UN NETWORKS
ಪಾವೂರು : ವಾತಾವರಣದಲ್ಲಿನ ಏರುಪೇರಿನಿಂದಾಗಿ ಕಳೆದ ಎರಡು ದಶಕಗಳಿಂದ ರಾಜ್ಯದಲ್ಲಿ ಮಳೆಯ ಅನಿಶ್ಚಿತತೆ ಎಲ್ಲರನ್ನೂ ಕಾಡುತ್ತಿದ್ದು ಅಂತರ್ಜಲ ಬತ್ತಿದೆ. ಜೀವಜಗತ್ತಿನ ದಾಹ ನೀಗುವ ನೀರು ಮುಂದೊಂದು ದಿನ ಬರಿದಾಗಿ ಬಿಡಬಹುದೇ ಎನ್ನುವ ಆತಂಕ ಕಾಡುತ್ತಿದೆ. ಜನರು ನೀರಿನ ಬಗೆ ತೋರುತ್ತಿರುವ ನಿರ್ಲಕ್ಷ್ಯ, ಅತಿಯಾದ ಹಾಗೂ ಅನಾವಶ್ಯಕ ಬಳಕೆ, ಮಿತಿ ಮೀರಿದ ಕೊಳವೆ ಬಾವಿಗಳು ಅಂತರ್ಜಲವನ್ನು ಬರಿದು ಮಾಡಿದ್ದು ಸಾವಿರಾರು ಅಡಿ ಬೋರ್‌ವೆಲ್ ಕೊರೆದರೂ ಒಂದು ಹನಿ ನೀರು ಸಿಗದಂತಾಗಿದೆ.



ನೀರಿನ ಕೊರತೆ ಹೆಚ್ಚುತ್ತಿರುವ ಇಂತಹ ಸ್ಥಿತಿಯಲ್ಲಿ ಜಾಗೃತರಾಗದಿದ್ದರೆ ಮುಂದೊಂದು ದಿನ ಹನಿ ನೀರಿಗಾಗಿ ಪರಿತಪಿಸುವ ದಿನಗಳು ದೂರವಿಲ್ಲ. ಹಾಗಾಗಿ ಹರಿದು ಪೋಲಾಗುವ ಮಳೆ ನೀರು ಸಂಗ್ರಹಣೆ ಕೊಳವೆಬಾವಿಗೆ ಜಲಮರುಪೂರಣ ಇಂಗು ಗುಂಡಿಗಳ ನಿರ್ಮಾಣ ಕುಡಿಯುವ ನೀರಿಗಾಗಿ ಚಾವಣಿ ನೀರು ಸಂಗ್ರಹಣೆ ಇತ್ಯಾದಿಗಳಿಂದ ನೀರನ್ನು ಭೂಮಿಗೆ ಸೇರಿಸುವ ಮತ್ತು ಸಮರ್ಪಕವಾಗಿ ಉಪಯೋಗಿಸುವ ಕೆಲಸ ತುರ್ತಾಗಿ ಆಗಬೇಕಿದ್ದು ಆ ನಿಟ್ಟಿನಲ್ಲಿ ಕಳೆದ 32ವರ್ಷಗಳಿಂದ ಆಂತರ್ಜಲ ಸಂಶೋಧನೆ ಮಾಡುತ್ತಾ ಜಲಮರುಪೂರಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಚಿತ್ರದುರ್ಗದ ಜಲತಜ್ಞ ಡಾ. ಎನ್. ಜೆ. ದೇವರಾಜ್ ರೆಡ್ಡಿ ಅವರು ಶುಕ್ರವಾರ ಮಂಗಳೂರಿನ ಪಾವೂರು ಬಳಿಯ ಕಿರಣ್ ಕುಮಾರ ಶೆಟ್ಟಿ ಅವರ ಕೃಷಿಭೂಮಿಗಾಗಿ ಕೊರೆದ ಬೋರ್‌ವೆಲ್ ಬತ್ತಿಹೋದ ಹಿನ್ನೆಲೆಯಲ್ಲಿ ಬೋರ್ ವೆಲ್ ರೀಚಾರ್ಜ್ ಕೆಲಸಕ್ಕೆಂದು ಬಂದವರು ಮಾತಿಗೆ ಸಿಕ್ಕಿದರು.
ಡಾ. ರೆಡ್ಡಿ ಅವರು ಚಿತ್ರದುರ್ಗದಲ್ಲಿ ಜಿಯೋ ರೈನ್ ವಾಟರ್ ಬೋರ್ಡ್ ಎಂಬ ಸಂಸ್ಥೆಯ ಆರಂಭಿಸುವ ಮೂಲಕ ಮೂರು ದಶಕದಲ್ಲಿ ಆಂತರ್ಜಲ ಸಂಶೋಧನೆ ಮೂಲಕ ಭೂ ವೈeನಿಕವಾಗಿ ಜಿಯೋ ಫಿಸಿಕಲ್ ಉಪಕರಣಗಳ ಮೂಲಕ ಅಂತರ್ಜಲ ಪತ್ತೆ ಹಚ್ಚುವ ಮೂಲಕ ಸರಕಾರದ ವಿವಿಧ ಇಲಾಖೆಗಳಲ್ಲಿ ಸುಮಾರು 25ಸಾವಿರ ಕೊಳವೆ ಬಾವಿ ತೋಡಿಸಿ ಭೂಮಿಯ ಆಳದಲ್ಲಿರುವ ನೀರು ತೆಗೆಯುವ ಕೆಲಸ ಮಾಡಿದ್ದರು. 70-80ರ ದಶಕದಲ್ಲಿ ಕೊಳವೆ ಬಾವಿ ತೋಡಿದಾಗ ಸಾಕಷ್ಟು ಪ್ರಮಾಣದಲ್ಲಿ ನೀರು ಲಭ್ಯವಾಗಿತ್ತು. ಕ್ರಮೇಣ ಅಂತರ್ಜಲ ಕುಸಿತವಾಗಿ ಮೂರು ಸಾವಿರ ಅಡಿ ಕೊರೆಯುವಂತಾಗಿದೆ. ಸಾಕಷ್ಟು ಕೊಳವೆ ಬಾವಿ ತೋಡಿದ ಪರಿಣಾಮ ಈಗ ನೀರಿಗಾಗಿ ಗಣಿಗಾರಿಕೆ ನಡೆಯುವಂತಾಗಿದೆ.
ಇಡೀ ದೇಶದಲ್ಲಿಯೇ ಕೊಳವೆ ಬಾವಿ ಮೂಲಕ ನೀರನ್ನು ತೆಗೆಯುವ ತಂತ್ರ ನ ಆಳವಡಿಸಿಕೊಂಡ ಮೊದಲ ರಾಜ್ಯ ಕರ್ನಾಟಕ. 33ಮಿಲಿಯನ್ ಕೊಳವೆ ಬಾವಿ ರಾಜ್ಯದಲ್ಲಿ ಕೊಳವೆ ಬಾವಿ ತೋಡಲಾಗಿದ್ದು ಆಕಾಶದ ನಕ್ಷತ್ರಕ್ಕೆ ಹೋಲಿಸುವಂತಾಗಿದೆ. ಪ್ರಪಂಚದಲ್ಲಿ ಕೊಳವೆ ಬಾವಿ ಮೂಲಕ ಅತಿ ಹೆಚ್ಚು ಅಂತರ್ಜಲ ಬಗಿಯುತ್ತಿರುವ ರಾಷ್ಟ್ರ ಭಾರತ. ಭವಿಷ್ಯದ ದೃಷ್ಟಿಯಲ್ಲಿ ಇದು ತುಂಬ ಅಪಾಯಕಾರಿ ಬೆಳವಣಿಗೆ. ದಕ್ಷಿಣ ಕನ್ನಡದಲ್ಲಿ ಮೂರು ಸಾವಿರ ಮಿ.ಮೀ. ನೀರು ಸಿಕ್ಕಿದರೂ ಇಲ್ಲಿ ನೀರಿನ ಅಭಾವ ಹೆಚ್ಚು. ಜಿಲ್ಲೆಯ ಬೆಳ್ತಂಗಡಿಯ ಪೂಂಜಾಲಕಟ್ಟೆಯ ಕೃಷಿಕರೊಬ್ಬರು 4.5ಎಕರೆ ಕೃಷಿ ಭೂಮಿಗಾಗಿ 18ಕೊಳವೆ ಬಾವಿ ತೋಡಿಸಿದ್ದನ್ನು ಗಮನಿಸಿದಾಗ ಇಲ್ಲಿನ ಅಂತರ್ಜಲ ಕುಸಿತ ಯಾವ ಮಟ್ಟಿಗೆ ಇದೆ ಎಂಬುದನ್ನು ಮನಗಾಣಬಹುದು.
