UN NETWORKS
ಉಳ್ಳಾಲ : ವಿಶ್ವ ಯೋಗ ದಿನ ಘೋಷಣೆ ಬಳಿಕ ವಿಶ್ವದಾದ್ಯಂತ 117 ದೇಶಗಳಿಂದ ಯೋಗಾಭ್ಯಾಸಕ್ಕೆ ಬೆಂಬಲ ದೊರೆತಿದೆ. ಈ ಮೂಲಕ ವಿಶ್ವಕ್ಕೆ ಯೋಗದ ಅರಿವು ಜೊತೆಗೆ ಯುವಜನರಿಗೆ ಯೋಗದ ಕುರಿತು ಜ್ಞಾನ ಮೂಡಿಸುವ ಕೆಲಸವಾಗಿದೆ ಎಂದು ಯೋಗಾಚಾರ್ಯ ಲಯನ್. ಶಿವರಾಂ ಶೆಟ್ಟಿ ಹೇಳಿದರು.

















ನಿಟ್ಟೆ ಪರಿಗಣಿಸಲ್ಪಟ್ಟಿರುವ ವಿಶ್ವವಿದ್ಯಾಲಯದ ದೇರಳಕಟ್ಟೆಯ ಫಿಸಿಯೋಥೆರಪಿ ಕಾಲೇಜಿನಲ್ಲಿ ನಿರಂತರ ಯೋಗ ಶಿಕ್ಷಣಕ್ಕಾಗಿ ಆರಂಭವಾದ ಪತಂಜಲಿ ಸಭಾಂಗಣ ಉದ್ಘಾಟಿಸಿ, ವಿಶ್ವ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ಮಹರ್ಷಿ ಪತಂಜಲಿ ಯೋಗ ಸೂತ್ರದ ಪುಸ್ತಕದ ಆಧಾರದಲ್ಲಿ ಯೋಗ ನಡೆಯುತ್ತಿದೆ. ಯೋಗದ ಕುರಿತು ವೈಜ್ಞಾನಿಕ ಸಂಶೋಧನೆಗಳು ನಿರಂತರವಾಗಿ ನಡೆದು, ಮನುಷ್ಯ ಜೀವನಕ್ಕೆ ಅವಶ್ಯಕ ಅನ್ನುವುದು ಸಾಬೀತಾಗಿದೆ. ತಾಂತ್ರಿಕತೆ ಮುಂದುವರಿದು ಯುವಸಮುದಾಯಕ್ಕೆ ನಿತ್ಯ ಚಟುವಟಿಕೆಗಳಿಗೆ ಸಮಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮಾನಸಿಕ ಒತ್ತಡಗಳಿಗೆ ತುತ್ತಾಗಿ ಮಧುಮೇಹ ಸೇರಿದಂತೆ ಹಲವು ರೋಗಗಳಿಗೆ ತುತ್ತಾಗುವವರ ಸಂಖ್ಯೆ ಪ್ರತಿ ವರ್ಷವೂ ಏರಿಕೆಯಾಗುತ್ತಲೇ ಇದೆ. ಇವೆಲ್ಲವನ್ನು ನಿಯಂತ್ರಿಸಲು ಯೋಗ ಅತ್ಯಾವಶ್ಯಕ. ಈ ಮೂಲಕ ಆರೋಗ್ಯವಂತ ದೇಹ ಹಾಗೂ ಧನಾತ್ಮಕ ಚಿಂತನೆಗಳ ಮನಸ್ಸು ನಿರ್ಮಿಸಲು ಸಾಧ್ಯ ಎಂದರು.
ನಿಟ್ಟೆ ವಿ.ವಿ ಉಪಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ, ನಿಟ್ಟೆ ವಿ.ವಿ ಯನ್ನು ಆರೋಗ್ಯ ವಂತ ವಿ.ವಿ ಆಗುವ ಉದ್ದೇಶದಿಂದ ಹಲವು ಆರೋಗ್ಯಕರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕ್ಯಾಂಪಸ್ಸಿನಲ್ಲಿ ತಿಂಡಿ ತಿನಿಸುಗಳಿಂದ ಹಿಡಿದು ವ್ಯಾಯಾಮ, ಯೋಗಾಭ್ಯಾಸಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಯುವಸಮುದಾಯ ಜೀವನ ಶೈಲಿಯಲ್ಲಿ ಬದಲಾವಣೆಯಿಂದಾಗಿ ಒತ್ತಡ , ಮಧುಮೇಹ ಹಾಗೂ ಕ್ಯಾನ್ಸರ್ ನಂತಹ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಇವೆಲ್ಲವನ್ನು ನಿಯಂತ್ರಿಸಲು ಯೋಗಾಭ್ಯಾಸದಿಂದ ಮಾತ್ರ ಸಾಧ್ಯ ಎಂದರು. ಕ್ಷೇಮ ಡೀನ್ ಡಾ. ಪಿ.ಹೆಚ್ ಪ್ರಕಾಶ್, ಸಹ ಡೀನ್ ಡಾ. ಜೆ.ಪಿ ಶೆಟ್ಟಿ, ಕ್ಷೇಮ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಶಿವಕುಮಾರ್ ಹಿರೇಮಠ್, ಎನ್ ಎಸ್ ಎಸ್ ಅಧಿಕಾರಿ ಡಾ.ಸುಮಲತಾ ಶೆಟ್ಟಿ ಉಪಸ್ಥಿತರಿದ್ದರು. ಡಾ.ಧಾಣೇಶ್ ಸ್ವಾಗತಿಸಿದರು. ಡಾ.ಲಕ್ಷ್ಮೀಪ್ರಸನ್ನ ನಿರೂಪಿಸಿದರು.


