UN NETWORKS
ಬೋಳಿಯಾರ್ : ಬೋಳಿಯಾರ್ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ನಡೆದ ರೈತರೊಡನೆ ಸಂವಾದ ಮತ್ತು ತಾಂತ್ರಿಕ ಮಾಹಿತಿ ಕಾರ್ಯಕ್ರಮ ನಡೆದಿದ್ದು ಈ ಸಂದರ್ಭ ಇಲಾಖಾಧಿಕಾರಿಗಳ ವಿರುದ್ಧ ಗ್ರಾಮದ ಕೃಷಿಕರು ಆಕ್ರೋಶ ವ್ಯಕ್ತಪಡಿಸಿದರು.

ಸಭೆಯ ಆರಂಭದಲ್ಲೇ ಮಾತನಾಡಿದ ದ.ಕ. ಮತ್ತು ಉಡುಪಿ ಸಾವಯವ ಕೃಷಿಕರ ಸಂಘದ ನಿರ್ದೇಶಕ ಪ್ರಶಾಂತ್ ಗಟ್ಟಿ, ಈ ಕಾರ್ಯಕ್ರಮ ಅಯೋಜಿಸಿದವರಾರು? ರ್ಯಕ್ರಮ ಆಯೋಜಿಸಿದಾಗ ಬೋಳಿಯಾರ್ ಗೆ ಎಷ್ಟು ಆಮಂತ್ರಣ ಕೊಟ್ಟಿದ್ದೀರಿ? ನಿಮ್ಮ ಬಗ್ಗೆಯೂ ನಮಗೆ ಪರಿಚಯ ಇಲ್ಲ. ನಮ್ಮ ಗ್ರಾಮದ ಕೃಷಿ ಬಗ್ಗೆ ನಿಮ್ಮಲ್ಲಿ ಮಾಹಿತಿ ಇದೆಯೇ? ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ಹಲವರಿಗೆ ಆಮಂತ್ರಣ ಕೊಟ್ಟಿದ್ದೀರಿ, ಆದರೆ ಪಂಚಾಯಿತಿಗೆ 16 ಆಮಂತ್ರಣ ಪತ್ರಗಳು ಮಾತ್ರ ಬಂದಿದೆ. ನೀವು ಹೆಸರಿಗೆ ಮಾತ್ರ ಕಾರ್ಯಕ್ರಮ ನಡೆಸುವುದೇ? ಕಾರ್ಯಕ್ರಮ ನಡೆಸುವಾಗ ಗ್ರಾಮ ಪಂಚಾಯಿತಿಯಲ್ಲಿ ಚರ್ಚಿಸಿದ್ದೀರಾ? ಸಿಬ್ಬಂದಿ ಕೊರತೆಯಿದ್ದರೆ ನಮ್ಮಲ್ಲಿ ಹೇಳಿ, ನಾವು ವ್ಯವಸ್ಥೆ ಮಾಡುತ್ತೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯ ಬಗ್ಗೆ ಅಧ್ಯಕ್ಷರಲ್ಲಿ ತಿಳಿಸಲಾಗಿತ್ತು ಎಂದು ಆತ್ಮ ಯೋಜನೆಯ ತಾಂತ್ರಿಕ ಅಧಿಕಾರಿ ರಮಿತಾ ಸಮರ್ಥಿಸಲು ಮುಂದಾದರು.
ಈ ಸಂದರ್ಭ ಅಸಮಾಧಾನಗೊಂಡ ಅಧ್ಯಕ್ಷ ಸತೀಶ್ ಆಚಾರ್ಯ, ನೀವು ನನ್ನಲ್ಲಿ ಚರ್ಚಿಸಿದ್ದೀರಿ ಎಂದು ಹೇಳುವುದು ಸರಿಯಲ್ಲ. ದಿನಾಂಕ ನಿಗದಿಪಡಿಸಿದ ಬಳಿಕ ಸಭಾಂಗಣ ಖಾಲಿಯಿದೆಯೇ ಎಂದು ಕೇಳಿದ್ದೀರಿ. ಕೃಷಿಕರ ಪ್ರಶ್ನೆಗೆ ನಿಮ್ಮ ಉತ್ತರ ಸಮರ್ಥನೀಯ ಅಲ್ಲ. ಕಾರ್ಯಕ್ರಮ ನಡೆಸುವಾಗ ಪೂರ್ವ ತಯಾರಿ ಅಗತ್ಯ, ಸಿಬ್ಬಂದಿ ಇಲ್ಲ ಎನ್ನುವ ನೆಪ ಸರಿಯಲ್ಲ ಎಂದು ಸಲಹೆ ನೀಡಿದರು.
ಕೃಷಿಕರ ಸಮಸ್ಯೆ ಕೇಳೋರಾರು?
ಸಭೆಯಲ್ಲಿ ಪ್ರಶಾಂತ ಗಟ್ಟಿ ಎತ್ತಿದ ಆಕ್ಷೇಪಕ್ಕೆ ಸಮರ್ಥನೆ ನೀಡಲು ಮುಂದಾದ ಕೃಷಿ ಇಲಾಖಾಧಿಕಾರಿ ವಿ.ಎಸ್.ಕುಲಕರ್ಣಿ, ನಮ್ಮ ವಲಯದಲ್ಲಿ 24 ಅಧಿಕಾರಿಗಳು ಬೇಕಿತ್ತು, ಆದರೆ ಮೂರು ಮಂದಿ ಇದ್ದೇವೆ. ಐವತ್ತು ಕೆ.ಜಿ. ಹೊರುವವರು ಇನ್ನೂರು ಕೆ.ಜಿ.ಹೊರಿಸಿದರೆ ಏನಾಗುತ್ತದೆ? ಅಲ್ಲದೆ ನಮ್ಮಲ್ಲಿ ಸಿಬ್ಬಂದಿಯೇ ಇಲ್ಲ ಎನ್ನುತ್ತಾ ಇಲಾಖೆಯ ಸಮಸ್ಯೆಗಳನ್ನು ಮುಂದಿಟ್ಟರು.