ದಕ್ಷಿಣ ಕನ್ನಡದಲ್ಲಿ ಕೊಳವೆ ಬಾವಿ ತೋಡಿದಾಗ 90ಶೇ. ವಿಫಲವಾಗಲು ಕಾರಣ ಅಂಜರ್ತಲ ಕುಸಿತ. ಇಲ್ಲಿನ ಭೂಮಿ ಕೊಳವೆ ಬಾವಿ ಹೇಳಿದ್ದಲ್ಲ. ಯಾಕೆಂದರೆ ಇತರ ಭಾಗದ ಭೂಮಿಯಂತೆ ಇಲ್ಲ. ಇಲ್ಲಿರುವುದು ಗ್ರಾನೆಟಿಕ್ ರಾಕ್. ಅದರಲ್ಲಿ ಟೊಳ್ಳು ಪದರ ವಲಯ ಇಲ್ಲ. ಹಾಗಾಗಿ ಮೂರು ಸಾವಿರ ಮಿ.ಮೀ. ಮಳೆ ಬಂದರೂ ಕೊಳವೆ ಬಾವಿ ತೋಡಿದಾಗ ನೀರು ಸಿಗದೆ ವಿಫಲವಾಗುತ್ತಿದೆ. ಕಲ್ಲಿನ ಸೀಳಿನಲ್ಲಿ ಸಂಗ್ರಹವಾಗಿರುವ ಅಂತರ್ಜಲ ತಕ್ಷಣ ಹೆಚ್ಚಿಸಲು ಕೊಳವೆಬಾವಿಗೆ ಜಲಮರುಪೂರಣ ಮಾಡುವುದೇ ಉಳಿದಿರುವ ದಾರಿ.
ಕೊಳವೆ ಬಾವಿಗಳಿಗೆ ಜಲಮರುಪೂರಣ ನಿರ್ಮಾಣ ವ್ಯವಸ್ಥೆ ಬಲು ಸುಲಭ. ಕೊಳವೆ ಬಾವಿ ಸುತ್ತಲೂ ಒಂದು ಇಂಗು ಗುಂಡಿ ರಚಿಸಬೇಕು. ಆರು ಮಿ. ಮೀ. ಗಾತ್ರದ ಎಂಟು ಅಡಿ ಆಳ, ಎಂಟು ಅಡಿ ಉದ್ದ ಹಾಗೂ ಎಂಟು ಆಡಿ ಅಗಲ ಇರಬೇಕು. ಗಾತ್ರದಲ್ಲಿ ಹೆಚ್ಚು ಕಮ್ಮಿ ಆದರೂ ಅಡ್ಡಿಯಿಲ್ಲ. ನಂತರ ಒಂದು ಕೇಸಿಂಗ್ ಪೈಪ್‌ಗೆ 100ರಿಂದ 120ರಂಧ್ರ ಮಾಡಬೇಕು. ಅದಕ್ಕೆ ಉತ್ತಮ ಗುಣಮಟ್ಟದ ಬ್ರಾಂಡೆಡ್ ಮೂರು ಫಿಲ್ಟರ್ ಹಾಕಬೇಕು. ಯಾವುದೇ ಕಾರಣಕ್ಕೂ ಮಾರುಕಟ್ಟೆಯಲ್ಲಿರುವ ಸೊಳ್ಳೆ ಪರದೆ ಬಳಸಬಾರದು. ಅದನ್ನು ಬಳಸಿದರೆ ಗೆದ್ದಲು ನಾಶಮಾಡುತ್ತದೆ. ಆ ಬಳಿಕ ಇಂಗುಗುಂಡಿಗೆ ದಪ್ಪದ ಕಲ್ಲು ಅರ್ಧದಷ್ಟು ತುಂಬಬೇಕು. ಅದರ ಮೇಲೆ 40ಎಂಎಂ ಕಲ್ಲನ್ನು ಒಂದು ಅಡಿ ಎತ್ತರಕ್ಕೆ ಹಾಕಬೇಕು. ಅದರ ಮೇಲೆ 20ಎಂಎಂ ಕಲ್ಲು ಒಂದು ಅಡಿ ಎತ್ರರಕ್ಕೆ ಹಾಕಬೇಕು. ಅದರ ಎಚ್‌ಡಿಪಿ ನೆಟ್ ಹಾಸಿ ಆದರ ಮೇಲ್ಭಾಗದಲ್ಲಿ ಇದ್ದಿಲು ಬಳಸಬೇಕು. ಮೇಲ್ಭಾಗದಲ್ಲಿ ಮರಳು ಅಥವಾ 6ಎಂಎಂ ಗಾತ್ರದ ಜಲ್ಲಿಕಲ್ಲು ಬಳಸಬಹುದು.
