ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೊಣಾಜೆ: ವಿಜೇತ ಕಾರ್ಯಕರ್ತರು ಗ್ರಾಮದ ಏಳಿಗೆಯನ್ನು ಮಾಡುವುದರ ಜತೆಗೆ ಪಕ್ಷದ ಹೆಸರಿಗೆ ಕೀರ್ತಿ ತರಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.
ಅವರು ಅಸೈಗೋಳಿ ಲಯನ್ಸ್ ಕ್ಲಬ್ ನಲ್ಲಿ ಶುಕ್ರವಾರ ಜರಗಿದ ಗ್ರಾಮ ಪಂಚಾಯಿತಿ ಚುನಾವಣೆ ವಿಜೇತರ ಹಾಗೂ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.



ಗ್ರಾಮದ ಜನರು ಅಭಿವೃದ್ಧಿಯ ಉದ್ದೇಶವನ್ನು ಇಟ್ಟುಕೊಂಡು ಪಕ್ಷದ ಕಾರ್ಯಕರ್ತರನ್ನು ಚುನಾಯಿಸಿದ್ದಾರೆ. ಅವರ ವಿಶ್ವಾಸವನ್ನು ಉಳಿಸುವ ಕಾರ್ಯ ಜಯಗಳಿಸಿದ ಕಾರ್ಯಕರ್ತರಿಂದ ಆಗಬೇಕಿದೆ. ಜನವಿರೋಧಿಯಾಗಿರುವ ಕೇಂದ್ರ ಸರಕಾರದ ವಿರುದ್ಧ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ವತಿಯಿಂದ ಹಕ್ಕೊತ್ತಾಯ ನಡೆಯಲಿದ್ದು, ಅದಕ್ಕೆ ಎಲ್ಲರ ಬೆಂಬಲ ಅಗತ್ಯ ಎಂದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಉಳ್ಳಾಲ್ ಮಾತನಾಡಿ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ಪಕ್ಷದಲ್ಲಿದ್ದವರು, ಪಕ್ಷ ವಿರೋಧಿಯಾಗಿ ನಡೆದುಕೊಂಡಿದ್ದಾರೆ. ಅಂತಹವರ ವಿರುದ್ಧ ಜಿಲ್ಲಾ ಕಾಂಗ್ರೆಸ್ ಅಧಿಕೃತರಿಗೆ ದೂರು ನೀಡಲಾಗುವುದು ಹಾಗೂ ಜಯಗಳಿಸಿದ ಕಾರ್ಯಕರ್ತರು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಕಿತ್ತಾಡದೆ, ಜನರ ಇಚ್ಛೆಯಂತೆ ಅವಕಾಶ ದೊರೆತರೆ ಸೇವೆಗೈಯ್ಯುವುದು ಒಳಿತು ಎಂದರು.
ಈ ಸಂದರ್ಭ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಪ್ರಧಾನ ಕಾರ್ಯದರ್ಶಿ ಜಲೀಲ್ ಮೊಂಟೆಪದವು, ತಾ.ಪಂ ಸದಸ್ಯ ಮಹಮ್ಮದ್ ಮುಸ್ತಾಫ, ಜಿ.ಪಂ ಸದಸ್ಯ ಎನ್.ಎಸ್.ಕರಿಂ, ಉಳ್ಳಾಲ ಅಲ್ಪಸಂಖ್ಯಾತ ಬ್ಲಾಕ್ ಅಧ್ಯಕ್ಷ ಮೊಯಿದ್ದೀನ್ ಕುಂಞ, ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕ ಬಶೀರ್ ಕಿನ್ಯಾ, ಬ್ಲಾಕ್ ಉಪಾಧ್ಯಕ್ಷ ಸಂತೋಷ್ ಶೆಟ್ಟಿ, ಮೂಡಾ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಶ್ರೀನಿವಾಸ ಶೆಟ್ಟಿ ಪುಲ್ಲು, ಕುರ್ನಾಡು ಗ್ರಾ.ಪಂ ಮಾಜಿ ಅಧ್ಯಕ್ಷ ದೇವದಾಸ್ ಭಂಡಾರಿ, ಪದ್ಮನಾಭ ನರಿಂಗಾನ , ಯೂತ್ ಕಾಂಗ್ರೆಸ್ ಅಧ್ಯಕ್ಷ ನಝರ್ ಕೊಣಾಜೆ, ಕಿನ್ಯಾ ಗ್ರಾ.ಪಂ ಮಾಜಿ ಅಧ್ಯಕ್ಷ ಮಹಮ್ಮದ್ ಬಶೀರ್ ಮೊದಲಾದವರು ಉಪಸ್ಥಿತರಿದ್ದರು.
ಆರೋಗ್ಯ ಇಲಾಖೆಯ ಜಾಹೀರಾತಿನಲ್ಲಿ ಹಿಂದೂ ದೇವರಿಗೆ ಅವಮಾನ ಎಸಯಲಾಗಿದೆ ಎಂಬ ಪ್ರಮೋದ್ ಮುತಾಲಿಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವರು ಆರೋಗ್ಯದ ಕುರಿತ ಅರಿವು ಮೂಡಿಸುವ ಜವಾಬ್ದಾರಿ ಎನ್.ಜಿ.ಓ ಗಳಿಗೆ ನೀಡಲಾಗಿದೆ. ಅವರು ಈ ಬಗ್ಗೆ ಯಾವುದೇ ಅನುಮತಿ ಪಡೆದಿಲ್ಲ. ಧರ್ಮನಿಂದನೆ ಇದ್ದಲ್ಲಿ ಬದಲಾವಣೆಗೆ ಪ್ರಯತ್ನಿಸುತ್ತೇನೆ
-ಸಚಿವ ಖಾದರ್




