UN NETWORKS
ದೇರಳಕಟ್ಟೆ: ಇಂದಿನ ಆಧುನಿಕತೆಯಲ್ಲಿ ಪ್ಲಾಸ್ಟಿಕ್ ಹಾಗೂ ವಾಯುಮಾಲಿನ್ಯದ ಸಮಸ್ಯೆ ಹೆಚ್ಚಾಗುತ್ತಿದ್ದು ಕೂಡಲೇ ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಅಪಾಯದ ದಿನಗಳು ಎದುರಾಗಲಿವೆ. ಪರಿಸರ ಸಂರಕ್ಷಣೆಯ ಬಗ್ಗೆ ಇಡೀ ಸಮಾಜವೇ ಜಾಗೃತವಾಗಬೇಕಿದೆ ಎಂದು ದ.ಕ. ಜಿಲ್ಲಾ ನಾಯಾಧೀಶ ಕಡ್ಲೂರು ಸತ್ಯನಾರಾಯಣ ಆಚಾರ್ಯ ಅವರು ಹೇಳಿದರು.

ಅವರು ದೇರಳಕಟ್ಟೆಯ ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ನಿಟ್ಟೆ ವಿವಿ ಹಸಿರು ಯೋಜನೆ ಸಮಿತಿಯ ಆಶ್ರಯದಲ್ಲಿ ವಿವಿಯ ಪನೀರು ಕ್ಯಾಂಪಸ್‍ನಲ್ಲಿ ಗುರುವಾರ ನಡೆದ ವಿಶ್ವಪರಿಸರ ದಿನಾಚಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಪಾಸ್ಟಿಕ್‍ನಿಂದ ಅದೆಷ್ಟೋ ಅನಾಹುತಗಳು ಎದುರಾದರೂ ನಾವು ಇನ್ನೂ ಜಾಗರೂಕರಾಗಿಲ್ಲ. ಪ್ಲಾಸ್ಟಿಕ್ ಸಂಪೂರ್ಣವಾಗಿ ನಿಷೇದವಾದರೆ ಪರಿಸರ ಮಾಲಿನ್ಯದ ಸುಮಾರು 60% ಸಮಸ್ಯೆ ನಿವಾರಣೆಯಾದಂತೆ. ಪ್ಲಾಸ್ಟಿಕ್ ಸಮಸ್ಯೆಯ ಕುರಿತು ಜನಸಾಮನ್ಯರು ಸೇರಿದಂತೆ ಸರಕಾರವೂ ಜಾಗೃತಗೊಂಡು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ರಾಜಶೇಖರ್ ಪುರಾಣಿಕ್ ಅವರು ಮಾತನಾಡಿ, ಕೈಗಾರಿಕಾ ಘಟಕಗಳಿಂದ ಆಗುವ ವಾಯುಮಾಲಿನ್ಯ ತಡೆಗಟ್ಟಲು ಇಂದು ನೂತನ ತಂತ್ರಜ್ಞಾನ ವ್ಯವಸ್ಥೆಗಳು ಬಂದಿದ್ದು ಇವುಗಳ ಅಳವಡಿಕೆಗೆ ಹೆಚ್ಚಿನ ಒತ್ತುನೀಡಲಾಗುತ್ತಿದೆ. ಅಲ್ಲದೆ ಜಿಲ್ಲೆಯಲ್ಲಿರುವ ಹೆಚ್ಚಿನ ಕೈಗಾರಕಾ ಘಟಕ ಹಾಗೂ ಇತರ ಸಂಸ್ಥೆಗಳು ಕೂಡ ನೀರಿನ ಪುನರ್‍ಬಳಕೆಯ ಬಗ್ಗೆ ಹೆಚ್ಚಿನ ಆಧ್ಯತೆ ನೀಡುತ್ತಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ನಿಟ್ಟೆ ವಿವಿಯ ಕುಲಪತಿ ಪ್ರೊ.ಸತೀಶ್ ಕುಮಾರ್ ಭಂಡಾರಿ ಅವರು, ಪರಿಸರ ಸಂರಕ್ಷಣೆಯ ಬಗ್ಗೆ ನಿಟ್ಟೆ ಕ್ಯಾಂಪಸ್‍ನಲ್ಲಿ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕ್ಯಾಂಪಸ್ ಹಸೀರಿಕರಣ ಬಗ್ಗೆ ಈಗಾಗಲೇ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಇತರ ಕಡೆಗಳಲ್ಲಿ ಪರಿಸರ ಸಂರಕ್ಷಣೆಯ ಕುರಿತ ಜಾಗೃತಿಯನ್ನು ಮೂಡಿಸಲಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಎನ್‍ಐಟಿಕೆಯ ಡಾ.ಶ್ರೀನಿಕೇತನ್, ಜಿಲ್ಲಾ ಸಿವಿಲ್ ನ್ಯಾಯಾದೀಶರಾದ ಗಂಗಾಧರ ಎ.ಜೆ, ವಲಯ ಅರಣ್ಯಾಧಿಕಾರಿ ಪಿ.ಶ್ರೀಧರ್ ಮೊದಲಾದವರು ಉಪಸ್ಥಿತರಿದ್ದರು. ನಿಟ್ಟೆ ವಿವಿಯ ಕುಲಸಚಿವರಾದ ಡಾ.ಅಲ್ಕಾ ಕುಲಕರ್ಣಿ ಸ್ವಾಗತಿಸಿ, ನಿಟ್ಟೆ ಹಸಿರು ಯೋಜನೆ ಸಮಿತಿಯ ಡಾ.ಸ್ಮಿತಾ ಹೆಗ್ಡೆ ಅವರು ವಂದಿಸಿದರು. ಅಕ್ಷತಾ ಹಾಗೂ ಪೃಥ್ವಿಸಾಗರ್ ಕಾರ್ಯಕ್ರಮ ನಿರೂಪಿಸಿದರು.


