾರ ಅಗತ್ಯ ಎಂದರು. ವಿವಿಧ ಇಲಾಖೆಯ ಅಧಿಕಾರಿಗಳು, ಪಂಚಾಯಿತಿಯ ಸದಸ್ಯರು ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೇಶವ ಪೂಜಾರಿ ಪಾವೂರು ಸ್ವಾಗತಿಸಿದರು. ಸಿಬ್ಬಂದಿ ನಳಿನಿ ಹಿಂದಿನ ಗ್ರಾಮಸಭೆಯ ನಡಾವಳಿ ಮಂಡಿಸಿದರು. ಕಾರ್ಯದರ್ಶಿ ಶಾಂತಿ ವಾರ್ಡ್ ಸಭೆಯ ಮಾಹಿತಿ ನೀಡಿದರು.


