UN NETWORKS
ಕಿನ್ಯ : ಕಳೆದೆರಡು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಕಿನ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖ್ಯ ರಸ್ತೆಗಳಲ್ಲಿ ತ್ಯಾಜ್ಯ ತುಂಬಿದ್ದು ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ತೋರಿದೆ ಎನ್ನುವ ಆರೋಪ ಕೇಳಿ ಬಂದಿದೆ.

ಕಿನ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಖ್ಯ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯಲಾದ್ದು ಮೊದಲೇ ಗಬ್ಬೆದ್ದು ನಾರುತ್ತಿತ್ತು. ಆದರೂ ಈ ಬಗ್ಗೆ ಗ್ರಾಮ ಪಂಚಾಯಿತಿ ಗಂಭೀರವಾಗಿ ಪರಿಗಣಿಸಿರಲೇ ಇಲ್ಲ. ಇದೀಗ ನಾಟೆಕಲ್‍ನಿಂದ ಸಂಕೇಶವರೆಗೆ ತೋಡಿನಲ್ಲಿ ಕೊಳೆತು ಕಾರುತ್ತಿದ್ದ ತ್ಯಾಜ್ಯ ಮುಖ್ಯ ರಸ್ತೆಯಲ್ಲೇ ನೀರಿನೊಂದಿ ಹರಿದು ಹೋಗಿದೆ. ಅಷ್ಟಕ್ಕೂ ನಿಲ್ಲದೆ ಕೆಳಭಾಗದಲ್ಲಿರುವ ಮನೆಗಳ ಆವರಣವನ್ನೂ ಸೇರಿಕೊಂಡಿದೆ ಎನ್ನಲಾಗಿದೆ.
ಈ ತ್ಯಾಜ್ಯದಿಂದ ಸ್ಥಳೀಯವಾಗಿ ರೋಗಭೀತಿ ಹರಡಿದ್ದು, ಶಾಲೆಗೆ ಹೋಗುವ ಮಕ್ಕಳು, ಸಾರ್ವಜನಿಕರು ನಡೆದಾಡಲೂ ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಕಿನ್ಯ ಗ್ರಾಮ ಪಂಚಾಯಿತಿ ಪ್ರತಿನಿಧಿಗಳಿಗೆ ಮಾಹಿತಿ ನೀಡಲಾಗಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತಾಳಿದ್ದಾರೆ ಎನ್ನುವ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ. ಈ ಪ್ರದೇಶದ ಸಮೀಪದಲ್ಲೇ ವೈದ್ಯಕೀಯ ಕಾಲೇಜು, ಆಸ್ಪತ್ರೆಗಳಿರುವುದರಿಂದ ಸ್ವಚ್ಛತೆಗೆ ಆದ್ಯತೆ ನೀಡಬೇಕಿದ್ದ ಪಂಚಾಯಿತಿ ಸ್ವಚ್ಛತೆಯನ್ನು ಕಡೆಗಣಿಸಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
`ನಿನ್ನೆ ಬೆಳಗ್ಗೆ ಯಾರೋ ಕರೆ ಮಾಡಿ ವಿಷಯ ತಿಳಿಸಿದ ಬಳಿಕ ರಸ್ತೆಯಲ್ಲಿ ತ್ಯಾಜ್ಯ ಬಿದ್ದಿರುವ ಬಗ್ಗೆ ಮಾಹಿತಿ ಸಿಕ್ಕಿದೆ, ಸೋಮವಾರ ಸಾಮಾನ್ಯ ಸಭೆಯಿದ್ದು ಈ ಸಂದರ್ಭ ಸ್ಥಳೀಯ ಸದಸ್ಯರಲ್ಲಿ ಚರ್ಚಿಸಲಾಗುವುದು’
ಮಾಲಿನಿ, ಕಿನ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷೆ


