UN NETWORKS
ದೇರಳಕಟ್ಟೆ : ಇನ್ನೇನು ಐದಡಿ ಹೆಜ್ಜೆ ಇಡುತ್ತಿದ್ದರೆ ಆಕೆ ಮನೆ ತಲುಪುತ್ತಿದ್ದಳು, ಆದರೆ ಭಗ್ನಪ್ರೇಮಿಯೋರ್ವ ಸ್ಕೂಟರಿನಲ್ಲಿ ಬಂದು ವಿದ್ಯಾರ್ಥಿನಿ ಮೈಯಿಡೀ 12 ಬಾರಿ ಚೂರಿಯಿಂದ ಚುಚ್ಚಿ ಕೊಲೆಗೆ ಯತ್ನಿಸಿದ್ದಲ್ಲದೆ ತಾನೂ ಕತ್ತು ಸೀಳಿ ಆತ್ಮಹತ್ಯೆಗೆ ಯತ್ನಿಸಿದ ಕ್ರೂರ ಕೃತ್ಯ ದೇರಳಕಟ್ಟೆಯ ಬಗಂಬಿಲದಲ್ಲಿ ನಿನ್ನೆ ಸಂಜೆ ನಡೆದಿದೆ. ವಿದ್ಯಾರ್ಥಿನಿ ಸ್ಥಿತಿ ಚಿಂತಾಜನಕವಾಗಿದ್ದು, ಯುವಕನ ಸ್ಥಿತಿ ಗಂಭೀರವಾಗಿದೆ.










ಖಾಸಗಿ ಕಾಲೇಜಿನ ಮೊದಲ ವರ್ಷದ ಎಂಬಿಎ ವಿದ್ಯಾರ್ಥಿನಿ ಬಗಂಬಿಲ ನಿವಾಸಿ ದೀಕ್ಷಾ (20) ಕೊಲೆಯತ್ನಕ್ಕೆ ಒಳಗಾದವರು. ಶಕ್ತಿನಗರ , ರಾಮಶಕ್ತಿ ಮಿಷನ್ ಸಮೀಪದ ಸುಶಾಂತ್ (28) ಕೊಲೆಗೆ ಯತ್ನಿಸಿದ ಭಗ್ನಪ್ರೇಮಿ. ಶುಕ್ರವಾರ ಕಾಲೇಜು ಮುಗಿಸಿ ಮನೆ ಕಡೆಗೆ ನಡೆದುಕೊಂಡು ಬರುತ್ತಿದ್ದ ವಿದ್ಯಾರ್ಥಿನಿಯನ್ನು ಸ್ಕೂಟರಿನಲ್ಲಿ ಹಿಂಬಾಲಿಸಿಕೊಂಡು ಬಂದ ಪರಿಚಿತ ಸುಶಾಂತ್ , ಆಕೆಯನ್ನು ಅಡ್ಡಗಟ್ಟಿ ಗಲಾಟೆ ನಡೆಸಲು ಆರಂಭಿಸುತ್ತಾನೆ. ಬಳಿಕ ತನ್ನ ಬಳಿಯಿದ್ದ ಚೂರಿಯಿಂದ ಎದೆ, ಹೊಟ್ಟೆಯ ಭಾಗಕ್ಕೆ ಇರಿಯಲು ಆರಂಭಿಸಿದ್ದಾನೆ. ವಿದ್ಯಾರ್ಥಿನಿ ಧೀಕ್ಷಾ ಬೊಬ್ಬಿಡುತ್ತಾ ರಸ್ತೆಗೆ ಉರುಳಿದರೂ ಬಿಡದ ದುಷ್ಕರ್ಮಿ ಸುಶಾಂತ್ ಅಲ್ಲಿಯೂ ಚೂರಿಯಿಂದ ಕಾಲು, ಸೊಂಟದ ಭಾಗಕ್ಕೆ 12 ಬಾರಿ ಚುಚ್ಚಲು ಆರಂಭಿಸಿದ್ದಾನೆ. ವಿದ್ಯಾರ್ಥಿನಿ ಬೊಬ್ಬೆಕೇಳಿ ಸ್ಥಳೀಯ ಕೆ.ಎಸ್ ಹೆಗ್ಡೆ ಆಸ್ಪತ್ರೆ ಸಿಬ್ಬಂದಿ ಹಾಗೂ ಸ್ಥಳೀಯರು ಜಮಾಯಿಸಿ ಸುಶಾಂತ್ ನನ್ನು ಸಮಾಧಾನಿಸಲು ಯತ್ನಿಸಿದರೂ, ` ಅವರಿಗೂ ಬೆದರಿಕೆಯೊಡ್ಡಿದ ಸುಶಾಂತ್ ಮತ್ತೆ ಧೀಕ್ಷಾಳ ಮೇಲೆ ಚೂರಿಯಿಂದ ಚುಚ್ಚುತ್ತಲೇ ತನ್ನ ಕುತ್ತಿಗೆಯನ್ನು ಅದೇ ಚೂರಿಯಿಂದ ಸೀಳಳು ಆರಂಭಿಸಿದ್ದಾನೆ. ಆಸ್ಪತ್ರೆ ಕಟ್ಟಡದಲ್ಲಿದ್ದ ಹಾಗೂ ರಸ್ತೆಯಲ್ಲೇ ಇದ್ದ ಮಂದಿ ಘಟನೆಗೆ ಸಾಕ್ಷಿಯಾದರೂ, ಕೃತ್ಯ ನಿಲ್ಲಿಸಲು ಅಸಹಾಯಕರಾಗಿದ್ದರು. 