ಈ ಸಂದರ್ಭ ಕೆರಳಿದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವಿನ್ಸೆಂಟೆ ಡಿಸೋಜ, ಇಲ್ಲಿ ನಿಮ್ಮ ಸಮಸ್ಯೆಯನ್ನೇ ಹೇಳುವುದಾದರೆ ರೈತರ ಸಮಸ್ಯೆ ಕೇಳುವವರು ಯಾರು? ಬೋಳಿಯಾರ್ ಗ್ರಾಮದಲ್ಲಿ ಸಾಕಷ್ಟು ರೈತರಿದ್ದಾರೆ. ಆದರೆ ಮಾಹಿತಿ ಕೊರತೆಯಿಂದ ಅವರಿಲ್ಲಾ ಬಂದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಕೊಳೆ ಪರಿಹಾರ ಬೋಳಿಯಾರ್ ಗ್ರಾಮದ ಕೃಷಿಕರಿಗೆ ತಲುಪಿಲ್ಲ, ಖಾತೆ ನೋಡುವಾಗ 9, 18 ಸಾವಿರ ರೂಪಾಯಿ ಖಾತೆಯಲ್ಲಿ ಬಿದ್ದಿದೆ ಎಂದು ಸಂದೇಶ ಬಂದಿದೆ. ಆದರೆ ನಮ್ಮ ಖಾತೆಯಲ್ಲಿ ಹಣ ಬಿದ್ದಿಲ್ಲ. ಯಾವ ಖಾತೆಗೆ ಹಣ ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಬೇಕು. ಗ್ರಾಮದ175 ಅರ್ಜಿದಾರರ ಪೈಕಿ 90 ಮಂದಿಗೆ ಮಾತ್ರ ಹಣ ಬಂದಿದೆ. ಉಳಿದವರಿಗೆ ನಾವು ಏನು ಉತ್ತರ ನೀಡಬೇಕು? ಹೊಸ ಸಿಮ್ ತೆಗೆಯುವ ಸಂದರ್ಭ ನೀಡುವ ಆಧಾರ್ ಕಾರ್ಡ್ ಪರಿಗಣಿಸಿ ಕೆಲವರ ಖಾತೆಗೆ ಹಣ ಬರುತ್ತಿದೆ. ನಿಮ್ಮ ಇಲಾಖೆಯ ಹಣವೂ ಏರ್ ಟೆಲ್ ಖಾತೆಗೆ ಬೀಳ್ತಿದೆಯೇ ಎಂದು ಪ್ರಶಾಂತ್ ಗಟ್ಟಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ತೋಟಗಾರಿಕೆ ಇಲಾಖೆಯ ಮಹೇಶ್, ಈ ಬಗ್ಗೆ ಗ್ರಾಮಸಭೆಯಲ್ಲಿ ಮಾಹಿತಿ ನೀಡುತ್ತೇವೆ ಎಂದರು. ನೀವು ಇಂದು ಮಾಹಿತಿ ನೀಡಲು ಬಂದಿದ್ದೀರಿ, ಹೀಗಿರುವಾಗ ಗ್ರಾಮಸಭೆಯಲ್ಲಿ ಮಾಹಿತಿ ನೀಡುವುದೇಕೆ? ಈಗ ಏನು ಪರಿಹಾರ ಕೊಡ್ತೀರಿ ಎಂದು ಅಧ್ಯಕ್ಷ ಸತೀಶ್ ಆಚಾರ್ಯ ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಕಮಲ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೃಷ್ಣ ಕುಮಾರ್, ಯಶೋಧರ ಶೆಟ್ಟಿ, ತೋಟಗಾರಿಕಾ ಇಲಾಖೆಯ ಮಹೇಶ್, ಕೃಷಿ ವಿಶ್ವವಿದ್ಯಾಲಯದ ಶರತ್ ಕುಮಾರ್ ಹಾಗೂ ಹನುಮಂತ ಮುಖ್ಯ ಅತಿಥಿಗಳಾಗಿದ್ದರು.
`ಸಮಗ್ರ ಕೃಷಿ ಅಭಿಯಾನ ಕೃಷಿಕರಿಗೆ ಸಾಕಷ್ಟು ಮಾಹಿತಿ ಕೊರತೆಯಿರುವುದರಿಂದ ಕೃಷಿ ತಜ್ಞರ ಅಗತ್ಯವಿದೆ. ಕೇರಳದಲ್ಲಿ ಪ್ರತೀ ಪಂಚಾಯಿತಿಯಲ್ಲೂ ಕೃಣಿ ತಜ್ಞರು ಇದ್ದರೆ ನಮ್ಮಲ್ಲಿ ಜಿಲ್ಲೆಗೂ ಸರಿಯಾದ ತಜ್ಞರಿಲ್ಲ. ಇತ್ತೀಚೆಗೆ ಸರ್ಕಾರ ಕೃಷಿಕರಿಗಾಗಿ ವಿಶೇಷ ಸವಲತ್ತುಗಳನ್ನು ಹಾಗೂ ಮಾಹಿತಿಯನ್ನು ನೀಡಲು ಮುಂದಾಗಿರುವುದು ಉತ್ತಮ ಬೆಳವಣಿಗೆ’.
ಜಯರಾಂ ಸಾಂತ ಬೋಳ್ಯಾರ್‍ಗುತ್ತು, ಕೃಷಿಕ