ಕೃಷಿಭೂಮಿ, ರೂಫ್ ಟಾಪ್‌ನಿಂದ ಬೀಳುವ ನೀರು ಸೇರಿದಂತೆ ನೇರವಾಗಿ ಇಂಗು ಗುಂಡಿಗೆ ಬಿಡುವ ಕೆಲಸ ಮಾಡಿದರೆ ಇಲ್ಲಿ ಬರುವಂತಹ ಮಳೆಗೆ ಒಂದು ಎಕರೆ ಪ್ರದೇಶದಲ್ಲಿ ಎರಡು ಕೋಟಿ ಲೀ. ನೀರು ದೊರಕುವುದರಲ್ಲಿ ಸಂಶಯವಿಲ್ಲ. ಪ್ರತಿಯೊಬ್ಬ ರೈತರು ಕೊಳವೆ ಬಾವಿ ತೋಡಿದ ನಂತರ ಇಂತಹ ಜಲಮರುಪೂರಣ ಕಾರ್ಯ ಮಾಡಿದರೆ ನೀರಿಗೆ ಎಂದಿಗೂ ಬರ ಎದುರಾಗದು. ಇದು ಸುಲಭ ವಿಧಾನ. ಅಂತರ್ಜಲ ವೃದ್ಧಿಸುವ ಸರಳ ತಾಂತ್ರಿಕತೆ ಇದು.ಇಂತಹ ಕೆಲಸ ಮಾಡಿದ ಕಾರಣ ಐದು ಸಾವಿರ ಕೊಳವೆ ಬಾವಿಯನ್ನು ಉದ್ಯೋಗ ಖಾತರಿ ಯೋಜನೆಯಲ್ಲಿ ಮಾಡಿದ್ದಕ್ಕೆ ಚಿತ್ರದುರ್ಗ ಜಿಲ್ಲಾ ಪಂಚಾಯಿತಿಗೆ ರಾಷ್ಟ್ರಪ್ರಶಸ್ತಿ ಸಿಕ್ಕಿದೆ. ಹಾಗೆಯೇ ಕೇಂದ್ರ ಸರಕಾರದ ಮಿನಿಸ್ಟರಿ ಆಫ್ ವಾಟರ್
ರಿಸೋರ್ಸ್ ಕಳೆದ ಬಾರಿ ನೀರು ಉಳಿಸುವ ಕುರಿತಾದ ‘ಜಲ್ ಬಚಾವೊ- ವಿಡಿಯೋ ಬನಾವೋ- ಪುರಸ್ಕಾರ್ ಪಾವೊ ಸ್ಪರ್ಧೆಯಲ್ಲಿ ಪಾಲ್ಗೊಂಡ ಡಾ. ದೇವರಾಜ ರೆಡ್ಡಿ ಅವರಿಗೆ ರಾಷ್ಟ್ರಪ್ರಶಸ್ತಿ ಸಿಕ್ಕಿದೆ. ಈ ತಂತ್ರeನಕ್ಕೆ ದೇಶ ವಿದೇಶದಲ್ಲಿ ಹೆಚ್ಚಿನ ಬೇಡಿಕೆ ಸಿಕ್ಕಿದೆ.
ನೀರನ್ನು ಮುಂದಿನ ಪೀಳಿಗೆಗೆ ಹಿಡಿದಿಡುವ ಮಹತ್ತರ ಕೆಲಸ ಆಗಬೇಕಿದ್ದು ಬತ್ತಿಹೋದ ಕೊಳವೆ ಬಾವಿಗಳಿಗೆ ಮತ್ತೆ ಜೀವ ತುಂಬಿಸುವ ಜಲ ಮರುಪೂರಣ ಮಾಡುತ್ತಿದ್ದು ಮಳೆನೀರನ್ನು ಸಂಗ್ರಹಿಸುವ ಮೂಲಕ ಭೂಮಿಯ ನೀರಿನ ಮಟ್ಟ ಹೆಚ್ಚಿಸುವ ತಂತ್ರವನ್ನು ಕಾರ್ಯರೂಪಕ್ಕೆ ತರುವಲ್ಲಿ ರೈತರೊಂದಿಗೆ ಸಹಕರಿಸುತ್ತಿದ್ದಾರೆ ಬತ್ತಿದ ಕೊಳವೆಬಾವಿಯಲ್ಲಿ ಗಂಗೆ ಉಕ್ಕಬೇಕು ಎಂಬುವುದು ಅವರ ಮಹದಾಸೆ.
