UN NETWORKS
ಕೋಟೆಕಾರು: ಹಠಾತ್ ಆಗಿ ಬೀಸಿದ ಸುಂಟರಗಾಳಿಗೆ ಕಟ್ಟಡಗಳ ಶೀಟುಗಳು ಹಾರಿಹೋಗಿ, ಮೂರು ಕಾರುಗಳಿಗೆ ಹಾನಿಗೊಂಡಿರುವ ಘಟನೆ ಮಂಗಳವಾರ ಮುಂಜಾನೆ ವೇಳೆ ಕೋಟೆಕಾರು ಬೀರಿ ಸಮೀಪ ಸಂಭವಿಸಿದೆ.




ಐದು ನಿಮಿಷಗಳ ಕಾಲ ಕೋಟೆಕಾರು ಬೀರಿ ಸಮೀಪ ಸುಂಟರಗಾಳಿ ಸುತ್ತಿದೆ. ಹೊರಗಿದ್ದ ಜನರನ್ನು ದೂಡುವಂತಹ ರಭಸದಲ್ಲಿ ಬೀಸಿದ ಗಾಳಿಯಿಂದಾಗಿ ಬೀರಿಯ ರಾಷ್ಟ್ರೀಯ ಹೆದ್ದಾರಿ ಸಮೀಪದ ಒಂದು ವಿದ್ಯುತ್ ಕಂಬ, ಅಂಬೇಡ್ಕರ್ ಕೈಗಾರಿಕಾ ಸಂಘದ ಕಟ್ಟಡದ ಶೀಟ್ ಹಾರಿಹೋಗಿದೆ. ಸುಮಾರು 100 ಮೀ. ವರೆಗೂ ಹಾರಿದ ಶೀಟ್ ಸರಕಾರಿ ಶಾಲೆಯ ಕಂಪೌಂಡಿನೊಳಕ್ಕೆ ಬಿದ್ದಿದೆ. ಅದೃಷ್ಟವಶಾತ್ ಸಮಯ ಬೆಳಿಗ್ಗೆ 7.30 ಆಗಿದ್ದರಿಂದಾಗಿ ಶಾಲೆಯಲ್ಲಿ ಯಾರೂ ಇರಲಿಲ್ಲ. ಅಲ್ಲೇ ಸಮೀಪದಲ್ಲಿರುವ ಸಿಮೆಂಟ್ ಅಂಗಡಿ, ಕರಿಕಲ್ಲಿನ ಅಂಗಡಿ, ಕ್ಯಾಂಟೀನ್ ಕಟ್ಟಡಗಳ ಶೀಟುಗಳು ಹಾರಿ ಹೋಗಿ ವ್ಯಾಪಕ ಹಾನಿ ಹಾಗೂ ನಷ್ಟ ಸಂಭವಿಸಿದೆ. ರಸ್ತೆ ಬದಿಯ ಭಗವತಿ ರೆಸಿಡೆನ್ಸ್ ಕಟ್ಟಡದ ಕೆಳಗೆ ನಿಲ್ಲಿಸಲಾಗಿದ್ದ ಮೂರು ಕಾರುಗಳ ಮೇಲೆ ಹಾರಿದ ಶೀಟುಗಳು ಬಿದ್ದ ಪರಿಣಾಮ ಮೂರು ಕಾರುಗಳು ಜಖಂಗೊಂಡಿವೆ. ಘಟನೆಯಿಂದಾಗಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಮನೆಯೊಳಗೆ ಹೋಗಿ ಬಚಾವಾದೆ
ಕೆಲಸ ನಿಮಿತ್ತ ಮಹಿಳೆಯೊಬ್ಬರು ಮನೆಯಿಂದ ಹೊರಬರುತ್ತಿದ್ದಂತೆ ಸುಂಟರಗಾಳಿಯ ಪರಿಣಾಮದಿಂದ ಧೂಳು, ಸೊತ್ತುಗಳು ಹಾರಿಹೋಗುತ್ತಿರುವುದು ಪ್ರಳಯದಂತೆ ಭಾಸವಾಗಿತ್ತು. ಬೀಸಿದ ಗಾಳಿ ತನ್ನನ್ನು ದೂಡುವಷ್ಟರ ಮಟ್ಟಿಗೆ ಪ್ರಬಲವಾಗಿತ್ತು. ಕೂಡಲೇ ಮನೆಯೊಳಗೆ ಓಡಿ ಸೇರಿ ಬಚಾವಾಗಿದ್ದೇನೆ ಎಂದು ತಿಳಿಸಿದ್ದಾರೆ.
ಮುಂದುವರಿದ ಕಡಲ್ಕೊರೆತ: ಸೋಮೇಶ್ವರದಲ್ಲಿ ವ್ಯಾಪಕ ಹಾನಿ
ಮುಂಗಾರು ವಿಳಂಬವಾದರೂ ಸಮುದ್ರದ ಕೊರೆತ ಆರಂಭವಾಗಿ ತಿಂಗಳಾಗುತ್ತಾ ಬಂದಿದೆ. ಉಳ್ಳಾಲ-ಉಚ್ಚಿಲ ಭಾಗದಲ್ಲಿ ವ್ಯಾಪಕವಾಗಿ ಕಡಲ್ಕೊರೆತ ಮುಂದುವರಿದಿದೆ. ಉಚ್ಚಿಲ ಸಮುದ್ರ ತೀರದಲ್ಲಿನ ಮನೆಗಳಿಗೆ ಅಲೆಗಳು ಅಪ್ಪಳಿಸುತ್ತಿವೆ. ಸೋಮೇಶ್ವರ ದೇವಸ್ಥಾನದ ಸಮೀಪ ಸಮುದ್ರ ತೀರದಲ್ಲಿ ಪ್ರವವಾಸಿಗರ ವೀಕ್ಷಣೆಗೆಂದು ಹಾಕಿರುವ ಮೆಟ್ಟಿಲುಗಳ ಕೆಳಗಿನ ಭಾಗ ಕಡಲುಪಾಲಾಗಿವೆ. ದೇವಸ್ಥಾನದಿಂದ ಸಮುದ್ರ ತೀರಕ್ಕೆ ಇಳಿಯಲು ಜಾಗವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಈ ಭಾಗದಲ್ಲಿ ಸಮುದ್ರ ದೊಡ್ಡದಾಗಿ ಪ್ರವಾಸಿಗರ ನಿಲ್ಲುವ ಸ್ಥಳವೂ ಸಮುದ್ರದ ಒಡಲು ಸೇರಿವೆ.


