UN NETWORKS
ಉಳ್ಳಾಲ: ಯಾವುದೇ ಸಂಘ-ಸಂಸ್ಥೆಗಳು ಧನಾತ್ಮಕವಾಗಿ ಮುನ್ನಡೆದಾಗ ಆಡಳಿತ ವ್ಯವಸ್ಥೆ ಸುಲಭವಾಗುತ್ತದೆ. ಮುನ್ನೂರು ಯುವಕ ಮಂಡಲ ಕಳೆದ ಐವತ್ತು ವರ್ಷಗಳಲ್ಲಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುವ ಮೂಲಕ ಸಮಾಜದ ಪ್ರಶ್ನೆಗಳಿಗೆ ಉತ್ತರ ನೀಡುವಲ್ಲಿ ಸಫಲವಾಗಿದೆ ಎಂದು ಸಚಿವ ಯು.ಟಿ.ಖಾದರ್ ಹೇಳಿದರು.


ಕುತ್ತಾರ್‍ನಲ್ಲಿರುವ ಮುನ್ನೂರು ಯುವಕ ಮಂಡಲದ ಸುವರ್ಣ ಮಹೋತ್ಸವ ಸಂಭ್ರಮದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಸ್ಮರಣ ಸಂಕಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಸಂಘ-ಸಂಸ್ಥೆಗಳು ಸುವರ್ಣ ಮಹೋತ್ಸವ ಆಚರಿಸುವುದು ಮುಖ್ಯವಲ್ಲ, ಸುದೀರ್ಘ ಅವಧಿಯಲ್ಲಿ ಆ ಸಂಘದಿಂದ ಸಮಾಜಕ್ಕೆ ಎಷ್ಟು ಲಾಭವಾಯಿತು, ಎಷ್ಟು ಫಲಾನುಭವಿಗಳಿಗೆ ಪ್ರಯೋಜನವಾಗಿದೆ ಎನ್ನುವುದು ಮುಖ್ಯ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಸಂಘ-ಸಂಸ್ಥೆಗಳು ಹುಟ್ಟು ಪಡೆದ ಮಾತ್ರಕ್ಕೆ ಮುನ್ನಡೆಯುತ್ತದೆ ಎಂದೇನೂ ಇಲ್ಲ. ಆದರೆ ಮುನ್ನೂರು ಯುವಕ ಮಂಡಲ ಸುದೀರ್ಘ ಅವಧಿಯಲ್ಲಿ ಸೇವೆಯೊಂದಿಗೆ ಸಂವತ್ಸರದಲ್ಲೂ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಪತ್ರಕರ್ತ ಶಶಿಧರ್ ಪೊಯ್ಯತ್ತಬೈಲ್ ಮಾತನಾಡಿ, ಇಂದಿನ ಕಾಲದಲ್ಲಿ ಸಿಇಟಿ. ನೀಟ್ ಸೇರಿದಂತೆ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳು ಮಾತ್ರವಲ್ಲದೆ ಪೋಷಕರು ಕೂಡಾ ಮಾಹಿತಿಯನ್ನು ಅರಿತುಕೊಂಡಿರಬೇಕು ಎಂದು ಹೇಳಿದರು. ಈ ಸಂದರ್ಭ ಎಸ್ಸೆಸ್ಸೆಎಲ್ಸಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಅರ್ಹ ವಿದ್ಯಾರ್ಥಿಗಳಿಗ ಪುಸ್ತಕ ವಿತರಿಸಲಾಯಿತು. ಬಂಟರ ಸಂಘದ ಅಧ್ಯಕ್ಷ ವಿವೇಕ್ ಶೆಟ್ಟಿ ಬೊಳ್ಯಗುತ್ತು ಅವರು ಸಮಾರಂಭವನ್ನು ಉದ್ಘಾಟಿಸಿದರು.
ಸೋಮೇಶ್ವರ ಶ್ರೀ ಸೋಮನಾಥ ದೇವಸ್ಥಾನದ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ ಅಧ್ಯಕ್ಷತೆ ವಹಿಸಿದ್ದರು. ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್, ಪತ್ರಕರ್ತ ಶಶಿಧರ್ ಪೊಯ್ಯತ್ತಬೈಲ್, ನಾಟಕಕಾರ ಡಾ.ಸಂಜೀವ ದಂಡಕೇರಿ, ರಾಜ್ಯ ಕೈಗಾರಿಕಾ ಮಂಡಳಿ ಉಪಾಧ್ಯಕ್ಷ ಮಯೂರ್ ಉಳ್ಳಾಲ್, ಯುವಕ ಮಂಡಲದ ಸಲಹೆಗಾರ ಕೃಷ್ಣಪ್ಪ ಸಾಲ್ಯಾನ್, ಗೌರವಾಧ್ಯಕ್ಷ ರವೀಂದ್ರನಾಥ ಪೂಂಜ, ಹರೀಶ್ ಕುಂಡೋಳಿ, ಅಧ್ಯಕ್ಷ ಶಶೀಂದ್ರ ಕುಕ್ಯಾನ್ ಮೊದಲಾದವರು ಉಪಸ್ಥಿತರಿದ್ದರು. ಜಯ ದೇಸೋಡಿ ಸ್ವಾಗತಿಸಿದರು. ಐತಪ್ಪ ವಂದಿಸಿದರು. ಮನೋಹರ್ ಕಾರ್ಯಕ್ರಮ ನಿರೂಪಿಸಿದರು.