15 ನಿಮಿಷಗಳ ಕಾಲ ಕೃತ್ಯವನ್ನು ಮುಂದುವರಿಸುತ್ತಲೇ ಇದ್ದವ ಬಳಿಕ ತಾನೂ ವಿದ್ಯಾರ್ಥಿನಿ ಮೇಲೆ ಬಿದ್ದು ಆಕೆಯನ್ನು ಅಪ್ಪುತ್ತಾನೆ. ಕೂಡಲೇ ಸ್ಥಳಕ್ಕಾಗಮಿಸಿದ ಆಂಬ್ಯುಲೆನ್ಸ್ ಸಿಬ್ಬಂದಿ ಹಾಗೂ ಆಸ್ಪತ್ರೆಯ ದಾದಿಯರು ಸುಶಾಂತ್ ನನ್ನು ಸಮಾಧಾನಿಸಲು ಯತ್ನಿಸಿ ಬಳಿಕ ವಿದ್ಯಾರ್ಥಿನಿ ಧೀಕ್ಷಾಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ದೇಹದ 12 ಜಾಗಗಳಲ್ಲಿ ಇರಿತಕ್ಕೊಳಗಾದ ವಿದ್ಯಾರ್ಥಿನಿಗೆ ವಿಪರೀತ ರಕ್ತಸ್ರಾವವಾಗಿದೆ. ತಡರಾತ್ರಿ ವೇಳೆಗೆ ಸುಮಾರು 10 ಬಾಟಲಿ ರಕ್ತವನ್ನು ನೀಡಲಾಗಿದೆ. ಚಿಂತಾಜನಕ ಸ್ಥಿತಿಯಲ್ಲಿ ಆರೋಗ್ಯ ಸ್ಥಿತಿ ಮುಂದುವರಿದಿದೆ. ಸುಶಾಂತ್ ಸ್ಥಿತಿಯೂ ಗಂಭೀರವಾಗಿದೆ.
ಡ್ಯಾನ್ಸ್ ಕ್ಲಾಸ್ನಲ್ಲಿ ಚಿಗುರಿದ ಪ್ರೀತಿ
ದೀಕ್ಷಾ ಅಲೋಷಿಯಸ್ ಕಾಲೇಜಿನಲ್ಲಿ ಪದವಿ ವ್ಯಾಸಾಂಗ ಮಾಡುವ ಸಂದರ್ಭ ಸುಶಾಂತ್ ಅಲ್ಲಿನ ವಿದ್ಯಾರ್ಥಿಗಳಿಗೆ ಡ್ಯಾನ್ಸ್ ತರಬೇತುದಾರನಾಗಿ ಆಗಮಿಸಿದ್ದ. ಅಲ್ಲಿ ಇಬ್ಬರ ನಡುವೆ ಆರಂಭವಾದ ಸ್ನೇಹ ಪ್ರೀತಿಯತ್ತ ತಿರುಗಿತ್ತು. ಇಬ್ಬರೂ ಜತೆಗಿರುವ ಫೋಟೋಗಳು ಫೇಸ್ಬುಕ್ ವಾಲ್ನಲ್ಲಿ ಈಗಲೂ ಇರುವುದು ಇವರಿಬ್ಬರ ಪ್ರೀತಿಗೆ ಸಾಕ್ಷಿ . ಮೂರು ವರ್ಷಗಳ ಕಾಲ ಇಬ್ಬರ ನಡುವಿನ ಪ್ರೀತಿ ಗಾಢವಾಗಿಯೇ ಇತ್ತು ನಡುವೆ ಗಲಾಟೆಗಳು ನಡೆದರೂ ಇಬ್ಬರೂ ಜತೆಯಾಗಿಯೇ ಇದ್ದರು. ಸುಶಾಂತ್ ಮಂಗಳೂರಿನ ಖ್ಯಾತ ಡ್ಯಾನ್ಸ್ ತಂಡ ಆರ್ಯನ್ಸ್ ನಲ್ಲಿ ಮೂರು ವರ್ಷಗಳ ಹಿಂದಿದ್ದರೆ, ಬಳಿಕ ಮ್ಯಾಡ್ ಡ್ಯಾನ್ಸ್ ತಂಡದಲ್ಲಿ ತರಬೇತುದಾರನಾಗಿದ್ದನು.


