UN NETWORKS
ಕೊಣಾಜೆ: ಅಂಬಿಗರ ಚೌಡಯ್ಯರವರು ಅಂದಿನ ಕಾಲದಲ್ಲಿಯೇ ಜಾತಿ, ಅಸ್ಪ್ರಶ್ಯತೆಯ ಬಗ್ಗೆ ದ್ವನಿಯೆತ್ತಿದ ನಾಯಕರಾಗಿದ್ದರು. ಇಂದಿನ ಪ್ರಸ್ತುತ ಕಾಲಘಟ್ಟದಲ್ಲಿಯೂ ನಾವು ಅಂಬಿಗರ ಚೌಡಯ್ಯರ ಬಗ್ಗೆ ಹೆಚ್ಚೆಚ್ಚು ತಿಳಿದುಕೊಂಡು ಅವರ ವಚನಗಳ ಮಹತ್ವವನ್ನು ನಾವು ಅರಿತುಕೊಳ್ಳುವ ಅನಿವಾರ್ಯತೆ ಇದೆ ಎಂದು ಮಂಗಳೂರು ವಿವಿ ಪ್ರಭಾರ ಕುಲಪತಿ ಪ್ರೊ.ಕಿಶೋರಿ ನಾಯಕ್ ಅವರು ಅಭಿಪ್ರಾಯ ಪಟ್ಟರು.

ಅವರು ಮಂಗಳೂರು ವಿವಿಯ ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ಆಶ್ರಯದಲ್ಲಿ ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ಗುರುವಾರ ನಡೆದನಂಬಿಗರ ಅಂಬಿಗ’ ನಾಟಕ ಪ್ರದರ್ಶನಕ್ಕೆ ಡೋಲು ಬಾರಿಸುವ ಮೂಲಕ ಚಾಲನೆ ನೀಡಿದರು. ನಂಬಿಗರ ಅಂಬಿಗ ನಾಟಕ ನೋಡಿದ ನಂತರ ನಮಗೆ ಇಂದಿನ ಕಾಲಕ್ಕೂ ಅವರ ವಚನಗಳು ಎಷ್ಟು ಪ್ರಸ್ತುತವಾಗುತ್ತವೆ ಎಂಬುದನ್ನು ನಾವು ಅರಿತುಕೊಳ್ಳಬಹುದು. ಅಲ್ಲದೆ ನಾಟಕದಲ್ಲಿ ಪಾತ್ರ ಮಾಡಿದ ವಿದ್ಯಾರ್ಥಿಗಳು ಕೂಡಾ ಉತ್ತಮ ಪ್ರದರ್ಶನ ನೀಡಿದ್ದಾರೆ. ಇಂತಹ ನಾಟಕಗಳು ಹೆಚ್ಚೆಚ್ಚು ಪ್ರದರ್ಶನವಾಗಬೇಕು ಎಂದು ಹೇಳಿದರು.
ಮಂಗಳೂರು ವಿವಿಯ ಕುಲಸಚಿವ ಪ್ರೊ.ಎ.ಎಂ.ಖಾನ್ ಅವರು ಮಾತನಾಡಿ, ಇಂದಿನ ಕಾಲದಲ್ಲಿಯೂ ಸಮಾಜದಲ್ಲಿ ಜಾತ್ಯಾತೀತ ರಾಜಕಾರಣ, ಮೇಲು ಕೀಳು ಮೊದಲಾದ ವ್ಯತ್ಯಾಸಗಳನ್ನು ಗಮನಿಸಬಹುದು. ಅಂಬಿಗರ ಚೌಡಯ್ಯರಂತಹ ಸಮಾಜ ಸುದಾರಕರು ಇಂದಿಗೂ ಅಗತ್ಯವಿದೆ ಎಂದರು. ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ಸಂಯೋಜಕರಾದ ಡಾ.ನಾಗಪ್ಪ ಗೌಡ ಅವರು ಮಾತನಾಡಿ, ಅಧ್ಯಯನ ಕೇಂದ್ರದ ವತಿಯಿಂದ ಈಗಾಗಲೇ ಹಲವಾರು ಪ್ರಚಾರೋಪನ್ಯಾಗಳು, ಪ್ರಕಟನೆಗಳು ಹೀಗೆ ಹಲವಾರು ಚಟುವಟಿಕೆಗಳ ಮೂಲಕ ಅಂಬಿಗರ ಚೌಡಯ್ಯರ ಬಗ್ಗೆ ಸಮಾಜಕ್ಕೆ ಪರಿಚಯಿಸುವ ಕಾರ್ಯ ಮಾಡುತ್ತಿದೆ. ಇದೀಗ ನಾಟಕ ಮೂಲಕ ಅಂಬಿಗರ ಚೌಡಯ್ಯರ ಬದುಕು, ಹೋರಾಟದ ಬಗ್ಗೆ ಸಮಾಜಕ್ಕೆ ತಿಳಿಯಪಡಿಸುವ ವಿಭಿನ್ನ ಪ್ರಯತ್ನ ಮಾಡಲಾಗಿದೆ ಎಂದರು.

ಕಾರ್ಯಕ್ರದಲ್ಲಿ ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ರವೀಂದ್ರಾಚಾರಿ, ನಾಟಕ ನಿರ್ದೇಶಕ ಜಗನ್ ಪವಾರ್, ಯಕ್ಷಗಾನ ಅಧ್ಯಯನ ಕೇಂದ್ರದ ಸಂಶೋಧನಾ ಸಹಾಯಕ ಯತೀಶ್ ಮೊದಲಾದವರು ಉಪಸ್ಥಿತರಿದ್ದರು. ಅರ್ಪಿತಾ ಕಾರ್ಯಕ್ರಮ ನಿರೂಪಿಸಿದರು.


