UN NETWORKS
ತಲಪಾಡಿ : ಪ್ರತಿಯೊಬ್ಬ ನಾಗರಿಕನು ತನ್ನ ಜವಾಬ್ದಾರಿಯನ್ನು ಅರಿತುಕೊಂಡು ಕಸದ ನಿರ್ವಹಣೆಯನ್ನು ಮಾಡಿದಲ್ಲಿ ಸ್ವಚ್ಛ ಸುಂದರ ಪರಿಸರ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಸ್ವಚ್ಛತಾ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವ ಮೂಲಕ ಸ್ವಚ್ಛ ಮನಸ್ಸಿನ ಸೇನಾನಿಗಳಾಗಬೇಕು ಎಂದು ಎಂ.ವಿ. ಶೆಟ್ಟಿ ಸ್ಕೂಲ್ ಆಫ್ ಸೋಶಿಯಲ್ ವರ್ಕ್ ಪ್ರಾಧ್ಯಾಪಕಿ ಹಾಗೂ ರಾಮಕೃಷ್ಣ ಮಿಷನ್‍ನ ಸ್ವಚ್ಛ ಭಾರತಾ ಅಭಿಯಾನದ ಸಂಯೋಜಕಿ ಪ್ರೊ. ನಿವೇದಿತಾ ಕಾಮತ್ ಅಭಿಪ್ರಾಯಪಟ್ಟರು.

ಅವರು ತಲಪಾಡಿಯ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲಿನಲ್ಲಿ ರಾಮಕೃಷ್ಣ ಮಿಶನ್ ಆಯೋಜಿಸಿದ ಸ್ವಚ್ಛ ಮನಸ್ಸು -2019 ಕಾರ್ಯಕ್ರಮಕ್ಕೆ ಚಾಲನೆ ನೀಡಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ನಮ್ಮ ಪರಿಸರದ ವಿಕೃತಿಗೆ ಮೂಲ ಕಾರಣ ಮಾನವ ತನ್ನ ಸುಖಲೋಲುಪತೆಯ ಜೀವನಕ್ಕಾಗಿ ಆತನು ಪ್ರಕೃತಿಯ ಮೇಲೆ ಮಾಡಿದ ಆಕ್ರಮಣದಿಂದಾಗಿ ನಮ್ಮ ಸುಂದರ ಪರಿಸರ ಇಂದು ವಿನಾಶದ ಅಂಚಿನಲ್ಲಿದೆ. ಹತ್ತು ಹಲವು ಮಾಲಿನ್ಯಗಳನ್ನು ತನ್ನ ಒಡಲಲ್ಲಿರಿಸಿದ ಪ್ರಕೃತಿಯು ಇಂದು ರೋಗರುಜಿನಗಳ ಗೂಡಾಗಿದೆ. ಇದರ ಮೂಲ ಕಾರಣವನ್ನು ಹುಡುಕುತ್ತಾ ಹೋದರೆ ನಮಗೆ ಕಾಣುವ ಒಂದೇ ಒಂದು ಮುಖ ಅದುವೇ ಮಾನವ. ಪ್ರಕೃತಿಯನ್ನು ಹಾಳು ಮಾಡಿದ ಮಾನವ, ಅದನ್ನು ಪುನಃ ವಾಸಕ್ಕೆ ಯೋಗ್ಯವನ್ನಾಗಿ ಮಾಡುವುದು ಸಹ ಆತನ ಮುಖ್ಯ ಜವಾಬ್ದಾರಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪ್ರಾಂಶುಪಾಲೆ ಸುಷ್ಮಾ ದಿನಕರ್ ವಹಿಸಿ, ವಿದ್ಯಾರ್ಥಿಗಳಿಗೆ ಸ್ವಚ್ಛತಾ ಕಾರ್ಯಕ್ರಮದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಹಿಂದಿ ಅಧ್ಯಾಪಕಿ ಲತಿಕಾ ಸ್ವಾಗತಿಸಿದರು, ಕನ್ನಡ ಅಧ್ಯಾಪಕಿ ಕವಿತಾ ವಂದಿಸಿದರು.


