ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೊಣಾಜೆ : ಮಂಗಳೂರು ವಿಶ್ವವಿದ್ಯಾನಿಲಯ ಹಳೆ ವಿದ್ಯಾರ್ಥಿ ಸಂಘ (ಮಂಗಳಾ ಅಲ್ಯುಮಿನಿ ಅಸೋಸೀಯೇಶನ್(ಮಾ) ಕರ್ನಾಟಕ ಬ್ಯಾಂಕ್‍ನ ಸಹಭಾಗಿತ್ವದಲ್ಲಿ ಕೊಣಾಜೆ ಮಂಗಳೂರು ವಿಶ್ವವಿದ್ಯಾನಿಲಯದ ಬಸ್ ನಿಲ್ದಾಣ ಬಳಿ ನೂತನವಾಗಿ ಕರ್ನಾಟಕ ಬ್ಯಾಂಕ್‍ನ ಸ್ಥಾಪಕ ಕೆ.ಎಸ್.ಎನ್. ಅಡಿಗ ಅವರ ಸ್ಮರಣಾಥವಾಗಿ ನಿರ್ಮಿಸಿದ ಸುಸಜ್ಜಿತವಾದ ಬಸ್ ತಂಗುದಾಣ ಮತ್ತು ವಿಶ್ವವಿದ್ಯಾನಿಲಯದ ಮಾಹಿತಿ ನೀಡುವ ಹೆಲ್ಪ್ ಡೆಸ್ಕ್‍ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಚಾಲನೆ ನೀಡಿದರು.
ನೂತನ ಬಸ್ಸು ತಂಗುದಾಣಕ್ಕೆ ಚಾಲನೆ ನೀಡಿದ ಸಚಿವ ಯು.ಟಿ.ಖಾದರ್ ಮಾತನಾಡಿ ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳೊಂದಿಗೆ ಜನಸಾಮಾನ್ಯರಿಗೂ ಸಹಾಯಕವಾದ ಈ ಮಾದರಿ ಬಸ್ ನಿಲ್ದಾಣದ ನಿರ್ಮಾಣ ಕಾರ್ಯ ಶ್ಲಾಘನೀಯವಾಗಿದ್ದು, ಕರ್ಣಾಟಕ ಬ್ಯಾಂಕ್‍ನಂತೆ ಇತರ ಸಂಘ ಸಂಸ್ಥೆಗಳು ವಿಶ್ವವಿದ್ಯಾನಿಲಯ ಜೊತೆಗೂಡಿ ಕಾರ್ಯ ನಿರ್ವಹಿಸಿದಾಗ ವಿಶ್ವವಿದ್ಯಾನಿಲಯ ಇನ್ನಷ್ಟು ಯಶಸ್ವಿಯಾಗಲು ಸಾಧ್ಯ ಎಂದರು.
ಬಸ್ಸು ತಂಗುದಾಣದ ಫಲಕ ಅನಾವರಣಗೊಳಿಸಿ ಮಾತನಾಡಿದ ಕರ್ಣಾಟಕ ಬ್ಯಾಂಕ್‍ನ ಆಡಳಿತ ನಿರ್ದೇಶಕ ಜಯರಾಮ ಭಟ್ ಮಾತನಾಡಿ ಮಂಗಳೂರು ವಿಶ್ವವಿದ್ಯಾನಿಲಯದ ಮೂಲಭೂತ ಸೌಕರ್ಯ ಅಭಿವೃದ್ಧಿಯ ಅಂಗವಾಗಿ ಮಂಗಳಾ ಅಲ್ಯುಮಿನಿ ಅಸೋಸಿಯೇಶನ್‍ನ ಬೇಡಿಕೆಯಂತೆ ಕೆ.ಎಸ್.ಎನ್‍ಅಡಿಗರ ಶತಮನೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಬಸ್ ತಂಗುದಾಣ ನಿರ್ಮಿಸುವ ಯೋಜನೆಯನ್ನು ಪ್ರಕಟಿಸಿತ್ತು. ಕರ್ಣಾಟಕ ಬ್ಯಾಂಕ್‍ನೊಂದಿಗೆ ವಿಶ್ವವಿದ್ಯಾನಿಲಯದ ಸ್ಥಾಪನೆಯಲ್ಲಿ ಅಡಿಗರ ಪಾತ್ರ ಮಹತ್ವದ್ದಾಗಿದ್ದು, ಈ ನಿಟ್ಟಿನಲ್ಲಿ ಅಡಿಗರ ಹೆಸರು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಮತ್ತು ಜನರಿಗೆ ಸದ್ಬಳಕೆಯಾಗುವಂತಹ ಈ ಕಾರ್ಯಕ್ಕೆ ಬ್ಯಾಂಕ್ ಸಹಯೋಗ ನೀಡಿದ್ದು, ವಿಶ್ವವಿದ್ಯಾನಿಲಯದೊಂದಿಗೆ ಬ್ಯಾಂಕ್ ಉತ್ತಮ ಸಹಯೋಗ ನೀಡುತ್ತಿದ್ದು, ಮುಂದೆಯೂ ಇದೇ ರೀತಿ ಮುಂದುವರೆಯಲಿದೆ ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ಸಂಪೂರ್ಣ ಮಾಹಿತಿ ನೀಡುವ ನಿಟ್ಟಿನಲ್ಲಿ ಮಂಗಳಾ ಅಲ್ಯುಮಿನಿ ಅಸೋಸಿಯೇಶನ್(ಮಾ) ಬಸ್ಸು ತಂಗುದಾಣದ ಬಳಿ ಸ್ಥಾಪಿಸಿರುವ ಹೆಲ್ಪ್ ಡೆಸ್ಕ್‍ಗೆ ಮಂಗಳೂರು ವಿಶ್ವವಿದ್ಯಾನಿಲಯದ ಉಪ ಕುಲಪತಿ ಪ್ರೊ. ಕೆ. ಭೈರಪ್ಪ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಪಿ.ಯಸ್.ಯಡಪಡಿತ್ತಾಯ, ಪರೀಕ್ಷಾಂಗ ಕುಲಸಚಿವ ಪ್ರೊ. ಬಿ. ನಾರಾಯಣ, ಹಣಕಾಸು ವಿಭಾಗದ ಅಬಕಾರಿ ಪ್ರೊ. ಪಿ.ಎ.ರೇಗೋ, ಮಂಗಳ ಅಲ್ಯುಮಿನಿ ಅಸೋಸಿಯೇಷನ್‍ನ ಅಧ್ಯಕ್ಷ ದಿನೇಶ್ ಕುಮಾರ್ ಆಳ್ವ, ಪ್ರೊ. ಪಿ.ಎಲ್.ಧರ್ಮ, ಸದಾನಂದ ಶೆಟ್ಟಿ, ಡಾ.ದೇವಿಪ್ರಭ, ಪ್ರೊ.ಎ.ಎಮ್.ಖಾನ್, ಡಾ.ಟಿ.ವೈ.ಮಲ್ಲಯ್ಯ ಮೊದಲಾದವರು ಉಪಸ್ಥಿತರಿದ್ದರು.