*ದಕ್ಷಿಣ ಕನ್ನಡ ಜಿಲ್ಲೆಯ ಜನರು ಬುದ್ಧಿವಂತರು. ಸಾಕಷ್ಟು ಮಳೆ ಬರುತ್ತದೆ, ನೀರಿನ ಕ್ಷಾಮ ಬಾರದು ಎಂಬ ನಂಬಿಕೆಯಲ್ಲಿದ್ದಾರೆ. ಯಾಕೆ ಇಂಗಿಸಬೇಕು ಎಂದರೆ ಇಲ್ಲಿ ಅಂತರ್ಜಲ ಕುಸಿದಿದ್ದು ಇಲ್ಲಿ ನೀರಿನ ಸಂರಕ್ಷಣೆಗೆ ಬಹಳಷ್ಟು ದಾರಿ ಇದೆ. ಮಳೆನೀರು ಕೊಯ್ಲು ಮಾಡಬೇಕು. ಜಲಮರುಪೂರಣ ಮಾಡಬಹುದು. ನದಿ ಸೇರಿದಂತೆ ಇಲ್ಲಿನ ಜಲದ ಮೂಲ ಬರಿದಾಗುತ್ತಿರುವಾಗ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಯೊಬ್ಬರು ಯುದ್ಧೋಪಾದಿಯಲ್ಲಿ ನೀರಿನ ರಕ್ಷಣೆ ಮಾಡಬೇಕು. ನೀರು ಮಾರಾಟದ ವಸ್ತುವಾಗಬಾರದು ಅಂದ್ರೆ ಓಡೋ ನೀರನ್ನು ನಡೆಯುವಂತೆ, ನಡೆಯುವ ನೀರನ್ನು ನಿಲ್ಲುವಂತೆ, ನಿಲ್ಲೋ ನೀರನ್ನು ಭೂಮಿಗೆ ಇಂಗುವಂತೆ ಮಾಡಿದರೆ ಮಾತ್ರ ಜಿಲ್ಲೆಯ ನೀರಿನ ಸಮಸ್ಯೆ ನೀಗಲು ಸಾಧ್ಯ.
ಡಾ. ಎನ್.ಜೆ. ದೇವರಾಜ ರೆಡ್ಡಿ
ಖ್ಯಾತ ಜಲತಜ್ಞರು

*ಹನ್ನೆರಡು ವರ್ಷದ ಹಿಂದೆ ಇಲ್ಲಿನ ಭೂಮಿಯನ್ನು ಖರೀದಿಸಿ ಅಭಿವೃದ್ಧಿ ಪಡಿಸಿ ಹಲವು ಬಗೆಯ ಹಣ್ಣು, ತೆಂಗು ಸೇರಿದಂತೆ ಬಗೆ ಬಗೆಯ ಕೃಷಿ ಮಾಡುತ್ತಿದ್ದೇವೆ. ಆರಂಭದ ದಿನಗಳಲ್ಲಿ ಕೊಳವೆ ಬಾವಿ ತೋಡಿದ್ದು ನಾಲ್ಕು ವರ್ಷ ನೀರಿನ ಅಭಾವ ಎದುರಾಗಲಿಲ್ಲ. ಬಳಿಕ ನಾಲ್ಕು ಕೊಳವೆ ಬಾವಿ ತೋಡಿದ್ದೇವೆ. ಈಗ ಸಮಸ್ಯೆ ವಿಪರೀತವಾಗಿದ್ದು ಇರುವ ಕೊಳವೆ ಬಾವಿಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಡಾ. ರೆಡ್ಡಿ ಅವರ ತಂತ್ರeನದ ಸಹಾಯದಿಂದ ಜಲಮರುಪೂರಣ ವ್ಯವಸ್ಥೆ ಮಾಡುತ್ತಿದ್ದೇವೆ.
ಕಿರಣ್ ಕುಮಾರ್ ಶೆಟ್ಟಿ
ಉದ್ಯಮಿ


