UN NETWORKS
ಉಳ್ಳಾಲ : ತಾಯಿಯ ಅಣ್ಣನ ಮಗನನ್ನು ಸ್ವಂತ ಭಾವಮೈದುನನೇ ಕೊಲೆಗೈದಿರುವ ಘಟನೆಗೆ ಸಂಬಂಧಿಸಿದಂತೆ ಬಂಧಿತ ಚೆಂಬುಗುಡ್ಡೆ ನಿವಾಸಿ ರಾಜೇಶನನ್ನು ಉಳ್ಳಾಲ ಪೊಲೀಸರು ಗುರುವಾರ ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಉಳ್ಳಾಲ ಠಾಣಾ ವ್ಯಾಪ್ತಿಯ ಚೆಂಬುಗುಡ್ಡೆ ಮಹಾಕಾಳಿ ದೈವಸ್ಥಾನದ ಎದುರುಗಡೆ ಬುಧವಾರ ತಡರಾತ್ರಿ ಘಟನೆ ನಾರಾಯಣ ಎಂಬವರನ್ನು ಕತ್ತಿಯಿಂದ ಕಡಿದು ಬರ್ಬರವಾಗಿ ಹತ್ಯೆ ನಡೆಸಲಾಗಿತ್ತು. ಲಲಿತಾ ಎಂಬವರ ಮನೆಯಲ್ಲಿ ಅವರ ಸಹೋದರನ ಪುತ್ರ ನಾರಾಯಣ (41) ಹಲವು ವರ್ಷಗಳಿಂದ ನೆಲೆಸಿದ್ದರು. ಲಲಿತಾ ಅವರ ಪುತ್ರ ರಾಜೇಶ್ ಗುಜರಾತಿನ ಪೋರ್ ಬಂದರಿನಲ್ಲಿ ಮೀನಿನ ಕೆಲಸ ನಿರ್ವಹಿಸುತ್ತಿದ್ದರು. ಇನ್ನೋರ್ವ ಪುತ್ರ ರಮೇಶ್ ಮೂಡಿಗೆರೆಯಲ್ಲಿ ನೆಲೆಸಿದ್ದಾರೆ. ಹಿರಿಯ ಮಗ ರಾಜೇಶ್ ಮೂರು ತಿಂಗಳಿಗೊಮ್ಮೆ ತಾಯಿಮನೆಗೆ ಬರುತ್ತಿದ್ದರು. ಆದರೆ ತಮ್ಮ ಮನೆಯಲ್ಲಿ ಬಾವಮೈದುನ ನಾರಾಯಣ ಇರುವ ಕುರಿತು ಹಲವು ಬಾರಿ ತಾಯಿ ಲಲಿತಾ ಜತೆಗೆ ಅಸಮಧಾನ ವ್ಯಕ್ತಪಡಿಸಿದ್ದರು. ಜೂನ್ ತಿಂಗಳಲ್ಲಿ ಮಳೆಗಾಲದ ಸಮಯವಾಗಿರುವುದರಿಂದ ಮೀನಿನ ಕೆಲಸವಿಲ್ಲದೆ ದೀರ್ಘಕಾಲದ ರಜೆಯಿಂದ ಬಂದು ತಾಯಿ ಜತೆಗೆ ರಾಜೇಶ್ ಇದ್ದರು. ಈ ವೇಳೆ ಬಾವ ನಾರಾಯಣ ತಮ್ಮ ಮನೆಯಲ್ಲಿ ಇರುವುದರ ಕುರಿತು ಹಲವು ಬಾರಿ ತಾಯಿ ಜತೆಗೆ ಗಲಾಟೆಯನ್ನು ನಡೆಸಿದ್ದರು. ಅಲ್ಲದೆ ರಾಜೇಶ್, ನಾರಾಯಣ ಅವರನ್ನು ನೇರವಾಗಿ ಮನೆಬಿಟ್ಟು ಹೋಗುವಂತೆ ಎಚ್ಚರಿಕೆಯನ್ನು ಹಾಕಿದ್ದರು. ಆದರೆ ತಾಯಿ ಲಲಿತಾ ಮಗನ ವಿರುದ್ಧ ಮಾತನಾಡಿದ್ದರು. ಈ ಕುರಿತು ನಾರಾಯಣ ಅವರು ತಮ್ಮ ಸ್ನೇಹಿತರಲ್ಲಿ ವಿಚಾರ ತಿಳಿಸಿದ್ದರು. ಕಳೆದ ಮೂರು ದಿನಗಳಿಂದ ಮನೆಯಲ್ಲಿ ಗಲಾಟೆ ನಡೆಯುತ್ತಲೇ ಇತ್ತು. ಬುಧವಾರ ತಡರಾತ್ರಿಯೂ ವಿಪರೀತ ಮದ್ಯ ಸೇವಿಸಿಕೊಂಡು ಬಂದಿದ್ದ ರಾಜೇಶ್ ತಾಯಿ ಲಲಿತಾ ಮೇಲೆ ಹಲ್ಲೆ ನಡೆಸಿ, ಮನೆಯಿಂದ ಹೊರಹಾಕಿದ್ದರು. ಲಲಿತಾ ಅವರು ನೆರೆಮನೆಯಲ್ಲಿ ಹೋಗಿ ಕುಳಿತಿದ್ದರು. ಮನೆಯಲ್ಲಿ ಮಲಗಿದ್ದ ನಾರಾಯಣನ ಮೇಲೆ ಎರಗಿದ ರಾಜೇಶ್, ಕತ್ತಿಯಿಂದ ಸಿಕ್ಕ ಸಿಕ್ಕಲ್ಲಿಗೆ ಕಡಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಳಿಕ ಕತ್ತಿಯನ್ನು ತೊಳೆದ ರಾಜೇಶ, ಮತ್ತೆ ಮೃತದೇಹದ ಕೈಯಲ್ಲಿ ಕತ್ತಿಯನ್ನಿಟ್ಟಿದ್ದಾನೆ. ಬಳಿಕ ಸ್ಥಳೀಯ ಯುವಕನನ್ನು ಕರೆದು ನಾರಾಯಣ ಆತನೇ ಕತ್ತಿಯಿಂದ ಕೊಚ್ಚಿಕೊಂಡಿದ್ದಾನೆ. ಕೂಡಲೇ ಆಸ್ಪತ್ರೆಗೆ ದಾಖಲಿಸುವಂತೆ ನಾಟಕವಾಡಿದ್ದ. ಆದರೆ ಆ ಹೊತ್ತಿಗಾಗಲೇ ನಾರಾಯಣ ಅಸುನೀಗಿದ್ದರು. ಬಳಿಕ ಸ್ಥಳೀಯರು ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದು, ರಾಜೇಶನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಿಚಾರಣೆ ವೇಳೆ ತಾನು ಮದುವೆಯಾಗುವ ಉದ್ದೇಶ ಇಟ್ಟುಕೊಂಡಿದ್ದೆನು. ಮಡದಿ ಮನೆಗೆ ಬರುವಾಗ ನಾರಾಯಣ ಇರುವುದು ಸರಿಯಲ್ಲ, ಎಂದು ಆಕ್ಷೇಪವನ್ನು ಹಾಕುತ್ತಿದ್ದೆನು. ಆದರೂ ನಾರಾಯಣ ಮನೆ ಬಿಟ್ಟು ಹೋಗಿರಲಿಲ್ಲ. ಇದರಿಂದ ರೊಚ್ಚಿಗೊಂದು ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


