UN NETWORKS
ಉಳ್ಳಾಲ : ತಾಳ್ಮೆ , ಪ್ರೀತಿ, ವಿಶ್ವಾಸ, ಸಹಕಾರ ಈದ್ ಹಬ್ಬದ ಸಂದೇಶವಾಗಿದೆ. ಒಂದು ತಿಂಗಳ ಉಪವಾಸ ಆಚರಿಸಿ ಈದ್ ಹಬ್ಬವನ್ನು ಸಂತೋಷದಿಂದ ಆಚರಿಸಲಾಗುತ್ತಿದೆ. ಸಹೋದರತೆ, ಏಕತೆ, ಸಹಕಾರ, ತಾಳ್ಮೆ ಕಾಪಾಡುವ ಮೂಲಕ ಪ್ರೀತಿಯ ಸಮಾಜ ನಿರ್ಮಿಸುವ ಮುಖೇನ ಸರ್ವರನ್ನೂ ಪ್ರೀತಿಸಿಕೊಂಡು ಅಲ್ಲಾಹುನ ಕೃಪೆಗೆ ಪಾತ್ರರಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಹೇಳಿದರು.



ಈದ್ ಉಲ್ ಫಿತ್ರ್ ಪ್ರಯುಕ್ತ ಉಳ್ಳಾಲ ಸೈಯ್ಯಿದ್ ಮದನಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆಯಲ್ಲಿ ಭಾಗವಹಿಸಿ, ಸರ್ವರಿಗೂ ಸರಕಾರದ ಪ್ರಯುಕ್ತ ಈದ್ ಹಬ್ಬದ ಶುಭಾಷಯಗಳನ್ನು ಜನತೆಗೆ ಸಲ್ಲಿಸಿ ಮಾತನಾಡಿದರು.
ಈದ್ ಹಬ್ಬದ ಸಂದೇಶಗಳನ್ನು ಪರಸ್ಪರ ಹಂಚುವುದು, ಸಂಸ್ಕೃತಿಯನ್ನು ಬಿಂಬಿಸುವ ಜತೆಗೆ, ಎಲ್ಲಾ ಧರ್ಮದವರ ಜತೆಗೆ ವಿಶ್ವಾಸ ಗಳಿಸಿಕೊಂಡು ಅಭಿವೃದ್ಧಿಯ ಕರ್ನಾಟಕ, ವಿಶ್ವಾಸಯುತ ಸಮಾಜ, ಬಲಿಷ್ಠ ಭಾರತ ನಿರ್ಮಾಣಕ್ಕೆ ಪಣ ತೊಡಬೇಕು. ವಿಶ್ವ ಶಾಂತಿಗೆ ಎಲ್ಲರೂ ಪ್ರಾರ್ಥಿಸಬೇಕು. ಎಲ್ಲಾ ಧರ್ಮೀಯರ ಹಬ್ಬಗಳನ್ನು ಪರಸ್ಪರ ಬೆರೆತುಕೊಂಡು ಆಚರಿಸುವುದೇ ಧರ್ಮ ಎಂದರು. ಜಿಲ್ಲೆಯಲ್ಲಿ ಹಾಹಾಕಾರವಿಲ್ಲ: ಜಿಲ್ಲೆಯಲ್ಲಿ ನೀರಿನ ಹಾಹಾಕಾರ ಇಲ್ಲ. ತಿಂಗಳಿನಿಂದ ನೀರಿನ ತೊಂದರೆಯನ್ನು ಮನಗಂಡು ಯೋಜನೆ ರೂಪಿಸುತ್ತಾ ಬಂದಿರುವುದರಿಂದ ಸಮಸ್ಯೆ ನಿವಾರಿಸಲು ಸಾಧ್ಯವಾಗಿದೆ. ಮಳೆಗಾಗಿ ತಿಂಗಳಿನಿಂದ ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ. ಶೀಘ್ರದಲ್ಲೇ ಮಳೆಯಾಗುವ ವಿಶ್ವಾಸವಿದೆ ಎಂದರು.
ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ ಉಪವಾಸದ ಸಂದರ್ಭ ನಡೆಯುವ ತಪ್ಪುಗಳ ತಿದ್ದುಪಡಿಕೆಗೆ ಫಿತ್ರ್ ಝಕಾತ್ ಆಚರಿಸಲಾಗುತ್ತದೆ. ಸಂತೋಷದಿಂದಲೇ ಬಡವರಿಗೆ, ಅಸಹಾಯಕರಿಗೆ ಸಹಕರಿಸುವುದೇ ಹಬ್ಬದ ವಿಶೇಷತೆ. ಮುಸ್ಲಿಂ ಸಹೋದರರು ತಿಂಗಳ ಕಾಲ ಉಪವಾಸ ವ್ರತ ಆಚರಿಸಿ ಅಲ್ಲಾಹುವಿನ ಅನುಗ್ರಹ ಪಡೆದು ಮಾಡುವಂತಹ ದಾನ ಇತರೆ ಧರ್ಮದವರು ಮೆಚ್ಚುವಂತೆ ಆಗಲಿ. ಸರ್ವರೂ ಮಾನವೀಯರು ಅನ್ನುವ ವಿಶ್ವಾಸ ಜನರಲ್ಲಿ ಮೂಡಲಿ.ಈ ಮೂಲಕ ಶಾಂತಿ ಸೌಹಾರ್ದದ ನಾಡಾಗಿ ಬೆಳಗಲಿ ಎಂದರು. ಖತೀಬರಾದ ಅಬ್ದುಲ್ಅಝೀಝ್ ಬಾಖವಿ ಈದ್ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಸಿದರು.
ಸಹಾಯಕ ಖಾಝಿ ಅಬ್ದುಲ್ ರವೂಫ್ ಮುಸ್ಲಿಯಾರ್ ಝಿಯಾರತ್ ನೆರವೇರಿಸಿದರು. ಮಂಗಳೂರು ನಗರ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ದರ್ಗಾ ಭೇಟಿ ನೀಡಿ ಶುಭಹಾರೈಸಿದರು. ದರ್ಗಾ ಪ್ರಧಾನ ಕಾರ್ಯದರ್ಶಿ ತ್ವಾಹ ಮುಹಮ್ಮದ್, ಉಪಾಧ್ಯಕ್ಷರಾದ ಬಾವ ಮುಹಮ್ಮದ್, ಜತೆಕಾರ್ಯದರ್ಶಿ ಆಝಾದ್ ಇಸ್ಮಾಯೀಲ್, ಸಯ್ಯಿದ್ ಮದನಿ ಅರಬಿಕ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಅಮೀರ್ ಹಾಜಿ, ಜತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲ, ಸದಸ್ಯರಾದ ಫಾರೂಕ್ ಉಳ್ಳಾಲ್, ಯು.ಕೆ ಮುಹಮ್ಮದ್ ಮುಸ್ತಫ ಮಂಚಿಲ, ಅಲಿಮೋನು, ಮಹ್ಮೂದ್ ಅಳೇಕಲ, ಅಬೂಬಕ್ಕರ್ ಅಲಿನಗರ, ಹಮೀದ್ ಅಳೇಕಲ, ಇಬ್ರಾಹೀಮ್ ಹಾಜಿ ಉಳ್ಳಾಲ ಬೈಲು, ಹಮೀದ್ಕೋಡಿ, ಮೊಯ್ದಿನಬ್ಬಆಝಾದ್ ನಗರ, ಮಾಜಿ ಸದಸ್ಯರಾದಕಬೀರ್ಚಾಯಬ್ಬ, ಆದಮ್ ಹಾಜಿ, ಮಾಜಿ ಉಳ್ಳಾಲ ನಗರಸಭಾಧ್ಯಕ್ಷ ಬಾಝಿಲ್ಡಿಸೋಜ, ಉಳ್ಳಾಲ ನಗರಸಭಾ ಸದಸ್ಯರಾದ ಅಶ್ರಫ್, ಮುಹಮ್ಮದ್ ಮೋನು ಮುಕ್ಕಚ್ಚೇರಿ, ಮತ್ತಿತ್ತರರು ಉಪಸ್ಥಿತರಿದ್ದರು.


