UN NETWORKS
ಉಳ್ಳಾಲ : ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಮೇ ಕೊನೆಯವಾರ ಜೂನ್ ಮೊದಲ ವಾರದಲ್ಲಿ ಹಿಂಗಾರು ಮಳೆ ಆರಂಭವಾಗುವುದು ಮಾಮೂಲಿಯಾಗಿದ್ದರೂ ಪ್ರಸ್ತುತ ವರ್ಷ ಜೂನ್ ಇಪ್ಪತ್ತಾದರೂ ಇಳೆ ಸರಿಯಾಗಿ ತಂಪಾಗಿಲ್ಲ. ಇದೇ ರೀತಿ ಮುಂದುವರಿದರೆ ಗ್ರಾಮೀಣ ಪ್ರದೇಶದಲ್ಲೂ ನೀರಿಗಾಗಿ ರೇಶನಿಂಗ್ ಆರಂಭವಾಗುವ ಕಾಲ ದೂರವಿಲ್ಲ ಎಂದು ಲಯನ್ಸ್ ಜಿಲ್ಲಾ ಗವರ್ನರ್ ದೇವದಾಸ ಭಂಡಾರಿ ಅಭಿಪ್ರಾಯ ಪಟ್ಟರು.

ಅವರು ಅಂತರಾಷ್ಟ್ರೀಯ ಲಯನ್ಸ್ ಕ್ಲಬ್, ಉಳ್ಳಾಲ ಸಯ್ಯದ್ ಮದನಿ ದರ್ಗಾ ಸಮಿತಿ ಹಾಗೂ ಕರ್ನಾಟಕ ಅರಣ್ಯ ಇಲಾಖೆ ಸಹಯೋಗದಲ್ಲಿ ಅಬ್ಬಕ್ಕ ಸಾಲು ಮರ ಯೋಜನೆಗೆ ಉಳ್ಳಾಲದ ಹಝ್ರತ್ ಶಾಲಾ ಮೈದಾನದಲ್ಲಿ ಚಾಲನೆ ನೀಡಿ ಮಾತನಾಡಿದರು. ಉಳ್ಳಾಲ ರಾಣಿ ಅಬ್ಬಕ್ಕ ಸರ್ಕಲ್ನಿಂದ ಹಜ್ರತ್ ವಿದ್ಯಾಸಂಸ್ಥೆಯವರೆಗೆ ಸುಮಾರು ಇಪ್ಪತ್ತೈದು ಗಿಡಗಳನ್ನು ನೆಟ್ಟು ವನಮಹೋತ್ಸವಕ್ಕೆ ಚಾಲನೆ ನೀಡಿದ ವಲಯ ಅರಣ್ಯಾಧಿಕಾರಿ ಶ್ರೀಧರ್ ಸಾಲು ಮರದ ತಿಮ್ಮಕ್ಕನಂತೆ ಇಲ್ಲಿನ ಪರಿಸರ ಪ್ರೇಮಿ ಮಾಧವ ಉಳ್ಳಾಲ್ ಈ ಕಾರ್ಯಕ್ರಮದ ಹಿಂದೆ ಇರುವ ಶಕ್ತಿ ಎಂದು ಶ್ಲಾಘಿಸಿದರು. ನಿಯೋಜಿತ ಲಯನ್ಸ್ ಜಿಲ್ಲಾ ಗವರ್ನರ್ ರೊನಾಲ್ಡ್ ಐ ಗೋಮ್ಸ್ ಮಾತನಾಡಿ ಪಿಲಿಪೈನ್ಸ್ ದೇಶದಲ್ಲಿ ಪದವಿ ಪ್ರಮಾಣ ಪತ್ರ ನೀಡಲು ಹತ್ತು ಗಿಡಗಳನ್ನು ನೆಟ್ಟು ಪೋಷಿಸಿದ ದಾಖಲೆ ಕೇಳುತ್ತಿದ್ದಾರೆ ಇದೇ ಮಾದರಿ ನಮಗೂ ಅಗತ್ಯ ಬರಬಹುದು ಎಂದರು.
ಉಳ್ಳಾಲ ಸಯ್ಯದ್ ಮದನಿ ದರ್ಗಾ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಕಡಲತಡಿಯ ಉಳ್ಳಾಲದಲ್ಲೂ ಈ ಬಾರಿ ನೀರಿಗೆ ಬರ ಬಂದಿರುವುದು ಮುಂದಿನ ದಿನಗಳಲ್ಲಿ ನಾವು ಕೈಗೊಳ್ಳಬೇಕಾದ ಕಾರ್ಯಕ್ರಮಗಳಿಗೆ ಮುನ್ಸೂಚನೆಯಾಗಿದೆ ಎಂದರು. ಉಳ್ಳಾಲ ನಗರಸಭೆಯ ಆಡಳಿತಾಧಿಕಾರಿ ವಾಣಿ. ವಿ ಆಳ್ವ, ತಾರನಾಥ ಶೆಟ್ಟಿ ಬೋಳಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಉಮ್ಮರಬ್ಬ, ನಾಗೇಶ್ ಎಂ.ಜೆ.ಎಫ್ ಮಾಧವ ಉಳ್ಳಾಲ ಮುಂತಾದವರು ವೇದಿಕೆಯಲ್ಲಿದ್ದರು. ಎ. ಕೆ ಮಂಜನಾಡಿ ಸ್ವಾಗತಿಸಿದರು. ವಿಜಯವಿಷ್ಣು ಮಯ್ಯ ಕಾರ್ಯಕ್ರಮ ನಿರೂಪಿಸಿದರು.


